` rishab shetty - chitraloka.com | Kannada Movie News, Reviews | Image

rishab shetty

  • ಸಿಂಹ ನಿನ್ನ ತೋಳಿನಲ್ಲಿ ಕಂದಾ ನಾನು.. ಹರಿಪ್ರಿಯಾ ಮರ್ಮ

    ಸಿಂಹ ನಿನ್ನ ತೋಳಿನಲ್ಲಿ ಕಂದಾ ನಾನು.. ಹರಿಪ್ರಿಯಾ ಮರ್ಮ

    ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇಬ್ಬರೂ ಮದುವೆಯಾಗುತ್ತಿದ್ದಾರೆ. ಇಬ್ಬರ ಮಧ್ಯೆ ಪ್ರೀತಿಯೂ ಅರಳಿ ಹೂವಾಗಿದೆ. ಎಂಗೇಜ್‍ಮೆಂಟ್ ಕೂಡಾ ಫಿಕ್ಸ್ ಆಗಿದೆ. ದುಬೈನಲ್ಲಿ ಶಾಪಿಂಗ್ ಕೂಡಾ ಅಗಿದೆ.. ಈ ರೀತಿಯ ಎಲ್ಲ ಸುದ್ದಿಗಳೂ ಕಳೆದ ದಿನಗಳಿಂದ ಹರಿದಾಡಿದ್ದವು. ಹರಿಪ್ರಿಯಾ ಇದನ್ನು ಸುಳ್ಳು ಎಂದು ಹೇಳಿರಲಿಲ್ಲ. ಸತ್ಯ ಎಂದೂ ಒಪ್ಪಿರಲಿಲ್ಲ. ಪ್ರತಿಕ್ರಿಯೆಗೂ ಸಿಕ್ಕಿರಲಿಲ್ಲ ಅತ್ತ ವಸಿಷ್ಠ ಸಿಂಹ ಕಾಲಾಯ ತಸ್ಮೈ ನಮಃ ಎಂದಷ್ಟೇ ಉತ್ತರ ಕೊಟ್ಟಿದ್ದರು. ಈಗ ಒಂದು ಪೋಸ್ಟ್ ಹೊರಬಿದ್ದಿದೆ. ಸಿಂಹವೊಂದು ಮಗುವನ್ನು ಎತ್ತಿಕೊಂಡಿರುವ ಫೋಟೋ ಹಾಕಿರುವ ಹರಿಪ್ರಿಯಾ ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು.. ಎಂದು ಬರೆದುಕೊಂಡಿದ್ದಾರೆ.

    ಕ್ರಿಯೇಟಿವಿಟಿಯೇನೋ ಮಸ್ತ್ ಮಸ್ತ್. ಆದರೆ ಹರಿಪ್ರಿಯಾ ಇಲ್ಲಿಯೂ ಗುಟ್ಟು ಬಿಟ್ಟಿಲ್ಲ. ಮಾರ್ಮಿಕ ಸಂದೇಶ ಕೊಟ್ಟಿದ್ದಾರೆ. ವಸಿಷ್ಠ ಸಿಂಹ ಅವರೇನಾದರೂ ಕನ್‍ಫರ್ಮ್ ಮಾಡಿದ್ದಾರಾ.. ನೋ.. ಕಾಲಾಯ ತಸ್ಮೈ ನಮಃ.

    ಅಭಿಮಾನಿಗಳೇ ತಮಗೆ ಬೇಕಾದಂತೆ ಊಹಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.

    ಅಭಿನಂದನೆಗಳು ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ

    ನಿಮ್ಮ ಕಲ್ಪನೆ ಮತ್ತು ಹೋಲಿಕೆ ಸೂಪರ್’

    ಇದು ಕ್ರಿಯೇಟಿವಿಯ ಪರಮಾವಧಿ. ಇಂತಹ ಐಡಿಯಾಗಳು ನಿಮಗೆ ಎಲ್ಲಿಂದ ಬರುತ್ತೆ

    ಸಿಂಹ ಮತ್ತು ಚಿನ್ನ.. ಎರಡೂ ಚೆಂದ . ವಸಿಷ್ಠ ಸಿಂಹನ ತೋಳಿನಲ್ಲಿ ಚಿನ್ನದಂತಹ ಮಗು ಹರಿಪ್ರಿಯಾ

    ಲಕ್ಷ್ಮೀ ನರಸಿಂಹ ನಮ್ಮ ಮನೆದೇವರು. ನರಸಿಂಹ ಅಂದ್ರೆ ವಿಷ್ಣು. ವಿಷ್ಣು ಅಂದ್ರೆ ಹರಿ. ಹರಿಪ್ರಿಯಾ ಅಂದ್ರೆ ವಿಷ್ಣು ಪ್ರಿಯ. ಹರಿಪ್ರಿಯಾ ಸಿಂಹನಿಗೆ ದೊರಕಿರುವುದು ಎಂದರೆ ಹರಿಗೆ ಪ್ರಿಯಾ ದೊರಕಿದಂತೆ. ಹರಿಪ್ರಿಯಾ ಹರಿಗೆ ಸಿಕ್ಕಿರೋದು ನಿಮ್ಮ ಪುಣ್ಯ ಮೇಡಂ. ನಿಮ್ಮಿಬ್ಬರ ಬದುಕು ಸುಖಮಯವಾಗಿರಲಿ - ಇಂತಿ ನಿಮ್ಮ ಅಭಿಮಾನಿ’’,

