ಸಿನಿಮಾ ಸರಸ್ವತಿ ಪಾರ್ವತಮ್ಮ - ಇದು ಪಾರ್ವತಮ್ಮನವರ ಪುಸ್ತಕ ಪ್ರೇಮಕ್ಕೆ ಸಾಕ್ಷಿಯಾದೀತು. ಮಯೂರ ಕನ್ನಡದಲ್ಲಿ ಸೃಷ್ಟಿಸಿದ ದಾಖಲೆಯ ಮಾತು ಬಿಡಿ, ಈಗಲೂ ನೋಡುವಾಗ ರೋಮಾಂಚನ. ಮಯೂರು ದೇವುಡು ನರಸಿಂಹ ಶಾಸ್ತ್ರಿಯವರ ಕಾದಂಬರಿ ಆಧರಿಸಿದ ಚಿತ್ರ. ಕದಂಬರ ಸಾಮ್ರಾಜ್ಯ ಸ್ಥಾಪಕನ ಆ ಚಿತ್ರದ ಪುಸ್ತಕ ಸಿಕ್ಕಿದ್ದು ರಸ್ತೆಯಲ್ಲಿ ಹಳೆಯ ಪುಸ್ತಕಗಳನ್ನು ಮಾರುತ್ತಿದ್ದ ಹುಡುಗನೊಬ್ಬನ ಬಳಿ. ಬೇರೆಯವರಾಗಿದ್ದರೆ, ನೋಡಿಕೊಂಡು ಸುಮ್ಮನೆ ಹೋಗುತ್ತಿದ್ದರೇನೋ. ಆದರೆ, ಪಾರ್ವತಮ್ಮ ಹಾಗಲ್ಲ. ಆ ಪುಸ್ತಕ ಮಾರುತ್ತಿದ್ದ ಹುಡುಗನನ್ನು ಮಾತನಾಡಿಸಿ, ಅವನಿಂದ ಪುಸ್ತಕಗಳನ್ನು ಖರೀದಿಸಿ ಓದಿದರು. ಆ ಪುಸ್ತಕಗಳ ಮಧ್ಯೆ ಇದ್ದ ಕಾದಂಬರಿಯೇ ಮಯೂರ.
ಕನ್ನಡದಲ್ಲಿ ಕಥೆಯಿಲ್ಲ ಎನ್ನುವವರು ಪಾರ್ವತಮ್ಮನವರ ಚಿತ್ರಗಳನ್ನೊಮ್ಮೆ ನೋಡಬೇಕು. ಅವರು ತಮ್ಮ ಚಿತ್ರ ಜೀವನದುದ್ದಕ್ಕೂ ಹೆಚ್ಚು ನಿರ್ಮಿಸಿದ್ದು ಕಾದಂಬರಿ ಆಧರಿಸಿದ ಚಿತ್ರಗಳನ್ನೇ. ಅವರನ್ನು ಸಿನಿಮಾ ಸರಸ್ವತಿ ಎಂದರೆ, ತಪ್ಪಾಗಲಿಕ್ಕಿಲ್ಲ.
ಜೀವನ ಚೈತ್ರ ಸಿನಿಮಾಗೆ ಸ್ಫೂರ್ತಿಯಾದದ್ದು ವಿಶಾಲಾಕ್ಷಿ ದಕ್ಷಿಣ ಮೂರ್ತಿಯವರ ಜೀವನ ಚೈತ್ರ ಕಾದಂಬರಿ.ಡಾ. ರಾಜ್ರ ಕೊನೆಯ ಚಿತ್ರ ಶಬ್ಧವೇದಿ, ವಿಜಯ ಸಾಸನೂರ ಅವರ ಅದೇ ಹೆಸರಿನ ಕಾದಂಬರಿಯದ್ದು. ಆಕಸ್ಮಿಕ ಚಿತ್ರ ತರಾಸು ಅವರ ಆಕಸ್ಮಿಕ-ಅಪರಾಧಿ-ಪರಿಣಾಮ, ಒಟ್ಟು ಮೂರು ಕಾದಂಬರಿಗಳ ಸಮ್ಮಿಲನ.
