ಕಿಚ್ಚ ಸುದೀಪ್, ಅಭಿಮಾನಿಗಳ ಪಾಲಿಗೆ ಪ್ರೀತಿಯ ಕಿಚ್ಚ. ಸುದೀಪ್ ಎಂದು ಕರೆಯುವ ಅಭಿಮಾನಿಗಳ ಸಂಖ್ಯೆಯೇ ಕಡಿಮೆ ಎನ್ನಬೇಕು. ಹಾಗೆ ನೋಡಿದರೆ ಕನ್ನಡದಲ್ಲಿ ಹೀರೋಗಿಂತ ಹೀರೋ ಅಭಿನಯಿಸಿದ ಪಾತ್ರಗಳ ಹೆಸರು ಜನಪ್ರಿಯವಾಗಿರುವುದು ಸ್ವಲ್ಪ ಕಡಿಮೆ ಎನ್ನಬೇಕು. ಬಂಗಾರದ ಮನುಷ್ಯದ ರಾಜೀವ, ಭೂತಯ್ಯನ ಮಗ ಅಯ್ಯು ಚಿತ್ರದ ಗುಳ್ಳ, ನಾಗರಹಾವಿನ ರಾಮಾಚಾರಿ, ಜನುಮದ ಜೋಡಿಯ ಮಣಿ-ಕೃಷ್ಣ, ಬಂಧನದ ಡಾ.ಹರೀಶ್, ನಂದಿನಿ, ಮುಂಗಾರು ಮಳೆಯ ಪ್ರೀತಮ್, ನಂಜುAಡಿ ಕಲ್ಯಾಣದ ದುರ್ಗಿ.. ಇಂತಹ ಲಿಸ್ಟುಗಳಲ್ಲಿ ಅಜರಾಮಜರವಾಗಿ ಉಳಿದಿರುವ ಇನ್ನೊಂದು ಹೆಸರೇ ಕಿಚ್ಚ. ಪಾತ್ರದ ಹೆಸರನ್ನು ವೊರಿಜಿನಲ್ ಹೆಸರಿನ ಜೊತೆಯಲ್ಲಿಟ್ಟುಕೊಂಡಿರುವ ಸುದೀಪ್, ಪಾತ್ರವನ್ನೂ ಅಜರಾಮಜರವಾಗಿಸಿದ್ದಾರೆ. ಆ ಚಿತ್ರದ ನೆನಪಿನ ಜೊತೆ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ಸುದೀಪ್ ಬಿಚ್ಚಿಟ್ಟಿದ್ದಾರೆ. ದಬಾಂಗ್ 3 ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಸುದೀಪ್, ಹಿಂದಿ ಶೋವೊಂದರಲ್ಲಿ ಈ ಕಥೆ ಹೇಳಿದ್ದಾರೆ.
ಸುದೀಪ್ ಹುಚ್ಚ ಮಾಡುವುದಕ್ಕೂ ಮೊದಲು ಕೆಲವು ಚಿತ್ರಗಳು ಸೆಟ್ಟೇರಿ ಅರ್ಧಕ್ಕೇ ನಿಂತು ಹೋಗಿದ್ದವು. ಆಗ ಎಲ್ಲರೂ ಅವರನ್ನು ಐರನ್ ಲೆಗ್ ಎನ್ನುತ್ತಿದ್ದರಂತೆ. ಸ್ಪರ್ಶ ಆಗತಾನೇ ಬಂದಿತ್ತು. ಆಗ ಬಂದ ಆಫರ್ ಹುಚ್ಚ ಚಿತ್ರದ್ದು.
ಆ ಚಿತ್ರದಲ್ಲಿ ಹೀರೋ ತಲೆಬೋಳಿಸಿಕೊಳ್ತಾನೆ. ಅದೊಂದು ಕಾರಣಕ್ಕಾಗಿ ಹಲವರು ಆ ಪಾತ್ರ ಬೇಡ ಎಂದಿದ್ದರAತೆ. ಅದರ ಅರ್ಥ ಬೇರೆಯವರು ರಿಜೆಕ್ಟ್ ಮಾಡಿದ್ದ ಪಾತ್ರ ಅದು.
ಸಿನಿಮಾ ಶೂಟಿಂಗ್ ವೇಳೆ 3ನೇ ಮಹಡಿಯಿಂದ ಬಿದ್ದು ಮೂಳೆಗೆ ಪೆಟ್ಟು ಮಾಡಿಕೊಂಡು, ಆ ನೋವಿನಲ್ಲೇ ಶೂಟಿಂಗ್ ಮಾಡಿದ್ದರಂತೆ ಸುದೀಪ್.
ಎಲ್ಲಕ್ಕಿಂತ ದೊಡ್ಡ ಶಾಕಿಂಗ್ ಸ್ಟೋರಿ ಸಿನಿಮಾ ರಿಲೀಸ್ ಆದ ಮೇಲಿನದು. ಸಿನಿಮಾಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ ಎಂದು ತಿಳಿಯಲು ಥಿಯೇಟರಿಗೆ ಹೋದ ಸುದೀಪ್‌ಗೆ ಥಿಯೇಟರ್ ಎದುರು ಕಂಡಿದ್ದು ನಾಲ್ಕೇ ನಾಲ್ಕು ಜನ. ಥಿಯೇಟರ್ ಮ್ಯಾನೇಜರ್‌ನ್ನು ಕಂಡು ಮಾತನಾಡಿದಾಗಲೇ ಗೊತ್ತಾಗಿದ್ದು, ಸಿನಿಮಾ ಹೌಸ್‌ಫುಲ್ ಆಗಿದೆ. ಜನರೆಲ್ಲ ಥಿಯೇಟರ್ ಒಳಗಿದ್ದಾರೆ. ಶೋ ಶುರುವಾಗೋಕೆ ಇನ್ನೂ ಟೈಂ ಇದ್ದ ಕಾರಣ, ಹೊರಗೆ ಆ 4 ಜನ ಕಾಯ್ತಿದ್ದಾರೆ ಅನ್ನೋ ಸತ್ಯ.
ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ ಕೇಳಿಸಿಕೊಂಡು ಹೊರಬಂದ ಸುದೀಪ್‌ರನ್ನು ಪ್ರೇಕ್ಷಕರೇ ಗುರುತಿಸಿದರು. ಆದರೆ, ಎಷ್ಟೋ ಜನರಿಗೆ ಸುದೀಪ್ ಎಂಬ ಹೆಸರು ಗೊತ್ತಿರಲಿಲ್ಲ. ಹೀಗಾಗಿ ಕಿಚ್ಚ.. ಕಿಚ್ಚ.. ಎಂದೇ ಕೂಗಿದರು. ಸುದೀಪ್ ಕಿಚ್ಚನನ್ನು ಬಿಡಲಿಲ್ಲ.