    ಸಿಂಹದ ಮರಿ

    ವಸಿಷ್ಠ ‘ಸಿಂಹ’ನ ಕೈಹಿಡಿದ ಹರಿ ಪ್ರಿಯಾ

    ವಸಿಷ್ಠ ಸಿಂಹನ ಪಾಲಿಗೆ ಹರಿಪ್ರಿಯಾ ಮುದ್ದು ಮಗು

    ಹೀಗೆಲ್ಲ ಅಭಿಮಾನಿಗಳು ಊಹೆ ಮಾಡಿ, ಥ್ರಿಲ್ ಆಗಿ ಶುಭ ಕೋರುತ್ತಿದ್ದರೆ ಸಿಂಹದ ಮಡಿಲಲ್ಲಿರುವ ಕಂದಾ.. ಅಭಿಮಾನಿಗಳ ಉತ್ತರಗಳನ್ನು ಎಂಜಾಯ್ ಮಾಡುತ್ತಿದೆ.

  • ಸೆಪ್ಟೆಂಬರ್ 30ಕ್ಕೆ ಕಾಂತಾರ ವರ್ಸಸ್ ತೋತಾಪುರಿ

    ಸೆಪ್ಟೆಂಬರ್ 30ಕ್ಕೆ ಕಾಂತಾರ ವರ್ಸಸ್ ತೋತಾಪುರಿ

    ಇಬ್ಬರು ಸ್ಟಾರ್ ನಟರ ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗುವುದು ಹೊಸದಲ್ಲ. ಈಗದು  ವಿಶೇಷವೂ ಅಲ್ಲ. ಏಕೆಂದರೆ ಪ್ರೇಕ್ಷಕರ ಮುಂದೆ ಆಯ್ಕೆಗಳಿರುತ್ತವೆ. ಈ ಬಾರಿ ದಸರಾಗೆ ಕೂಡಾ ಹಾಗೆಯೇ ಆಗುತ್ತಿದೆ. ಸೆಪ್ಟೆಂಬರ್ 30ರಂದು ರಿಷಬ್ ಶೆಟ್ಟಿ ಮತ್ತು ಜಗ್ಗೇಶ್ ಚಿತ್ರಗಳು ಮುಖಾಮುಖಿಯಾಗುತ್ತಿವೆ.

    ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರಾ ಚಿತ್ರಕ್ಕೆ ಹೊಂಬಾಳೆ ಬ್ಯಾನರ್ ಬಂಡವಾಳ ಹೂಡಿದೆ. ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಪ್ರಮುಖ   ಪಾತ್ರದಲ್ಲಿ ನಟಿಸಿರುವ ಸಿನಿಮಾ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಬಂದ ಸಿಂಗಾರ ಸಿರಿಯೇ.. ಸಿನಿರಸಿಕರಿಗೆ ರಸಿಕತೆಯ ಕರಾವಳಿ ಅನುಭವ ಕೊಟ್ಟಿದೆ. ಈ ಶಿಕ್ಷಕರ ದಿನಾಚರಣೆ ದಿನ ಕಾಂತಾರ ಚಿತ್ರದ ಟ್ರೇಲರ್ ಹೊರಬೀಳಲಿದೆ.

    ಅದೇ ದಿನ ರಿಲೀಸ್ ಆಗುತ್ತಿರುವ ಸಿನಿಮಾ ತೋತಾಪುರಿ. ಈಗಾಗಲೇ ಬಾಗ್ಲು ತೆಗಿ ಮೇರಿ ಜಾನ್.. ಸೇರಿದಂತೆ ಚಿತ್ರದ ಹಾಡು ಮತ್ತು ಚೇಷ್ಟೆಗಳನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಜಗ್ಗೇಶ್, ಆದಿತಿ ಪ್ರಭುದೇವ, ಡಾಲಿ ಧನಂಜಯ, ಸುಮನ್ ರಂಗನಾಥ್, ದತ್ತಣ್ಣ, ಪವಿತ್ರಾ ಲೋಕೇಶ್ ಪ್ರಮುಖ ಪಾತ್ರದಲ್ಲಿರೋ ಚಿತ್ರದ ಮೇಲೆ ಭಾರಿ ನಿರೀಕ್ಷೆಯೂ ಇದೆ. ವಿಜಯ ಪ್ರಸಾದ್ ನಿರ್ದೇಶನದ ತೋತಾಪುರಿಯನ್ನು ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿದೆ. ಕೆ.ಎ.ಸುರೇಶ್ ನಿರ್ಮಾಣದ ಚಿತ್ರವೂ ಸೆ.30ರಂದೇ ರಿಲೀಸ್ ಆಗುತ್ತಿದ