ಸಾಯಿಸುತೆಯವರ ಮಿಡಿದ ಶೃತಿ, ಚಿರಬಾಂಧವ್ಯ ಸಿನಿಮಾಗಳಾದವು. ಹೆಚ್.ಜಿ. ರಾಧಾದೇವಿಯವರ ‘ಅನುರಾಗದ ಅಂತಃಪುರ’ ಅನುರಾಗ ಅರಳಿತು ಚಿತ್ರವಾಗಿ ಅರಳಿತು.
ಕನ್ನಡವಷ್ಟೇ ಅಲ್ಲ, ಬೆಂಗಾಳಿ ಭಾಷೆಯ ಪನ್ನಾಲಾಲ್ ಪಟೇಲ್ ಅವರ ಮಲೇಲಾ ಜೀವ ಕಾದಂಬರಿ, ಕನ್ನಡದ ಸೊಗಡನ್ನು ಮೈದುಂಬಿಕೊಂಡು ಜನುಮದ ಜೋಡಿಯಾಯಿತು.
ಶಿವರಾಜ್ ಕುಮಾರ್ ಅವರಿಗೆ ಹ್ಯಾಟ್ರಿಕ್ ಹೀರೋ ಬಿರುದು ತಂದುಕೊಟ್ಟ ಆನಂದ್, ವಿದ್ಯುಲ್ಲತಾ ಅವರ ಪ್ರತಿಬಿಂಬ ಅನ್ನೋ ನೀಳ್ಗತೆಯನ್ನಾಧರಿಸಿದ್ದರೆ, ಎರಡನೇ ಚಿತ್ರ ರಥಸಪ್ತಮಿ, ಮತ್ತದೇ ವಿದ್ಯುಲ್ಲತಾ ಅವರ ರಥಸಪ್ತಮಿ ಕಾದಂಬರಿ ಆಧರಿಸಿದ ಚಿತ್ರ. ಮೂರನೇ ಚಿತ್ರ ಮನ ಮೆಚ್ಚಿದ ಹುಡುಗಿಯೂ ಅಷ್ಟೆ. ಕುಂ. ವೀರಭದ್ರಪ್ಪನವರ ಬೇಟೆ ಕಾದಂಬರಿ ಆಧರಿಸಿದ ಚಿತ್ರ.
ವಿಜಯ ಸಾಸನೂರು ಅವರ ಧ್ರುವತಾರೆ, ಜ್ವಾಲಾಮುಖಿ, ಸವ್ಯಸಾಚಿ ಸಿನಿಮಾಗಳಾಗಿದ್ದು, ಕಾಕೋಳು ಸರೋಜಮ್ಮನವರ ಮುಸುಕು ಕಾದಂಬರಿ, ಸಂಯುಕ್ತ ಚಿತ್ರವಾಗಿದ್ದು, ಶಿವರಾಮ ಕಾರಂತರ ಚಿಗುರಿದ ಕನಸು ಅದೇ ಹೆಸರಿನಲ್ಲಿ ಚಿತ್ರವಾಗಿದ್ದು, ಟಿ.ಕೆ. ರಾಮರಾವ್ ಅವರ ಬಂಗಾರದ ಮನುಷ್ಯ, ಪಿ.ಬಿ. ದುತ್ತರಗಿಯವರ ಸಂಪತ್ತಿಗೆ ಸವಾಲ್ ನಾಟಕ, ವಾಣಿಯವರ ಎರಡು ಕನಸು, ಚಿತ್ರಲೇಖ ಅವರ ಸಮಯದ ಗೊಂಬೆ, ಬರಗೂರು ರಾಮಚಂದ್ರಪ್ಪನವರ ಹಗಲು ವೇಷ, ವೀರಪ್ಪ ಮೊಯ್ಲಿಯವರ ಸಾಗರ ದೀಪ..ಎಷ್ಟು ಚಿತ್ರಗಳೋ..ಎಷ್ಟು ಕಾದಂಬರಿಗಳೋ..ಇವನ್ನೆಲ್ಲ ನೋಡಿದರೆ, ಪಾರ್ವತಮ್ಮನವರನ್ನು ಸಿನಿಮಾ ಸರಸ್ವತಿ ಎಂದರೆ ಅದು ಉತ್ಪ್ರೇಕ್ಷೆಯ ಮಾತಂತೂ ಖಂಡಿತಾ ಅಲ್ಲ.