ವಿನೋದ್ ಪ್ರಭಾಕರ್ ಎಂಬ ಮರಿಟೈಗರ್‍ಗೆ ಈಗ ಕೈತುಂಬಾ ಕೆಲಸ. ರಗಡ್, ಸಿಎಂ(ಕಾಮನ್ ಮ್ಯಾನ್) ಚಿತ್ರಗಳ ಚಿತ್ರೀಕರಣ ಒಂದು ಕಡೆ ಬಿರುಸಿನಿಂದ ಸಾಗಿರುವಾಗಲೇ ಫೈಟರ್ ಚಿತ್ರ ಲಾಂಚ್ ಆಗಿದೆ. ಫೈಟರ್ ಚಿತ್ರಕ್ಕೆ ಕ್ಲಾಪ್ ಮಾಡಿರೋದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಈ ಮೊದಲು ಕಾಮನ್ ಮ್ಯಾನ್ ಸಿನಿಮಾಗೆ ದರ್ಶನ್ ಕ್ಲಾಪ್ ಮಾಡಿದ್ದ ದರ್ಶನ್, ಫೈಟರ್‍ಗೂ ಕ್ಲಾಪ್ ಮಾಡಿದ್ದಾರೆ.
ದರ್ಶನ್ ಅವರನ್ನು ಮುಹೂರ್ತಕ್ಕೆ ಆಹ್ವಾನಿಸಲು ಸ್ವತಃ ವಿನೋದ್ ಪ್ರಭಾಕರ್, ಯಜಮಾನ ಚಿತ್ರದ ಸೆಟ್‍ಗೆ ಹೋಗಿದ್ದರಂತೆ. ಆಗ ದರ್ಶನ್, ಸುಮ್ನೆ ನೀವ್ಯಾಕೆ ಬರೋಕೆ ಹೋದ್ರಿ, ಫೋನ್ ಮಾಡಿದ್ದರೆ ಸಾಕಿತ್ತು. ನಾನು ಬರುತ್ತಿದ್ದೆ ಎಂದರಂತೆ. ಅಷ್ಟೇ ಅಲ್ಲ, ನಿಮ್ಮ ಎಲ್ಲ ಚಿತ್ರಗಳಿಗೂ ನಾನೇ ಕ್ಲಾಪ್ ಮಾಡುತ್ತೇನೆ ಎಂದು ಭರವಸೆ ಕೊಟ್ಟರಂತೆ. ಅಲ್ಲಿಯೇ ದರ್ಶನ್ ಅವರಿಂದ ವಿನೋದ್ ಅವರಿಂದ ಚೆಕ್ ಪಡೆದಿದ್ದು.
ವಿನೋದ್ ಅವರಿಗೆ ನಿರ್ಮಾಪಕರೊಬ್ಬರು ಕೊಟ್ಟಿದ್ದ ಚೆಕ್‍ನಲ್ಲಿ ಸಣ್ಣದೊಂದು ಮಿಸ್ಟೇಕ್ ಆಗಿತ್ತು.
ಅದನ್ನು ಸರಿಪಡಿಸಿ ಹೊಸ ಚೆಕ್ ಕೊಡಲು ಬಂದಿದ್ದ ನಿರ್ಮಾಪಕರು, ವಿನೋದ್ ಪ್ರಭಾಕರ್ ಅವರನ್ನು ಹುಡುಕಿಕೊಂಡು ಅಲ್ಲಿಗೇ ಬಂದುಬಿಟ್ಟರು. ಆಗ ವಿನೋದ್, ಆ ಚೆಕ್‍ನ್ನು ದರ್ಶನ್ ಅವರಿಂದ ಪಡೆದುಕೊಂಡರಂತೆ. ದರ್ಶನ್ ಅವರಿಂದ ಪಡೆದ ಆ ಚೆಕ್‍ನ್ನು ಮರೆಯೋಕೆ ಸಾಧ್ಯವೇ ಇಲ್ಲ ಎಂದು ನೆನಪಿಸಿಕೊಳ್ತಾರೆ ವಿನೋದ್ ಪ್ರಭಾಕರ್.