  • ಹೀರೋ ನಾನಲ್ಲ, ನಮ್ ಟೀಮೂ ಅಲ್ಲ - ರಿಷಬ್ ಶೆಟ್ಟಿ

    ಹೀರೋ ನಾನಲ್ಲ, ನಮ್ ಟೀಮೂ ಅಲ್ಲ - ರಿಷಬ್ ಶೆಟ್ಟಿ

    ಹೀರೋ ಶೂಟಿಂಗ್ ಆಗಿದ್ದು ಲಾಕ್ ಡೌನ್ ರೂಲ್ಸ್ ಸ್ವಲ್ಪ ರಿಲ್ಯಾಕ್ಸ್ ಆದ ಟೈಮ್ನಲ್ಲಿ. ಶೂಟಿಂಗ್ ಸ್ಪಾಟ್ನಲ್ಲಿ ಕಡಿಮೆ ಜನ ಇರಬೇಕು, ಸ್ಯಾನಿಟೈಸೇಷನ್, ಸಾಮಾಜಿಕ ಅಂತರ ಎಲ್ಲವನ್ನೂ ಕಡ್ಡಾಯವಾಗಿ ಪಾಲಿಸುತ್ತಿದ್ದ ಟೈಂನಲ್ಲಿ ಶೂಟಿಂಗ್ ಆದ ಸಿನಿಮಾ ಹೀರೋ.

    ಒಂದು ರಾತ್ರಿಯ ಕಥೆ ಓಕೆ ಆಗಿದ್ದು ಒಂದೇ ದಿನದಲ್ಲಾದರೂ ಚಿತ್ರೀಕರಣವನ್ನೂ ಒಂದೇ ದಿನ ಮಾಡೋದು ಸಾಧ್ಯವಿಲ್ಲವಲ್ಲ. ಹೀಗಾಗಿ ಬೇಲೂರು ಸಮೀಪದಲ್ಲಿ ನಡೆದ ಚಿತ್ರೀಕರಣ ಸತತವಾಗಿ ನಡೆದದ್ದು 43 ದಿನ. ಆ 43 ದಿನದಲ್ಲಿ ಚಿತ್ರೀಕರಣದಲ್ಲಿದ್ದ ಯಾರೊಬ್ಬರೂ ಹೊರಗೆ ಹೋಗಲಿಲ್ಲ. ಟೀಂಗೆ ಆಗಾಗ್ಗೆ ಚೇಂಜ್ ಮಾಡಬೇಕಿದ್ದ ಕೇಬಲ್ಸ್, ಲೈಟಿಂಗ್ಸ್ ವಸ್ತುಗಳನ್ನು ನೋಡಿಕೊಂಡು ತರಿಸಿಕೊಳ್ಳಲಾಗ್ತಿತ್ತು. ಉಳಿದಂತೆ ಊಟ, ತಿಂಡಿ ವ್ಯವಸ್ಥೆಗೆ ಹೋಗಿ ಬರುತ್ತಿದ್ದವರು ಒಬ್ಬರು ಮಾತ್ರ. ಊರಿನಿಂದ ಸುಮಾರು 6 ಕಿ.ಮೀ.ಒಳಗಿನ ಕಾಡಿನಲ್ಲಿ ನಡೆದ ಚಿತ್ರೀಕರಣ ಅದು. ಉಳಿದಂತೆ ಇಡೀ ಟೀಂ ಜೊತೆ ಹೊರಗಿನಿಂದ ಸಂಪರ್ಕದಲ್ಲಿದ್ದವರು ಶೈನ್ ಶೆಟ್ಟಿ ಮಾತ್ರ.

    ನಾನಲ್ಲ.. ಡೈರೆಕ್ಟರ್ ಅಲ್ಲ.. 24 ಜನರ ಟೀಮೂ ಅಲ್ಲ. ರಿಯಲ್ ಹೀರೋಗಳು ನಾವ್ಯಾರೂ ಅಲ್ಲ. ನಾವು ಕಾಡಿನಲ್ಲಿರುವಾಗ ಅಷ್ಟೂ ದಿನ ಆತಂಕದಲ್ಲಿಯೇ ಇದ್ದರೂ, ಅದನ್ನು ನಮಗೆ ತಿಳಿಸದೆ ಕಾಯ್ದ ನಮ್ಮ ಕುಟುಂಬ ಸದಸ್ಯರು. ನಮ್ಮ ಕುಟುಂಬದವರೇ ರಿಯಲ್ ಹೀರೋಗಳು ಎಂಬರ್ಥದಲ್ಲಿ ಹೇಳಿದ್ದಾರೆ ರಿಷಬ್ ಶೆಟ್ಟಿ.

