ಫಿಲಂ ಚೇಂಬರ್ ಹಮ್ಮಿಕೊಂಡಿದ್ದ ಅಂಬಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಬಹುತೇಕ ಕನ್ನಡ ಚಿತ್ರರಂಗ ಪಾಲ್ಗೊಂಡಿತ್ತು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಿಎಂ ಕುಮಾರಸವಾಮಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ, ಫಿಲಂ ಚೇಂಬರ್ ಅಧ್ಯಕ್ಷ ಚಿನ್ನೇಗೌಡ, ರಾಕ್‍ಲೈನ್ ವೆಂಕಟೇಶ್, ಮುನಿರತ್ನ, ರಾಘವೇಂದ್ರ ರಾಜ್‍ಕುಮಾರ್, ಶಿವರಾಜ್‍ಕುಮಾರ್, ದೊಡ್ಡಣ್ಣ, ಉಮಾಶ್ರೀ, ಬಿ.ಸರೋಜಾದೇವಿ ಸೇರಿದಂತೆ ನೂರಾರು ಕಲಾವಿದರು, ತಂತ್ರಜ್ಞರು ಭಾಗವಹಿಸಿದ್ದರು.
ಅವರಿಗೆ ಆರೋಗ್ಯದ ಬಗ್ಗೆ ಗಮನ ಕೊಡಿ ಎಂದಿದ್ದೆ. ಅವರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅವರು ನಮ್ಮಿಂದ ಭೌತಿಕವಾಗಿ ದೂರವಾಗಿದ್ದಾರೆ. ಆದರೆ, ಮಾನಸಿಕವಾಗಿ ಸದಾ ನಮ್ಮೊಂದಿಗಿದ್ದಾರೆ.
ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ
ಅಂಬರೀಷ್ ಅವರು ನನಗೆ ವಕೀಲ ಭಗವಾನ್ ಎಂಬುವವರಿಂದ 2973ರಲ್ಲಿ ಪರಿಚಯವಾದರು. ಅವರು ಮಾತು ಒರಟು. ಹೃದಯ ಮೃತದು. ನನ್ನನ್ನು ಅವರು ಬಾಸ್ ಎಂದೇ ಕರೀತಾ ಇದ್ರು. ಮೈಸೂರಿನಲ್ಲಿ ಫಿಲಂಸಿಟಿ ಆಗಬೇಕು ಅನ್ನೋದು ಅವರ ಕನಸಾಗಿತ್ತು. ಹೀಗಾಗಿ ರಾಮನಗರದಲ್ಲಿ ಫಿಲಂ ಸಿಟಿ ಬೇಡ. ಮೈಸೂರಿನಲ್ಲಿಯೇ ಆಗಲಿ.
ಸಿದ್ದರಾಮಯ್ಯ, ಮಾಜಿ ಸಿಎಂ
ಅಂಬರೀಷ್, ಆರ್ಟಿಸ್ಟ್‍ಗಳ ನಡುವಿನ ಮಿಸ್ ಅಂಡರ್‍ಸ್ಟ್ಯಾಂಡಿಂಗ್‍ನ್ನು ಸುಲಭವಾಗಿ ಬಗೆಹರಿಸಿಬಿಡೋರು. ಅವರು ಅಪ್ಪಾಜಿಯೊಂದಿಗೆ ಒಡಹುಟ್ಟಿದವರು ಸಿನಿಮಾದಲ್ಲಿ ನಟಿಸಿದ್ದರು. ನಾನು ಅವರ ಮಗನಾಗಿ ದೇವರ ಮಗ ಚಿತ್ರದಲ್ಲಿ ನಟಿಸಿದ್ದೆ. ಅವರಲ್ಲಿ ಸಣ್ಣ ಕಲಾವಿದ, ದೊಡ್ಡ ಕಲಾವಿದ ಎಂಬ ಭೇದ ಭಾವ ಇರಲಿಲ್ಲ
ಶಿವರಾಜ್‍ಕುಮಾರ್, ನಟ
ಕಲಾವಿದರ ಸ್ಮಶಾನ ಭೂಮಿಗೂ ಕೆಲವರು ಕಿರಿಕಿರಿ ಮಾಡ್ತಾರೆ. ಇದೇ ಕಾರಣದಿಂದ ಕಲಾವಿದರು ಸರ್ಕಾರದ ಮೇಲೆ ಭಾರ ಹಾಕಬಾರದು. ಸ್ಮಾರಕಕ್ಕಾಗಿ ಸರ್ಕಾರದ ಮುಂದೆ ತಿರುಪೆ ಎತ್ತುವುದು ಬೇಡ. ಆ ಕಾರಣಕ್ಕಾಗಿ ನಾನೇ ಒಂದು ಎಕರೆ ಜಮೀನು ಖರೀದಿಸಲು ಹೇಳಿದ್ದೇನೆ.
ಜಗ್ಗೇಶ್, ನಟ
ಅಂಬರೀಷ್ ಕಳೆದ ಬಾರಿ ಸಿಕ್ಕಾಗ ನನ್ನ ಆಯಸ್ಸನ್ನೂ ನೀನೇ ತಗೋ ಎಂದಿದ್ದೆ. ನಿನ್ನ ಆಯಸ್ಸು ನನಗ್ಯಾಕೆ, ನಿನ್ನ ಕೊರಳಲ್ಲಿರೋ ಆ ಚಿನ್ನದ ಸರ ಕೊಡು ಎಂದಿದ್ದರು. ನಾನು ಮೊದಲು ಹೋಗಬೇಕಿತ್ತು. ಅವರು ಮೊದಲು ಹೋಗಿಬಿಟ್ಟರು.
ಬಿ.ಸರೋಜಾದೇವಿ, ನಟಿ
ಪ್ರಾರಂಭದ ದಿನಗಳಲ್ಲಿ ನಾನು ಸಣ್ಣ ಮನೆಯಲ್ಲಿದ್ದೆ. ಅಲ್ಲಿಗೆ ಬರೋರು. ಅಡುಗೆ ಮಾಡಿಸಿಕೊಂಡು ಊಟ ಮಾಡಿಕೊಂಡು ಹೋಗೋರು. ಸಚಿವರಾಗಿದ್ದಾಗ ಅವರು ಸೀರಿಯಸ್ಸಾಗಿರುವಂತೆ ಕಾಣುತ್ತಿರಲಿಲ್ಲ. ಅಷ್ಟೆಯೇ ಹೊರತು, ಕೆಲಸ, ಜವಾಬ್ದಾರಿಗಳ ವಿಚಾರಗಳಲ್ಲಿ ಅತ್ಯಂತ ಸೀರಿಯಸ್ ಆಗಿರುತ್ತಿದ್ದರು. ಜನರ ಕೆಲಸ ಮಾಡುವಾಗ ಯಾವುದೇ ತಪ್ಪು ಮಾಡಬಾರದು ಎಂಬ ಜಾಗೃತಿ ಅವರಲ್ಲಿ ಸದಾ ಇತ್ತು.
ಉಮಾಶ್ರೀ, ನಟಿ