ಈ ಹಸಿರು ಸಿರಿಯಲಿ.. ಎಂದು ಹಾಡುತ್ತಾ ಬಂದಾಗ ಆ ಹುಡುಗಿಗೆ ಇನ್ನೂ 16ರ ವಯಸ್ಸು. 10ನೇ ಕ್ಲಾಸು ಓದುತ್ತಿದ್ದ ಹಾಲುಗಲ್ಲದ ಹುಡುಗಿ ನಾಗಮಂಡಲದ ನಾಯಕಿಯಾಗಿಬಿಟ್ಟಿದ್ದರು. ಪ್ರಕಾಶ್ ರೈ, ಜಯಶ್ರೀ ಎಂಬ ಕಲಾವಿದರ ಎದುರು, ನಾಗಾಭರಣರಂತ ನಿರ್ದೇಶಕರ ಕೈಕೆಳಗೆ ನಾನೇನು ಕಡಿಮೆ ಎಂದು ನಟಿಸಿ ಬೆರಗುಗೊಳಿಸಿದ್ದರು. ಗೆದಿಯಬೇಕು ಮಗಳಾ ಗೆದಿಯಬೇಕು ಅನ್ನೋದನ್ನ ಸಾಧಿಸಿ ತೋರಿಸಿದ್ದರು ವಿಜಯಲಕ್ಷ್ಮಿ.
ವಿಜಯಲಕ್ಷ್ಮಿಯಲ್ಲಿನ ಪ್ರತಿಭೆ ಮತ್ತು ಸೌಂದರ್ಯವನ್ನು ಗುರುತಿಸಿದ ಮೊದಲಿಗ ರವಿಚಂದ್ರನ್. ಆಗಿನ್ನೂ ಬಾಲಾಜಿ(ಈಶ್ವರ್) ಚಿತ್ರರಂಗಕ್ಕೆ ಪರಿಚಿತರಾಗಿರಲಿಲ್ಲ. ತಮ್ಮನ ಚಿತ್ರವನ್ನು ಅದ್ಧೂರಿಯಾಗಿ ಮಾಡುವ ಕನಸು ಕಂಡಿದ್ದ ರವಿಚಂದ್ರನ್, ತಮ್ಮನ ಚಿತ್ರಕ್ಕೆ ವಿಜಯಲಕ್ಷ್ಮಿಯನ್ನು ನಾಯಕಿಯನ್ನಾಗಿಸಿದ್ದರು. ಆದರೆ, ಪ್ರಾಜೆಕ್ಟ್ ನಿಧಾನವಾಗುತ್ತಾ ಸಾಗಿತ್ತು. ವಿಜಯಲಕ್ಷ್ಮಿ ನಾಗಾಭರಣರ ಸಿನಿಮಾಗೆ ಜಿಗಿದಿದ್ದರು.
ಮೊದಲ ಚಿತ್ರದ ಯಶಸ್ಸಿನ ನಂತರ ವಿಜಯಲಕ್ಷ್ಮಿ ಕನ್ನಡ, ತಮಿಳು ಚಿತ್ರಗಳ ನಿರ್ದೇಶಕರ ಅಚ್ಚುಮೆಚ್ಚಿನ ನಾಯಕಿಯಾಗಿಬಿಟ್ಟರು. ಶಿವರಾಜ್‍ಕುಮಾರ್, ರಮೇಶ್ ಅರವಿಂದ್, ಜಗ್ಗೇಶ್, ವಿಷ್ಣುವರ್ಧನ್, ಸಾಯಿಕುಮಾರ್, ಪಾರ್ಥಿಬನ್.. ಹೀಗೆ ಹಲವು ಸ್ಟಾರ್‍ಗಳ ಜೊತೆ ನಟಿಸಿದ್ರು. ಕನ್ನಡದಲ್ಲಿಯೇ ಸೂರ್ಯವಂಶ, ಜೋಡಿಹಕ್ಕಿ, ಅರುಣೋದಯ, ಭೂಮಿತಾಯಿಯ ಚೊಚ್ಚಲ ಮಗ, ರಂಗಣ್ಣ ಮೊದಲಾದ ಹಿಟ್ ಚಿತ್ರಗಳನ್ನು ಕೊಟ್ಟರು. ಆದರೆ ಅದೇ ವೇಳೆ ವೈಯಕ್ತಿಕ ಬದುಕು ಗಾಳಿಪಟವಾಗಿ ಹೋಗಿತ್ತು.