    ಹೆಚ್ಚೂ ಕಡಿಮೆ 150 ಜನರ ಕೆಲಸವನ್ನು ಕೇವಲ 24 ಜನ ಮಾಡಿದ್ದೇವೆ. ಎಲ್ಲರೂ ತಂತ್ರಜ್ಞರೇ. ಅಗತ್ಯ ಬಿದ್ದಾಗ ಕೂಲಿಗಳೂ ಆಗಿದ್ದೇವೆ. ಹೀಗಾಗಿ ನಮ್ಮ ತಂಡದ ಎಲ್ಲರೂ ಈ ಚಿತ್ರದಲ್ಲಿ ಹೀರೋಗಳೇ ಎಂದು ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳ್ತಾರೆ ರಿಷಬ್ ಶೆಟ್ಟಿ. ಅವರ ಹೆಮ್ಮೆಯ ಚಿತ್ರವೀಗ ಚಿತ್ರಮಂದಿರಗಳಲ್ಲಿದೆ.

  • ಹೀರೋ ಶೆಟ್ರಿಗೆ ಕಥೆ ಸಿಕ್ಕೇಬಿಡ್ತು. ಮುಂದಾ..

    ಹೀರೋ ಶೆಟ್ರಿಗೆ ಕಥೆ ಸಿಕ್ಕೇಬಿಡ್ತು. ಮುಂದಾ..

    ರಿಕ್ಕಿ, ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ..ಯಂತಾ ದಂತಾ ವಿಭಿನ್ನ ಕಥೆಗಳ ಸಿನಿಮಾ ಮಾಡಿ ಗೆದ್ದ ರಿಷಬ್ ಶೆಟ್ಟಿ, ಕಥಾ ಸಂಗಮದಂತಾ ಪ್ರಯೋಗದಲ್ಲೂ ಸಕ್ಸಸ್ ಕಂಡವರು. ಮತ್ತೊಂದೆಡೆ ಬೆಲ್ ಬಾಟಂ, ಹೀರೋ ಚಿತ್ರಗಳ ಮೂಲಕ ಹೀರೋ ಆಗಿಯೂ ಯಶಸ್ಸು ಕಂಡ ರಿಷಬ್ ಶೆಟ್ಟಿ, ಈಗ ಹೊಸ ಕಥೆಗೆ ರೆಡಿಯಾಗಿದ್ದಾರೆ.

    ಹೇಳೋಕ್ ಒಂದು ಕಥೆ ಸಿಕ್ಕಾಯ್ತು. ಇನ್ನು ಮಾಡೋದೊಂದು ಬಾಕಿ ಅನ್ನೋ ಮೆಸೇಜ್ ತೇಲಿಬಿಟ್ಟಿದ್ದಾರೆ ರಿಷಬ್ ಶೆಟ್ಟಿ. ಈ ಬಾರಿ ಅವರು ಪ್ರಕೃತಿ ಮತ್ತು ಮನುಷ್ಯರ ನಡುವಿನ ಸಂಘರ್ಷದ ಕಥೆ ಹೇಳಲಿದ್ದಾರಂತೆ. ಸದ್ಯಕ್ಕೆ ಚಿತ್ರಕಥೆ ಫೈನಲ್ ಹಂತದಲ್ಲಿದೆ. ಕಲಾವಿದರು ಯಾರು ಅನ್ನೋದನ್ನೂ ಫೈನಲ್ ಮಾಡಿಲ್ಲ. ಎಲ್ಲವೂ ಪಕ್ಕಾ ಆದರೆ ಸೆಪ್ಟೆಂಬರ್ ಹೊತ್ತಿಗೆ ಸಿನಿಮಾ ಚಿತ್ರೀಕರಣ ಶುರು ಎಂದಿದ್ದಾರೆ ರಿಷಬ್ ಶೆಟ್ಟಿ.

    ಸದ್ಯಕ್ಕೆ ರುದ್ರಪ್ರಯಾಗ ಸಿನಿಮಾವನ್ನು ಮುಂದಕ್ಕೆ ಹಾಕಿದ್ದಾರೆ. ಹರಿಕಥೆ ಅಲ್ಲ ಗಿರಿಕಥೆ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದರೆ, ಜಯತೀರ್ಥ ಜೊತೆಗಿನ ಬೆಲ್‍ಬಾಟಂ 2, ಲಾಫಿಂಗ್ ಬುದ್ದ ಶುರುವಾಗಬೇಕಿದೆ.

