ಅತಿಮಧುರ ಅನುರಾಗ.. ಜೀವನ ಸಂಧ್ಯಾರಾಗ.., ಸ್ವಾಮಿದೇವನೆ ಲೋಕಪಾಲನೆ.. ತೇನಮೋಸ್ತು ನಮೋಸ್ತುತೆ..,
ಬನ್ನಿರೈ.. ಬನ್ನಿರೈ.. (ಸ್ಕೂಲ್ ಮಾಸ್ಟರ್), ನೀನೇ ಕಿಲಾಡಿ ಹೆಣ್ಣು..(ಗಾಳಿಗೋಪುರ), ಯಾರು ಯಾರು ನೀ ಯಾರು.. (ರತ್ನಮಂಜರಿ).. ಹೀಗೆ ಹಲವು ಮಧುರ ಗೀತೆಗಳಿಗೆ ಕಂಠದಾನ ಮಾಡಿದ್ದ ಗಾಯಕಿ ಕೆ. ರಾಣಿ ನಿಧನರಾಗಿದ್ದಾರೆ. ಹೈದರಾಬಾದ್‍ನ ಕಲ್ಯಾಣ ನಗರದಲ್ಲಿ ಕೆ. ರಾಣಿ ವಿಧಿವಶರಾಗಿದ್ದಾರೆ.
ಕೆ.ರಾಣಿ, ಕನ್ನಡ, ತೆಲುಗು, ತಮಿಳು, ಹಿಂದಿ, ಉಜ್ಬೇಕಿಸ್ತಾನದ ಸಿನಿಮಾಗಳಲ್ಲಿ 500ಕ್ಕೂ ಹೆಚ್ಚು ಗೀತೆಗಳಿಗೆ ದನಿಯಾಗಿದ್ದ ಕೆ.ರಾಣಿ, ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್, ಕೆ.ಕಾಮರಾಜ್ ಅವರಂತಹ ದಿಗ್ಗಜರ ಎದುರು ಹಾಡಿದ್ದರು. ಡಾ.ಎಂ.ವಿಶ್ವೇಶ್ವರಯ್ಯ ಅವರ ಜನ್ಮಶತಮಾನೋತ್ಸವ ಆಚರಿಸಿದಾಗ, ಆ ಸಮಾರಂಭಕ್ಕೆ ರಾಣಿ ಮೆರುಗು ತಂದಿದ್ದರು. ಕೆ.ರಾಣಿಯವರಿಗಾಗಿ ಆಗ ಕರ್ನಾಟಕ ಸರ್ಕಾರ, ವಿಶೇಷ ವಿಮಾನದ ವ್ಯವಸ್ಥೆಯನ್ನೇ ಮಾಡಿತ್ತು. ಕೆ.ಕಾಮರಾಜ್, ರಾಣಿಯವರನ್ನು ಇನಿಸೈರಾಣಿ ಎಂದು ಕರೆದಿದ್ದರು. ಶ್ರೀಲಂಕಾದ ರಾಷ್ಟ್ರಗೀತೆಗೂ ರಾಣಿ ಧ್ವನಿಯಾಗಿದ್ಧಾರೆ.
75 ವರ್ಷ ವಯಸ್ಸಾಗಿದ್ದ ಕೆ.ರಾಣಿ, ಹೈದರಾಬಾದ್‍ನಲ್ಲಿ ತಮ್ಮ ಮಗಳೊಂದಿಗೆ ವಾಸವಾಗಿದ್ದರು. ಕನ್ನಡದಲ್ಲಿ ಹಾಡಿದ್ದು ಕೆಲವೇ ಹಾಡುಗಳಾದರೂ, ಒಂದಕ್ಕಿಂತ ಒಂದು ಅಮರಗೀತೆಗಳು. ಅಮರಗೀತೆಗಳ ಗಾಯಕಿ, ಈಗಿಲ್ಲ.