ನಿರ್ದೇಶಕರೊಬ್ಬರ ಜೊತೆ ಪ್ರೀತಿಯಲ್ಲಿದ್ದ ವಿಜಯಲಕ್ಷ್ಮಿ, ಅನುಭವಿಸಿದ್ದು ನೋವು ಮಾತ್ರ. ಒಮ್ಮೆ ಆತ್ಮಹತ್ಯೆಗೂ ಯತ್ನಿಸಿದ್ದರು ವಿಜಯಲಕ್ಷ್ಮಿ. ಸೃಜನ್ ಲೋಕೇಶ್ ಜೊತೆ ಫಿಕ್ಸ್ ಆದ ಮದುವೆ, ನಿಗೂಢ ಕಾರಣಕ್ಕೆ ಮುರಿದು ಬಿತ್ತು. ಇನ್ನು ಚಿತ್ರರಂಗದಲ್ಲಲಿ ರಂಗಣ್ಣ ಚಿತ್ರದ ವೇಳೆ ದೊಡ್ಡ ರಂಪಾಟವೇ ನಡೆದು ಹೋಗಿತ್ತು.
ಯಾವುದೇ ಕಲಾವಿದೆ ಪದೇ ಪದೇ ವಿವಾದಗಳಿಗೆ ಸಿಕ್ಕಿಕೊಳ್ಳುತ್ತಾ ಹೋದರೆ, ಚಿತ್ರರಂಗ ಅಂತಹವರನ್ನು ದೂರವಿಡುತ್ತಾ ಹೋಗುತ್ತೆ. ವಿಜಯಲಕ್ಷ್ಮಿಗೆ ಆಗಿದ್ದೂ ಅದೇ. 2011ರಲ್ಲಿ ಬಂದ ನಾನಲ್ಲ ಚಿತ್ರವೇ ಕೊನೆ. ವಿಜಯಲಕ್ಷ್ಮಿ ಮತ್ತೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿಲ್ಲ. ಸದ್ಯಕ್ಕೆ ನಂದಿನಿ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ವೈಯಕ್ತಿಕ ಬದುಕು ತಲ್ಲಣಗೊಂಡಿದೆ.
ವಿಜಯಲಕ್ಷ್ಮಿಯ ಅಕ್ಕ ಜಯಪ್ರದಾ ಅವರ ಸೋದರನನ್ನು ಮದುವೆಯಾಗಿದ್ದರು. ಆದರೆ, ಆತ ಮಗುವಿನ ಸಮೇತ ದೂರ ಹೋಗಿದ್ದಾನೆ. ಅಕ್ಕ, ಈಗ ವಿಜಯಲಕ್ಷ್ಮಿ ಮನೆಯಲ್ಲಿದ್ದಾರೆ. ತಾಯಿ ಮತ್ತು ಅಕ್ಕನ ಹೊಣೆ ವಿಜಯಲಕ್ಷ್ಮಿ ಹೆಗಲಮೇಲೆ. ಹೀಗಾಗಿಯೇ ವಿಜಯಲಕ್ಷ್ಮಿ ಹೊರ ಬಂದಿದ್ದಾರೆ. ಏನೇ ಆಗಿದ್ದರೂ, ಇಷ್ಟು ವರ್ಷಗಳಲ್ಲಿ ಯಾವತ್ತೂ ಹೊರಜಗತ್ತಿಗೆ ಹಠಮಾರಿ ಹೆಣ್ಣಾಗಿಯೇ ಕಾಣಿಸುತ್ತಿದ್ದ ವಿಜಯಲಕ್ಷ್ಮಿ ಇದೇ ಮೊದಲ ಬಾರಿಗೆ ಕಣ್ಣೀರಿಟ್ಟಿದ್ದಾರೆ.
ಅವರು ಕೇಳ್ತಿರೋದು ಇಷ್ಟೆ. ನಟಿಸೋಕೆ ನಾನು ರೆಡಿ. ಅವಕಾಶ ಕೊಡಿ. ನನಗೆ ನಾಯಕಿಯ ಪಾತ್ರ ಸಿಗಲ್ಲ. ಅದು ನನಗೆ ಗೊತ್ತಿದೆ. ಆದರೆ, ಪೋಷಕ ಪಾತ್ರಗಳನ್ನು ನೀಡಿ ಎಂದು ಅಂಗಲಾಚುತ್ತಿದ್ದಾರೆ ವಿಜಯಲಕ್ಷ್ಮಿ.
ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಸೇರಿದಂತೆ ಹಲವರು ಸೂಕ್ತ ನೆರವಿನ ಭರವಸೆ ಕೊಟ್ಟಿದ್ದಾರೆ. ವಿಜಯಲಕ್ಷ್ಮಿ ಬದುಕಿನಲ್ಲಿ ಮತ್ತೊಮ್ಮೆ ಸೇವಂತಿ ಅರಳೀತಾ..?