  • ಹುಟ್ಟುಹಬ್ಬಕ್ಕೆ ರಿಷಬ್ ಶೆಟ್ಟಿ ಪ್ಲಾನ್

    ಹುಟ್ಟುಹಬ್ಬಕ್ಕೆ ರಿಷಬ್ ಶೆಟ್ಟಿ ಪ್ಲಾನ್

    ಜುಲೈ 7ನೇ ತಾರೀಕು. ಬೆಂಗಳೂರಿನ ನಂದಿನಿ ಲಿಂಕ್ ಗ್ರೌಂಡ್. ಮಧ್ಯಾಹ್ನ 3 ಗಂಟೆ. ರಿಷಬ್ ಶೆಟ್ಟಿ ಬರ್ತಾರೆ. ಅಭಿಮಾನಿಗಳಿಗಾಗಿ..ಅಭಿಮಾನಿಗಳಿಗೋಸ್ಕರ.  ಇಷ್ಟು ದಿನ ಕುಟುಂಬದೊಟ್ಟಿಗೆ, ಆಪ್ತ ಗೆಳೆಯರು ಕೆಲವು ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ರಿಷಬ್ ಶೆಟ್ಟಿ ಈ ಬಾರಿ ಬೃಹತ್ ಆಗಿ ಭಾರಿ ಸಂಖ್ಯೆಯ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಜ್ಜಾಗಿದ್ದಾರೆ. ಹುಟ್ಟುಹಬ್ಬದ ನೆವದ ಮೂಲಕ ತಮ್ಮ ಅಭಿಮಾನಿಗಳನ್ನು ಭೇಟಿ ಆಗಲು ರಿಷಬ್ ಶೆಟ್ಟಿ ಮುಂದಾಗಿದ್ದಾರೆ.

    ತಮ್ಮ ಹುಟ್ಟುಹಬ್ಬದ ಆಚರಣೆ ಬಗ್ಗೆ ಪುಟ್ಟದೊಂದು ವಿಡಿಯೋ ಮಾಡಿರುವ ರಿಷಬ್ ಶೆಟ್ಟಿ  ”ಕೆರಾಡಿ ಎಂಬ ಸಣ್ಣ ಊರಿನಿಂದ ಸಿನಿಮಾ ಕನಸು ಕಟ್ಟಿಕೊಂಡು ಬಂದಿರುವ ನನಗೆ ಎಷ್ಟೆಲ್ಲ ಪ್ರೀತಿ ತೋರಿಸಿ ಇಲ್ಲಿಯವರೆಗೆ ಕರೆದು ಕೊಂಡು ಬಂದು ನಿಲ್ಲಿಸಿದ್ದೀರ. ನೀವು ಇಷ್ಟೆಲ್ಲ ಪ್ರೀತಿ ತೋರಿಸಿದಾಗ ಅದನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂಬುದೇ ನನಗೆ ಗೊತ್ತಾಗಲಿಲ್ಲ. ಆದರೆ ಕಾಂತಾರ ಬಿಡುಗಡೆ ಆದ ಬಳಿಕ ತುಂಬಾ ಜನ ನನ್ನ ಮನೆ ಹತ್ತಿರ ಬಂದಿದ್ದೀರ. ಹೋದ ಕಡೆಯೆಲ್ಲ ನನ್ನನ್ನು ಭೇಟಿ ಆಗಲು ಕಾದಿದ್ದೀರ.

    ಎಷ್ಟೋ ಜನರಿಗೆ ನನ್ನನ್ನು ಭೇಟಿ ಆಗಲು ಆಗಲಿಲ್ಲ. ಆದ್ದರಿಂದ ನನ್ನ ಹುಟ್ಟಿದ ದಿನ ಜುಲೈ 7ನೇ ತಾರೀಖು. ಬೆಂಗಳೂರಿನ ನಂದಿನಿ ಲಿಂಕ್ ಗ್ರೌಂಡ್ನಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಸಿಗೋಣ, ನಿಮ್ಮನ್ನು ಭೇಟಿ ಆಗಲು ನಾನು ಕಾಯುತ್ತಿರುತ್ತೀನಿ” ಎಂದಿದ್ದಾರೆ. ಆ ಮೂಲಕ ಕಾಂತಾರಕ್ಕೆ ಅಭೂತಪೂರ್ವ ಗೆಲುವು ತಂದುಕೊಟ್ಟ ಅಭಿಮಾನಗಳು ಹಾಗೂ ಪ್ರೇಕ್ಷಕರಿಗೆ ಧನ್ಯವಾದ ಹೇಳಲಿದ್ದಾರೆ.

