ನಿತ್ಯಾ ಮೆನನ್. ಪಿಯುಸಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಚೆಲುವೆ, ಮೈನಾದಲ್ಲಿ ಮುಗ್ಧ ನಗುವಿನಿಂದಲೇ ಹೃದಯ ಕದ್ದಿದ್ದರು. ಸುದೀಪ್ ಜೊತೆ ಕೋಟಿಗೊಬ್ಬ 2ನಲ್ಲಿ ಈ ಕಿನ್ನರಿ ಈಗ ಏಕಾಂಗಿಯಾಗಿ ಬರುತ್ತಿದ್ದಾರೆ. ಪ್ರಾಣ ಎನ್ನುವ ಚಿತ್ರದಲ್ಲಿ ನಿತ್ಯಾ ಮೆನನ್ ನಟಿಸಿದ್ದಾರೆ. ಇದು ಏಕವ್ಯಕ್ತಿ ಸಿನಿಮಾ. ಅಂದರೆ ಚಿತ್ರದ ಆರಂಭದಿಂದ ಅಂತ್ಯದವರೆಗೆ ಇಡೀ ಚಿತ್ರದಲ್ಲಿ ನಿಮಗೆ ಕಾಣಿಸೋದು ನಿತ್ಯಾ ಮೆನನ್ ಒಬ್ಬರೇ.
ವಿ.ಕೆ.ಪ್ರಕಾಶ್ ನಿರ್ದೇಶನದ ಚಿತ್ರ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಿದೆ. ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಚಿತ್ರಕ್ಕೆ ಸಂಗೀತ ನೀಡಿರೋದು ಆಸ್ಕರ್ ಪ್ರಶಸ್ತಿ ವಿಜೇತ ರಸೂಲ್ ಪೂಕುಟ್ಟಿ.
ಏಕವ್ಯಕ್ತಿ ಚಿತ್ರ ಕನ್ನಡಕ್ಕೆ ಹೊಸದೇನೂ ಅಲ್ಲ. ಈ ಹಿಂದೆ ಶಾಂತಿ ಅನ್ನೋ ಚಿತ್ರದಲ್ಲಿ ಭಾವನಾ ಏಕವ್ಯಕ್ತಿಯಾಗಿ ನಟಿಸಿದ್ದರು. ಅದು ಬರಗೂರು ರಾಮಚಂದ್ರಪ್ಪ ನಿರ್ದೇಶನದ ಚಿತ್ರ. ಚಿತ್ರಲೋಕ ಸಂಸ್ಥೆಯ, ಕೆ.ಎಂ.ವೀರೇಶ್ ನಿರ್ಮಿಸಿದ್ದ, ದಯಾಳ್ ನಿರ್ದೇಶನದ ಆ್ಯಕ್ಟರ್ ಸಿನಿಮಾ ಕೂಡಾ ಬಹುತೇಕ ಏಕವ್ಯಕ್ತಿ ಚಿತ್ರವಾಗಿತ್ತು. ನವೀನ್ ಕೃಷ್ಣ ನಟಿಸಿದ್ದರು. ಬೇರೆ ಭಾಷೆಗಳಲ್ಲೂ ಇಂತಹ ಪ್ರಯೋಗಗಳು ಈಗಾಗಲೇ ನಡೆದಿವೆ. ಈಗ.. ಮತ್ತೊಮ್ಮೆ ಇಂತಹ ಪ್ರಯೋಗ.. ನಾಯಕಿ ನಿತ್ಯಾ ಮೆನನ್.