ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರನ್ನು ಮದುವೆಯಾಗುತ್ತಿರುವ ಹುಡುಗಿ ಪ್ರೇರಣಾ ಶಂಕರ್. ಇದೇ ಡಿಸೆಂಬರ್ 9ಕ್ಕೆ ಧ್ರುವ ಸರ್ಜಾ ಅವರೊಂದಿಗೆ ಉಂಗುರ ಬದಲಿಸಿಕೊಳ್ಳಲಿರುವ ಈ ಹುಡುಗಿ, ಧ್ರುವ ಸರ್ಜಾಗೆ ಬಾಲ್ಯ ಸ್ನೇಹಿತೆ. ಒಂದು ರೀತಿಯಲ್ಲಿ ಪ್ರೇರಣಾ, ಧ್ರುವ ಸರ್ಜಾಗೆ ಎದುರು ಮನೆ ಹುಡುಗಿಯೂ ಹೌದು, ಹಿಂದಿನ ಮನೆ ಹುಡುಗಿಯೂ ಹೌದು.
ಧ್ರುವ ಸರ್ಜಾ ಮತ್ತು ಪ್ರೇರಣಾ ಅವರ ಪರಿಚಯ ಹಲವು ವರ್ಷಗಳದ್ದಾದರೂ ಪ್ರೀತಿ ಸುಮಾರು 9 ವರ್ಷಗಳದ್ದಂತೆ. ಮೊದಲು ಧ್ರುವ ಸರ್ಜಾ ಅವರ ಮನೆಯ ಎದುರು ಮನೆಯಲ್ಲಿದ್ದ ಪ್ರೇರಣಾ ಶಂಕರ್, ಈಗ ಹಿಂದಿನ ರಸ್ತೆಯ ಮನೆಯಲ್ಲಿದ್ಧಾರೆ. ಪ್ರೇರಣಾ ಅವರ ತಂದೆ ಶಂಕರ್, ತಾಯಿಯ ಹೆಸರು ಸರಿತಾ. ಪ್ರೇರಣಾ, ಖಾಸಗಿ ಕಾಲೇಜ್ ಒಂದರಲ್ಲಿ ಲೆಕ್ಚರರ್.
ಏಳೆಂಟು ವರ್ಷಗಳಿಂದ ಪರಿಚಯ, ಸ್ನೇಹ ಇಟ್ಟುಕೊಂಡಿದ್ದ ಇಬ್ಬರೂ ಯಾವಾಗ ಪ್ರೀತಿಸಲು ಶುರು ಮಾಡಿದರೋ ಗೊತ್ತಿಲ್ಲ. ಅವರ ಮನೆಯ ಸಮಾರಂಭಗಳಲ್ಲಿ ಇವರು, ಇವರ ಮನೆಯ ಕಾರ್ಯಕ್ರಮಗಳಲ್ಲಿ ಅವರೂ ಭಾಗವಹಿಸುತ್ತಿದ್ದರು. ಧ್ರುವ ಸರ್ಜಾ ಪ್ರೇರಣಾ ಮನೆಯ ಯಾವುದೇ ಕಾರ್ಯಕ್ರಮವನ್ನೂ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಹೀಗೆ ನಡೆಯುತ್ತಿದ್ದ ಪ್ರೀತಿಯನ್ನೂ ಇಬ್ಬರೂ ತಮ್ಮ ತಮ್ಮ ಮನೆಯ ಹಿರಿಯರಿಗೆ ತಿಳಿಸಿದ್ದಾರೆ. ಇಬ್ಬರೂ ಓಕೆ ಎಂದಿದ್ದಾರೆ. ಬನಶಂಕರಿಯಲ್ಲಿರೋ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ನಿಶ್ಚಿತಾರ್ಥ ನಡೆಯಲಿದ್ದು, ನಂತರ ಅಲ್ಲಿಯೇ ಇರುವ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಅದ್ಧೂರಿ ಕಾರ್ಯಕ್ರಮವೂ ಇದೆ.