  • ಹೆಡ್ ಬುಷ್ ರಿಲೀಸ್ ಬಳಿಕ ಕಾಂತಾರ ನೋಡಿದ ಡಾಲಿ

    ಹೆಡ್ ಬುಷ್ ರಿಲೀಸ್ ಬಳಿಕ ಕಾಂತಾರ ನೋಡಿದ ಡಾಲಿ

    ಕಾಂತಾರ 4ನೇ ವಾರದ ಹೊತ್ತಿಗೆ ರಿಲೀಸ್ ಆದ ಸಿನಿಮಾ ಹೆಡ್ ಬುಷ್. ಡಾಲಿ ಧನಂಜಯ್ ನಟಿಸಿದ್ದಷ್ಟೇ ಅಲ್ಲ, ನಿರ್ಮಾಪಕರೂ ಅವರೇ. ಕಾಂತಾರ ಸಿನಿಮಾ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದರೆ ಹೆಡ್ ಬುಷ್ ಸಿನಿಮಾ ಬಾಕ್ಸಾಫೀಸ್‍ನಲ್ಲಿ ಬೇರೆಯದೇ ತೆರನಾದ ಹವಾ ಎಬ್ಬಿಸಿದೆ. ಏಕೆಂದರೆ ಇದು ರೌಡಿಸಂ ಸಿನಿಮಾ. ಹೆಡ್ ಬುಷ್ ಬೆಂಗಳೂರಿನ ಮೊದಲ ಡಾನ್ ಜೈರಾಜ್ ಬಯೋಪಿಕ್. ಅಗ್ನಿ ಶ್ರೀಧರ್ ಚಿತ್ರಕಥೆ ಸಂಭಾಷಣೆ ಬರೆದಿರುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ಶೂನ್ಯ. ಡಾಲಿ, ಯೋಗಿ, ವಸಿಷ್ಠ ಸಿಂಹ ಎಲ್ಲರೂ ಅದ್ಭುತವಾಗಿ ನಟಿಸಿದ್ದು ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಡಾಲಿ ಧನಂಜಯ್ ಕಾಂತಾರ ನೋಡಿದ್ದಾರೆ.

    ಕಾಂತಾರ ನಿಜವಾಗಿಯೂ ಕನ್ನಡದ ಹೆಮ್ಮೆ. ಗೆಳೆಯ ರಿಷಬ್ ಶೆಟ್ಟಿ ಒಳಗಿರುವ ನಟ, ಅದ್ಭುತ ಬರಹಗಾರ, ನಿರ್ದೇಶಕನಿಗೆ ಬೆರಗಾದೆ. ಅಭಿಮಾನಿಯಾದೆ. ಸಪ್ತಮಿ ಗೌಡ ಅವರ ಮುಗ್ಧತೆ ಹಾಗೂ ಅಭಿನಯ ಇಷ್ಟವಾಯಿತು ಎಂದಿದ್ದಾರೆ. ಅಂದಹಾಗೆ ಸಪ್ತಮಿ ಗೌಡ ಮೊದಲ ಚಿತ್ರ ಡಾಲಿ ಎದುರು ನಟಿಸಿದ್ದ ಪಾಪ್ ಕಾನ್ರ್ಸ್ ಮಂಕಿ ಟೈಗರ್. ಕಾಂತಾರ ಬಿಡುಗಡೆಯಾದ ದಿನದಿಂದಲೂ ಹೆಡ್ ಬುಷ್ ಚಿತ್ರದ ಬಿಡುಗಡೆ ಕೆಲಸದಲ್ಲಿದ್ದೆ. ಹೀಗಾಗಿ ನೋಡೋಕೆ ಆಗಿರಲಿಲ್ಲ ಎಂದಿದ್ದಾರೆ ಡಾಲಿ.

    ಇಂತಹ ಕಥೆಗಳನ್ನು ಹುಡುಕಿ ಸಿನಿಮಾ ಮಾಡುತ್ತಿರುವ ಹೊಂಬಾಳೆಗೂ ತಮ್ಮ ಅಭಿನಂದನೆ ತಿಳಿಸಿದ್ದಾರೆ. ಕಾಂತಾರ ಈಗಾಗಲೇ ಹೊಸ ದಾಖಲೆ ಬರೆಯುತ್ತಿದ್ದು ಕೆಜಿಎಫ್ 2 ದಾಖಲೆಯನ್ನೂ ಅಳಿಸಿಹಾಕಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರ ಕನ್ನಡದಲ್ಲಿ ಅತೀ ಹೆಚ್ಚು ಜನ ನೋಡಿದ ಸಿನಿಮಾ ಎಂಬ ದಾಖಲೆ ಬರೆದಿತ್ತು. 75 ಲಕ್ಷ ಜನ ಕೆಜಿಎಫ್ ನೋಡಿದ್ದರು. ಅದನ್ನೂ ಮೀರಿಸಿ 77 ಲಕ್ಷ ವೀಕ್ಷಕರು ಕಾಂತಾರಕ್ಕೆ ಬಂದಿದ್ದಾರೆ. ದೇಶದ ಎಲ್ಲ ಚಿತ್ರರಂಗದ ದಿಗ್ಗಜರೂ ಕಾಂತಾರ ಸಿನಿಮಾ ನೋಡಿ ಮೆಚ್ಚಿದ್ದಾರೆ. ಈ ಮಧ್ಯೆ ಹೆಡ್ ಬುಷ್ ಕೂಡಾ ಉತ್ತಮ ಪ್ರದರ್ಶನ ಕಾಣುತ್ತಿದ್ದು, 2ನೇ ಸಿನಿಮಾದಲ್ಲೂ ಡಾಲಿ ಗೆದ್ದಿದ್ದಾರೆ.

  • ಹೇಗಿತ್ತು ವಿಶ್ವಸಂಸ್ಥೆಯಲ್ಲಿ ರಿಷಬ್ ಶೆಟ್ಟಿಯ ಕನ್ನಡ ಡಿಂಡಿಮ?

