ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಟ್ರಾಫಿಕ್‍ನದ್ದೇ ದೊಡ್ಡ ಸಮಸ್ಯೆ. ಅದರಲ್ಲೂ ಟ್ರಾಫಿಕ್‍ನಲ್ಲಿ ಸಿಲುಕಿಕೊಂಡಿರುವ ಆ್ಯಂಬುಲೆನ್ಸ್‍ಗಳನ್ನು ನೋಡಿದಾಗ ಅಯ್ಯೋ ಎನಿಸದೇ ಇರದು. ಯಾರ ಜೀವವೋ.. ಏನು ಕಷ್ಟವೋ..
ಹಾಗೆ ಟ್ರಾಫಿಕ್‍ನಲ್ಲಿ ನರಳುವ ಆ್ಯಂಬುಲೆನ್ಸ್‍ಗಳಿಗೆ ದಾರಿ ಬಿಡಿ ಎಂಬ ಸಂದೇಶ ಸಾರುತ್ತಿದ್ದಾರೆ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್. ಅಷ್ಟೇ ಅಲ್ಲ, ಅಪಘಾತ ನಡೆದ ಸ್ಥಳಗಳಲ್ಲಿ ಗಾಯಾಳುಗಳನ್ನು ನೀವೇ ಆಸ್ಪತ್ರೆಗೆ ಸೇರಿಸಿ, ಜೀವವನ್ನು ಉಳಿಸಿ. ಪೊಲೀಸರಿಂದಾಗಲೀ, ಕೋರ್ಟುಗಳಿಂದಾಗಲೀ ಯಾವುದೇ ತೊಂದರೆ ಆಗುವುದಿಲ್ಲ ಎಂಬ ಸಂದೇಶ ಸಾರುತ್ತಿದ್ದಾರೆ.
ಅಂದಹಾಗೆ ಇದು ಪೊಲೀಸ್ ಇಲಾಖೆಯ ಅಭಿಯಾನ. ಬಿ ಎ ಗುಡ್ ಸಮರಿಟಾನ್ ಲಾ ಅನ್ನೋ ಅಭಿಯಾನ ಆಯೋಜಿಸಿರುವ ಪೊಲೀಸ್ ಇಲಾಖೆ, ಪುನೀತ್ ಅವರಿಂದ ಈ ಸಂದೇಶ ರವಾನಿಸುತ್ತಿದೆ.
ಆ್ಯಂಬುಲೆನ್ಸ್‍ಗಳಿಗೆ ದಾರಿ ಬಿಡುವ ಪ್ರಯತ್ನ ಈಗಾಗಲೇ ಜಾರಿಯಲ್ಲಿದೆ. ರಸ್ತೆಯಲ್ಲಿ ಜಾಗವೇ ಇಲ್ಲದಿದ್ದರೂ, ಸವಾರರು ಅದು ಹೇಗೋ ಸರ್ಕಸ್ ಮಾಡಿ ಆ್ಯಂಬುಲೆನ್ಸ್‍ಗೆ ದಾರಿ ಮಾಡಿಕೊಡುತ್ತಿದ್ದಾರೆ. ರಸ್ತೆಯೇ ಕಿರಿದಾಗಿರುವ ಪ್ರದೇಶಗಳಲ್ಲಿ ಅದನ್ನು ಮೆಚ್ಚಲೇಬೇಕು. ಆದರೆ, ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ತಲುಪಿಸುವ ಬಗ್ಗೆ ಜನರಲ್ಲಿ ಇನ್ನೂ ಜಾಗೃತಿ ಮೂಡಬೇಕಿದೆ.