ಚಿತ್ರ ನಿರ್ಮಾಪಕ ಕೆ. ಮಂಜು, ಗೆಳೆಯರ ಬಳಗದ ಮೂಲಕ ತುರುವೇಕೆರೆಯಲ್ಲಿ ಶ್ರೀನಿವಾಸ ಕಲ್ಯಾಣ ನಡೆಸಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ನವೆಂಬರ್ 4ರಂದು ತುರುವೇಕೆರೆಯಲ್ಲಿ ಶ್ರೀನಿವಾಸ ಕಲ್ಯಾಣ ನಡೆಯಲಿದೆ. ಅಂದಹಾಗೆ ಮಂಜು ಅವರು ಈ ಕಾರ್ಯಕ್ರಮ ಆಯೋಜಿಸಲು ಕಾರಣ, ಈ ವರ್ಷ ಸುರಿದ ಭಾರಿ ಮಳೆ.
ಉತ್ತಮ ಮಳೆಯಾಗಿದೆ. ಸುಭಿಕ್ಷತೆ ನೆಲೆಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಅಲ್ಲದೆ ಎಷ್ಟೋ ಜನರಿಗೆ ತಿರುಪತಿಗೆ ಹೋಗಿ
ವೆಂಕಟೇಶ್ವರನ ದರ್ಶನ ಪಡೆಯಲು ಸಾಧ್ಯವಾಗುವುದಿಲ್ಲ. ಅಂಥವರು ಇಲ್ಲಿ ಶ್ರೀನಿವಾಸ ಕಲ್ಯಾಣದಲ್ಲಿ ಭಾಗವಹಿಸಿ ದರ್ಶನ ಪಡೆಯಬಹುದು ಎಂದಿದ್ದಾರೆ ಮಂಜು. ಹೀಗಾಗಿಯೇ ಸುಮಾರು 35 ಸಾವಿರ ಭಕ್ತರು ಏಕಕಾಲದಲ್ಲಿ ಭಾಗವಹಿಸಲು ಅನುವಾಗುವಂತೆ ತುರುವೇಕೆರೆಯ ಹಿರಣ್ಣಯ್ಯ ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ.
ಮಂಜು ಅವರಿಗೆ ಕಳೆದ ಬಾರಿ ಶ್ರೀನಿವಾಸ ಕಲ್ಯಾಣ ನಡೆಸಿದ್ದ ಕಹಿ ನೆನಪು ಕೂಡಾ ಇದೆ. ಕಳೆದ ಬಾರಿ ಶ್ರೀನಿವಾಸ ಕಲ್ಯಾಣ ನಡೆಸಿದ್ದು ಹಾಗೂ ಚುನಾವಣೆ ಒಟ್ಟಿಗೇ ಬಂದುಬಿಟ್ಟಿದ್ದವು. ರಾಜಕೀಯದಲ್ಲೂ ಸಕ್ರಿಯವಾಗಿರುವ ಕೆ.ಮಂಜು, ನೀತಿ ಸಂಹಿತೆ ಉಲ್ಲಂಘನೆಯ ಕೇಸ್ ಎದುರಿಸಿದ್ದರು. ನಂತರ ನಿರ್ದೋಷಿಯೆಂದು ಸಾಬೀತಾಗಿತ್ತು.
ತುರುವೇಕೆರೆಯಲ್ಲಿಯೇ ಸುದ್ದಿಗೋಷ್ಟಿ ನಡೆಸಿದ ಕೆ.ಮಂಜು ಶ್ರೀನಿವಾಸ ಕಲ್ಯಾಣದ ವಿವರ ನೀಡಿದ್ದಾರೆ. ಕೆ.ಮಂಜು ಅವರೊಂದಿಗೆ ಪ್ರಸನ್ನ, ಬ್ಯಾಂಕ್ ಶ್ರೀನಿವಾಸ್, ರೈಲ್ವೆ ರಾಮಚಂದ್ರು, ಅರಳೀಕರೆ ಶಿವಯ್ಯ, ಅರಳೀಕರೆ ರವಿಕುಮಾರ್, ಕೋಳಿಘಟ್ಟ ಶಿವಾನಂದ್, ವೆಂಕಟೇಶ್, ಉಪ್ಪಿ ಮೊದಲಾದವರು ಭಾಗವಹಿಸಿದ್ದರು.
ಶ್ರೀನಿವಾಸ ಕಲ್ಯಾಣಕ್ಕೆ ಯಾರು ಬೇಕಾದರೂ ಹೋಗಬಹುದು. ತಿಮ್ಮಪ್ಪನ ದರ್ಶನವಷ್ಟೇ ಅಲ್ಲ, ಭಕ್ತರಿಗೆ ತಿರುಪತಿ ಲಡ್ಡು ಕೂಡಾ ಸಿಗಲಿದೆ.