    ಹೇಗಿತ್ತು ವಿಶ್ವಸಂಸ್ಥೆಯಲ್ಲಿ ರಿಷಬ್ ಶೆಟ್ಟಿಯ ಕನ್ನಡ ಡಿಂಡಿಮ?

    ನಟ, ನಿರ್ದೇಶಕ ರಿಷಬ್ ಶೆಟ್ಟಿ ಜಿನಿವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಕನ್ನಡ ಡಿಂಡಿಮ ಮೊಳಗಿಸಿದ್ದಾರೆ. ಪರಿಸರ ಸಂರಕ್ಷಣೆ ಕುರಿತು ಕನ್ನಡದಲ್ಲಿಯೇ ಮಾತನಾಡಿದ್ದಾರೆ. ರಿಷಬ್ ಶೆಟ್ಟಿ ಏರಿದ ಎತ್ತರ, ಸಿಕ್ಕ ಮನ್ನಣೆ, ಪುರಸ್ಕಾರ ಅತ್ಯಂತ ಅಪರೂಪದ್ದು. ಅಲ್ಲಿ ರಿಷಬ್ ಶೆಟ್ಟಿ ಮಾತನಾಡಿದ್ದೇನು? ವಿವರ ಹೀಗಿದೆ.

    ಪರಿಸರ ಸಂರಕ್ಷಣೆಗಾಗಿ ಕಳೆದ ಒಂದು ದಶಕಕ್ಕಿಂತ ಹೆಚ್ಚು ಅವಧಿಯಿಂದ ತಳಮಟ್ಟ ದಿಂದ ಕಾರ್ಯನಿರ್ವಹಿಸುತ್ತಿರುವ ಭಾರತದ ಪ್ರತಿನಿಧಿಯಾಗಿ ನಾನು ಬಂದಿದ್ದೇನೆ. ಪರಿಸರವನ್ನು ಕಾಪಾಡುವುದು ಸದ್ಯದ ಅಗತ್ಯ. ಒಬ್ಬ ನಟ-ನಿರ್ದೇಶಕನಾಗಿ, ಪರಿಸರ ಕಾಳಜಿ, ಸಂರಕ್ಷಣೆ ಕುರಿತು ತಳಮಟ್ಟದಲ್ಲಿ ಪರಿಣಾಮ ಬೀರಬೇಕು ಎಂಬುದೇ ನನ್ನ ಉದ್ದೇಶ. ಪರಿಸರವನ್ನು ಕಾಪಾಡಲು ಜಾಗತಿಕ ಏಜೆನ್ಸಿಗಳು ಹಾಗೂ ಸರ್ಕಾರದ ಸಂಸ್ಥೆಗಳ ಮುಂಚೂಣಿಯಲ್ಲಿವೆ. ಜೊತೆಗೆ ಭಾರತದಲ್ಲಿ ನಾಗರಿಕ ಸಮಾಜ ಸಹ ಸ್ಥಳೀಯ ಪರಿಸರ ರಕ್ಷಣೆಯ ಕಾರ್ಯದಲ್ಲಿ ತೊಡಗಿದೆ. ಇಂತಹ ಪರಿಸರ ಪ್ರಜ್ಞೆಗೆ ಸಿನಿಮಾ ಮಾಧ್ಯಮ ಕನ್ನಡಿ ಹಿಡಿಯುತ್ತದೆ. ವಾಸ್ತವವನ್ನು ಜಗತ್ತಿಗೆ ತೋರಿಸುವ ಪ್ರಮುಖ ಪಾತ್ರ ನಿರ್ವಹಿಸುತ್ತವೆ, ಹಲವಾರು ಭಾರತೀಯ ಸಿನಿಮಾಗಳು ಕಾಲ್ಪನಿಕ ಹಾಗೂ ವಾಸ್ತವ ಕತೆಗಳ ಮೂಲಕ ಪರಿಸರ ಸಂರಕ್ಷಣೆಯ ವಿಚಾರ ಹೇಳಿವೆ. ಈ ಕುರಿತ ಜಾಗೃತಿ ಮೂಡಿಸಿವೆ ಎಂಬುದು ನಮ್ಮ ಹೆಮ್ಮೆ.

