ಅಭಿಷೇಕ್ ಅಂಬರೀಷ್ ಅಭಿನಯದ ಅಮರ್ ಸಿನಿಮಾ, ಮೇ 31ಕ್ಕೆ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಅಭಿಷೇಕ್ ಜೊತೆ ಅಣ್ಣ ದರ್ಶನ್, ರಂಗಿತರಂಗದ ನಿರೂಪ್ ಬಂಡಾರಿ, ರಚಿತಾ ರಾಮ್ ಮೊದಲಾದವರು ನಟಿಸಿದ್ದಾರೆ. ಕೇವಲ ಅಂಬಿಗಾಗಿ.. ದರ್ಶನ್ ಅವರ ಅಂಬಿ ಪ್ರೀತಿಯನ್ನು ಪದೇ ಪದೇ ಹೇಳುವ ಅಗತ್ಯವೇನೂ ಇಲ್ಲ. ಅಂಬರೀಷ್‍ಗೆ ತಂದೆಯ ಸ್ಥಾನ ಕೊಟ್ಟಿರುವ ದರ್ಶನ್, ಅದನ್ನು ಮುಚ್ಚಿಟ್ಟುಕೊಂಡವರೂ ಅಲ್ಲ.
ಆದರೆ, ವಿಶೇಷವೇನು ಗೊತ್ತೇ. ಅಂಬರೀಷ್‍ರ ಆಪ್ತಮಿತ್ರರಾಗಿದ್ದ ರಜನಿಕಾಂತ್, ಅಂಬಿಯ ಮಗನ ಚಿತ್ರದಲ್ಲಿ ಒಂದು ಪುಟ್ಟ ಪಾತ್ರವನ್ನಾದರೂ ಕೊಡು ಎಂದು ನಿರ್ದೇಶಕರಿಗೆ ಕೇಳಿದ್ದರಂತೆ. ಕಡೆಗೆ ಭಿಕ್ಷುಕನ ಪಾತ್ರವಾದರೂ ಸರಿ, ನಟಿಸುತ್ತೇನೆ ಎಂದಿದ್ದರಂತೆ. ಜಸ್ಟ್ ಫಾರ್ ಅಂಬರೀಷ್ ಸ್ನೇಹ. ಅವರಷ್ಟೇ ಅಲ್ಲ, ತೆಲುಗಿನ ಸ್ಟಾರ್ ನಟ ಮೋಹನ್ ಬಾಬು, ವಿಲನ್ ಆಗಿ ನಟಿಸೋಕೆ ನಾನು ರೆಡಿ ಎಂದಿದ್ದರಂತೆ.
ಕಥೆಗೆ ಅಗತ್ಯವಿದ್ದರೆ, ಅವರು ಆ ಪಾತ್ರಗಳಿಗೆ ಒಪ್ಪುವಂತಿದ್ದರೆ ಮಾತ್ರ ಹೇಳು. ಅವರು ನಟಿಸುತ್ತಾರೆ ಎಂದು ಸಿಕ್ಕ ಸಿಕ್ಕ ಪಾತ್ರಗಳನ್ನೆಲ್ಲ ಮಾಡಿಸಿದರೆ, ಅವರ ಗೌರವವೂ ಕಡಿಮೆಯಾಗುತ್ತೆ ಎಂದಿದ್ದರಂತೆ ಅಂಬರೀಷ್.
ಅದಕ್ಕೆ ತಕ್ಕಂತೆ ನಮ್ಮ ಕಥೆಯಲ್ಲಿ ಅವರಿಗೆ ಸೂಟ್ ಆಗುವ ಪಾತ್ರಗಳು ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ ನಾಗಶೇಖರ್. ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರದಲ್ಲಿ ತಾನ್ಯಾ ಹೋಪ್ ನಾಯಕಿಯಾಗಿದ್ದು, ಸಿನಿಮಾವನ್ನು ಇಡೀ ಕನ್ನಡ ಚಿತ್ರರಂಗ ಎದುರು ನೋಡುತ್ತಿದೆ.