ಕಿಚ್ಚ ಸುದೀಪ್, ಇತ್ತೀಚೆಗೆ ಫಿಟ್‍ನೆಸ್ ಚಾಲೆಂಜ್ ಹಾಕಿ ಸುದ್ದಿ ಮಾಡಿದ್ದರು. ಅದು ಇನ್ನೇನೋ ಕಾರಣಕ್ಕೆ ಸದ್ದೂ ಮಾಡಿತ್ತು. ಪ್ರಬುದ್ಧತೆಯಿಂದಲೇ ಅದನ್ನು ನಿಭಾಯಿಸಿದ್ದ ಕಿಚ್ಚ ಸುದೀಪ್, ಈಗ ಪೈಲ್ವಾನ್ ಚಾಲೆಂಜ್ ಹಾಕಿದ್ದಾರೆ. ಬ್ರಿಂಗ್ ಔಟ್ ದ ಪೈಲ್ವಾನ್ ಇನ್ ಯು (ನಿಮ್ಮೊಳಗಿರುವ ಪೈಲ್ವಾನ್ ಹೊರಬರಲಿ) ಅನ್ನೋ ಚಾಲೆಂಜ್ ಅದು.
ಇದು ಶುರುವಾಗಿರುವುದೂ ಅಷ್ಟೆ ಆಕಸ್ಮಿಕವಾಗಿ. ಪೈಲ್ವಾನ್ ಚಿತ್ರದ ನಿರ್ದೇಶಕ ಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು ಕಿಚ್ಚ ಸುದೀಪ್. ಆಗ ಕೃಷ್ಣ, ಧನ್ಯವಾದ ಹೇಳುತ್ತಾ, ಪೈಲ್ವಾನ್ ಚಿತ್ರಕ್ಕಾಗಿ ತೂಕ ಕಳೆದುಕೊಂಡು ಫಿಟ್‍ನೆಸ್ ಕಾಪಾಡಿಕೊಂಡ ಸುದೀಪ್ ಅವರ ಕಮಿಟ್‍ಮೆಂಟ್‍ನ್ನು ಹೊಗಳಿದ್ದರು. ಹಾಗೆ ಸುದೀಪ್ ಅವರ ಬದ್ಧತೆಯನ್ನು ಹೊಗಳುತ್ತಲೇ, ನೀವು ಇನ್ನೂ ಸ್ವಲ್ಪ ತೂಕ ಕಳೆದುಕೊಳ್ಳಬೇಕು. ದೇಹದಾಢ್ರ್ಯತೆಯನ್ನೂ ಚೆನ್ನಾಗಿಟ್ಟುಕೊಳ್ಳಬೇಕು ಎಂದು ನೆನಪಿಸಿದ್ದರು.
ಅದನ್ನು ಪ್ರೀತಿಯಂದಲೇ ಸ್ವೀಕರಿಸಿದ ಕಿಚ್ಚ ಸುದೀಪ್, ಪೈಲ್ವಾನ್ ಚಿತ್ರದ ಶೂಟಿಂಗ್ ಮುಗಿಯೋದ್ರೊಳಗೆ ಇನ್ನೂ 5 ಕೆಜಿ ತೂಕ ಇಳಿಸುತ್ತೇನೆ ಎಂದಿದ್ದರು. ಈಗ ಅದನ್ನು ಟ್ರೆಂಡ್ ಮಾಡಿದ್ದಾರೆ ಸುದೀಪ್.
ಇದನ್ನು ನಾವು ಸಿಂಪಲ್ಲಾಗಿ ಪೈಲ್ವಾನ್ ಚಾಲೆಂಜ್ ಅನ್ನೋಣ. ಇದರ ಪ್ರಕಾರ, ಪ್ರತಿಯೊಬ್ಬರೂ ವ್ಯಾಯಾಮ ಮಾಡುತ್ತಾ, ತಮ್ಮ ದೇದದಾಡ್ರ್ಯತೆಯ ಪ್ರತಿ ತಿಂಗಳ ಫೋಟೋ ಅಪ್‍ಲೋಡ್ ಮಾಡಬೇಕು. ವಿವರ ಕೊಡಬೇಕು. ಅದು ಇನ್ನೊಬ್ಬರಿಗೆ ಸ್ಫೂರ್ತಿಯಾಗಬೇಕು. ಸದ್ಯಕ್ಕೆ ಸುದೀಪ್ ಅನೂಪ್ ಭಂಡಾರಿ, ಕಾರ್ತಿಕ್ ಗೌಡ, ಪವನ್ ಒಡೆಯರ್, ರಾಜೀವ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಮುಂದುವರಿಯಲಿ ಪೈಲ್ವಾನ್ ಚಾಲೆಂಜ್.