    ಇತ್ತೀಚಿನ ನನ್ನ ಕಾಂತಾರ ಸಿನಿಮಾದಲ್ಲಿ ಸಹ, ನಿಸರ್ಗದ ಮಡಿಲಲ್ಲಿ, ಮನುಷ್ಯನ ಜೀವನ, ಜನರ ಸ್ಥಳೀಯ ನಂಬಿಕೆ, ಆಚರಣೆ ಕುರಿತ ಪ್ರಮುಖ ಅಂಶಗಳಿವೆ. ಪರಿಸರದ ಜತೆ ಅದರ ಜೊತೆಗೆ ನಾವು ಹೊಂದಿರುವ ಸಂಬಂಧ, ಪ್ರೀತಿ, ಬಾಂಧವ್ಯ, ಸಹಬಾಳ್ವೆ, ಸಾಂಸ್ಕೃತಿಕ ಹಿರಿಮೆಗಳು ಹೇಗೆ ಪರಸ್ಪರ ಅವಲಂಬಿಸಿದೆ ಎಂಬುದನ್ನು ಕಾಂತಾರ ಸಿನಿಮಾ ತೋರಿಸಿದೆ. ಸ್ಥಳೀಯ ಪರಿಸರ ರಕ್ಷಣೆ, ಇದರಲ್ಲಿ ಸರ್ಕಾರದ ಪಾತ್ರ, ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಮುದಾಯಗಳ ಪ್ರಾಮುಖ್ಯತೆಗಳನ್ನು ಸಿನಿಮಾ ಎಳೆಎಳೆಯಾಗಿ ಬಿಚ್ಚಿಟ್ಟಿದೆ.

    ಕಾಂತಾರದಂತಹ ಸಿನಿಮಾಗಳು ವಾಸ್ತವವನ್ನು ತೆರೆದಿಡುವ ಜತೆಗೆ ಪರಿಸರದ ಸವಾಲುಗಳನ್ನು ಎದುರಿಸಲು, ಸಮಸ್ಯೆಗಳನ್ನು ಬಗೆಹರಿಸಲು ಜನರಿಗೆ ಸ್ಫೂರ್ತಿ ನೀಡುತ್ತವೆ. ಭಾವನೆಗಳನ್ನು ಜಾಗೃತಗೊಳಿಸಿ, ಪರಿಸರ ರಕ್ಷಣೆಯಲ್ಲಿ ಜನ ತೆರಳುವಂತೆ ಮಾಡುತ್ತವೆ. ಇಂತಹ ಪ್ರಯತ್ನ ಪರಿಶ್ರಮವನ್ನು ಗುರುತಿಸಬೇಕು, ಪ್ರೋತ್ಸಾಹಿಸಬೇಕು ಎಂಬುದಾಗಿ ಕಲಿ ನೆರೆದಿರುವ ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇನೆ.

    ಇದು ರಿಷಬ್ ಶೆಟ್ಟಿ ಭಾಷಣದ ಸಾರ. ಭಾರತದ ಎಕೋಫಾನ್ ಸಂಸ್ಥೆಯ ಪ್ರತಿನಿಧಿಯಾಗಿ ಹೋಗಿದ್ದ ರಿಷಬ್ ಶೆಟ್ಟಿ ಪರಿಸರ ಪ್ರೀತಿ ಇಲ್ಲಿಗೇ ಮುಗಿಯುವುದಿಲ್ಲ. ರಾಜ್ಯ ಸರ್ಕಾರದ ಪ್ರಾಯೋಜಕತ್ವದಲ್ಲಿ ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ನಡೆಸುತ್ತಿರುವ ಸೇವ್ ಟೈಗರ್ ಅಭಿಯಾನದಲ್ಲೂ ರಿಷಬ್ ಶೆಟ್ಟಿ ರಾಯಭಾರಿಯಾಗಿದ್ದಾರೆ. ಇದರ ಜೊತೆಗೆ ಇಂದು ಜಿನೀವಾದಲ್ಲಿ ಕಾಂತಾರ ಚಿತ್ರದ ವಿಶೇಷ ಪ್ರದರ್ಶನವೂ ನಡೆಯಲಿದೆ. ಈ ಮೂಲಕ ರಿಷಬ್ ಶೆಟ್ಟಿ, ಕಾಂತಾರ ಹಾಗೂ ಕನ್ನಡ ಜಗತ್ತಿನ ಅತಿ ದೊಡ್ಡ ಸಮುದಾಯವನ್ನು ಹಾಗೂ ಪ್ರಭಾವಿ ಮಾಧ್ಯಮಗಳನ್ನೂ ಮುಟ್ಟಲಿದೆ.

    ರಿಷಬ್ ಶೆಟ್ಟಿಯವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ. ಹೆಮ್ಮೆಯ ಕನ್ನಡಿಗನೊಬ್ಬ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿ, ಕನ್ನಡದಲ್ಲಿ ಮಾತನಾಡಿದ್ದು ನಿಜಕ್ಕೂ ಅದ್ಭುತ. ಅಭಿನಂದನೆಗಳು ರಿಷಬ್‌ ಶೆಟ್ಟಿ. ನಿಮ್ಮ ಕನ್ನಡ ಪ್ರೇಮಕ್ಕೆ ನನ್ನ ಹೃದಯಾಂತರಾಳದಿಂದ ಗೌರವವನ್ನು ಅರ್ಪಿಸುತ್ತೇನೆ. ಪರಿಸರವನ್ನು ಉಳಿಸಿ-ಬೆಳೆಸಲು ನಮ್ಮ ಸರ್ಕಾರ ಸಹ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಪರಿಸರ ಸಂರಕ್ಷಣೆಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದ್ದಾರೆ ರಿಷಬ್ ಶೆಟ್ಟಿ