ಕನ್ನಡದಲ್ಲಿ ಕಾಂತಾರ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಸೃಷ್ಟಿಸುತ್ತಿದೆ. ದಾಖಲೆಗಳೆಲ್ಲ ಪುಡಿ ಪುಡಿಯಾಗುತ್ತಿದೆ. ಡಿವೈನ್ ಹಿಟ್ ಎಂಬ ಹೊಸ ಪದಪುಂಜವನ್ನು ಕನ್ನಡಕ್ಕೆ ಕೊಟ್ಟ ಸಿನಿಮಾ ಕಾಂತಾರ. ರಿಷಬ್ ಶೆಟ್ಟಿ, ಹೊಂಬಾಳೆ ಫಿಲಮ್ಸ್ ಎರಡೂ ಹೊಸ ದಾಖಲೆ ಬರೆದಿವೆ. ಈ ಹಾದಿಯಲ್ಲಿ ಕಾಂತಾರ ಯಶ್, ಪುನೀತ್ ರಾಜಕುಮಾರ್ ಹೆಸರಲ್ಲಿದ್ದ ದಾಖಲೆಗಳನ್ನೆಲ್ಲ ಅಳಿಸಿ ಹಾಕಿದೆ. ಹೊಸ ಮೈಲುಗಲ್ಲು ಸ್ಥಾಪಿಸಿದೆ.
25 ದಿನಗಳಲ್ಲಿ ಕಾಂತಾರ ಚಿತ್ರವನ್ನು ನೋಡಿದವರ ಸಂಖ್ಯೆ 77 ಲಕ್ಷಕ್ಕೂ ಹೆಚ್ಚು. ಇದು ಹೊಸ ದಾಖಲೆ. ಈ ಹಿಂದೆ ಈ ದಾಖಲೆ ಇದ್ದದ್ದು ಕೆಜಿಎಫ್ ಚಾಪ್ಟರ್ 2 ಹೆಸರಲ್ಲಿ. ಕೆಜಿಎಫ್ 2 ಚಿತ್ರವನ್ನು 75 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರು. ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಸಿನಿಮಾವನ್ನು 65 ಲಕ್ಷ ಜನ ವೀಕ್ಷಿಸಿದ್ದರು. ಅ ದಾಖಲೆಯನ್ನು ಕೆಜಿಎಫ್ ಚಾಪ್ಟರ್ 1 ಬ್ರೇಕ್ ಮಾಡಿತ್ತು. ಕೆಜಿಎಫ್ ಸಿನಿಮಾವನ್ನು 72 ಲಕ್ಷ ಜನ ವೀಕ್ಷಿಸಿದ್ದರು. ಆ ಎರಡೂ ಚಿತ್ರಗಳು ಹೊಂಬಾಳೆ ಚಿತ್ರಗಳೇ.
ಈಗ ಕೇವಲ 25 ದಿನಗಳಲ್ಲಿ ಕಾಂತಾರ ಚಿತ್ರವನ್ನು 25 ದಿನಗಳಲ್ಲಿ 77 ಲಕ್ಷ ವೀಕ್ಷಿಸಿದ್ದಾರೆ. ಆ ಸಂಖ್ಯೆ ಕೋಟಿ ದಾಟಿದರೂ ಅಚ್ಚರಿಯಿಲ್ಲ. ಇದು ಕೇವಲ ಕನಾಟಕದ ಲೆಕ್ಕ. ಕನ್ನಡಿಗರು ನೋಡಿರುವ ಚಿತ್ರ. ಕಾಂತಾರ ಕೆಜಿಎಫ್ ದಾಖಲೆಯನ್ನು ಹಿಂದಿಕ್ಕಿದೆ. ಬಾಕ್ಸಾಫೀಸ್ ಲೆಕ್ಕಾಚಾರದಲ್ಲಿ ಅಲ್ಲ. ಸದ್ಯಕ್ಕೆ ಆ ದಾಖಲೆಯ ಹತ್ತಿರಕ್ಕೂ ಹೋಗೋಕಾಗಲ್ಲ. ಅದು ಸೃಷ್ಟಿಸಿರುವ ಇತಿಹಾಸ ಅಂತದ್ದು.
ಹೊಂಬಾಳೆ ಶುರುವಾಗಿದ್ದು ನಿನ್ನಿಂದಲೇ ಚಿತ್ರದ ಮೂಲಕ. ವಿಜಯ್ ಕಿರಗಂದೂರು ನಿರ್ಮಾಣದ ಮೊದಲ ನಿರೀಕ್ಷೆಯ ಮಟ್ಟ ತಲುಪಿರಲಿಲ್ಲ. ಅದಾದ ನಂತರ ಹೊಂಬಾಳೆ ಸಿನಿಮಾಗಳು ಸೋತದ್ದೇ ಇಲ್ಲ. ಮಾಸ್ಟರ್‍ಪೀಸ್, ರಾಜಕುಮಾರ. ಕೆಜಿಎಫ್ 1 & 2, ಯುವರತ್ನ ಎಲ್ಲ ಚಿತ್ರಗಳೂ ಇತಿಹಾಸ ಬರೆದವು. ಇನ್ನು ಮುಂದೆ ಜಗ್ಗೇಶ್ ಜೊತೆಗಿನ ರಾಘವೇಂದ್ರ ಸ್ಟೋರ್ಸ್ ಇದೆ. ಇದೇ ವರ್ಷ ರಿಲೀಸ್ ಆಗಲಿದೆ. ಇದು ಮಾತ್ರ ಕನ್ನಡದ ಸಿನಿಮಾ.
ಪ್ರಭಾಸ್-ಪ್ರಶಾಂತ್ ನೀಲ್ ಜೊತೆಗಿನ ಸಲಾರ್, ಪೃಥ್ವಿರಾಜ್ ಸುಕುಮಾರನ್ ಜೊತೆಗಿನ ಟೈಸನ್, ಪವನ್ ಕುಮಾರ್-ಫಹಾದ್ ಫಾಸಿಲ್ ಜೊತೆಗಿನ ಧೂಮಂ, ಡಾ.ಸೂರಿ-ಶ್ರೀಮುರಳಿ ಕಾಂಬಿನೇಷನ್‍ನ ಬಘೀರ, ರಕ್ಷಿತ್ ಶೆಟ್ಟಿ ಜೊತೆಗೆ ರಿಚರ್ಡ್ ಆಂಟನಿ ಘೋಷಣೆಯಾಗಿವೆ. ಬಘೀರ ಮತ್ತು ರಿಚರ್ಡ್ ಆಂಟನಿ ಇನ್ನೂ ಸೆಟ್ಟೇರಿಲ್ಲ. ಇದರ ಜೊತೆಗೆ ಸಂತೋಷ್ ಆನಂದರಾಮ್-ಯುವ ರಾಜಕುಮಾರ್ ಚಿತ್ರವೂ ಸೆಟ್ಟೇರುತ್ತಿದೆ.