` elections 2018, - chitraloka.com | Kannada Movie News, Reviews | Image

elections 2018,

 • ಇಂತಹ ಜಗ್ಗೇಶ್ ಗೆಲ್ಲದಿದ್ದರೆ ಹೇಗೆ..? - ಕೆ ಎಂ ವೀರೇಶ್

  jaggesh deserves to win

  ಜಗ್ಗೇಶ್, ನಿಮಗೆಲ್ಲ ಗೊತ್ತಿರುವ ಹಾಗೆ ಒಬ್ಬ ಕಲಾವಿದ. ಹೀಗೆ ಬಂದು ಹಾಗೆ ಹೋಗುವ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಬಂದ ಜಗ್ಗೇಶ್, ಚಿತ್ರರಂಗದಲ್ಲಿ ಏರಿರುವ ಎತ್ತರ ಸಣ್ಣದೇನಲ್ಲ. ರಾಯರನ್ನು ಆರಾಧಿಸುವ, ರಾಜ್‍ಕುಮಾರ್‍ರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ, ಕನ್ನಡವನ್ನ ಹೃದಯದಲ್ಲಿಟ್ಟುಕೊಂಡಿರುವ ನಟ. ಆದರೆ, ನಾನೀಗ ಜಗ್ಗೇಶ್ ಸಿನಿಮಾ ಲೈಫ್ ಬಗ್ಗೆ ಹೇಳಿ ಬೋರ್ ಹೊಡೆಸೋದಿಲ್ಲ. ಜಗ್ಗೇಶ್ ಸಿನಿಮಾ ಲೈಫ್ ಅನ್ನೋದು ತೆರೆದ ಪುಸ್ತಕವಿದ್ದಹಾಗೆ. ಇದು ನಾ ಕಂಡ ಜಗ್ಗೇಶ್ ಕಥೆ. ಜಗ್ಗೇಶ್ ಅವರ ಮಾನವೀಯ, ಹೃದಯವಂತಿಕೆಯ ಕಥೆ. 

  ಜಗ್ಗೇಶ್ ಮತ್ತು ನನ್ನ ಪರಿಚಯ ಕೇವಲ ಪತ್ರಕರ್ತ ಹಾಗೂ ನಟನ ನಡುವಿನ ಸಂಬಂಧಕ್ಕಷ್ಟೇ ಸೀಮಿತ ಅಲ್ಲ. ಏಕೆಂದರೆ ಜಗ್ಗೇಶ್‍ರನ್ನು ನಾನು ಚಿಕ್ಕಂದಿನಿಂದಲೂ ಬಲ್ಲೆ. ಜಗ್ಗೇಶ್ ಶಾಲೆಯಲ್ಲಿ ನನಗೆ ಸೀನಿಯರ್. ಮಲ್ಲೇಶ್ವರಂನ ಬಿಪಿ ಸ್ಕೂಲ್‍ನಲ್ಲಿದ್ದಾಗಿನಿಂದಲೂ ನೋಡಿದ್ದೇನೆ. ಸದಾ ಪಟಾಕಿಯಂತೆ ಸಿಡಿಯುತ್ತಿದ್ದ ಜಗ್ಗೇಶ್ ಆಗಲೂ ಬೆರಗು... ಈಗಲೂ ಬೆರಗು...

  ನಾನು ಪತ್ರಕರ್ತನಾದರೆ, ಜಗ್ಗೇಶ್ ಕಲಾವಿದನಾದರು. ನಾನಾಗ ಮಂಗಳ ಮ್ಯಾಗಜಿನ್‍ಗೆ ಕೆಲಸ ಮಾಡುತ್ತಿದ್ದ ದಿನಗಳು. ಮಂಗಳ ಮ್ಯಾಗಜಿನ್‍ನ ಕವರ್‍ಪೇಜ್‍ನಲ್ಲಿ ಜಗ್ಗೇಶ್ ಅವರ ಫೋಟೋ ಬಂದಿತ್ತು. ಆದರೆ, ಅದನ್ನು ನಾನು ಜಗ್ಗೇಶ್‍ಗೆ ಹೇಳಿರಲಿಲ್ಲ. ಮಲ್ಲೇಶ್ವರಂ 18ನೇ ಕ್ರಾಸ್‍ನಲ್ಲಿ ಹೋಗುತ್ತಿದ್ದಾಗ ಕವರ್ ಪೇಜ್ ನೋಡಿದ ಜಗ್ಗೇಶ್, ಥ್ರಿಲ್ಲಾಗಿದ್ದರು. ಏಕೆಂದರೆ ಕವರ್‍ಪೇಜ್‍ನಲ್ಲಿ ಜಗ್ಗೇಶ್ ಅವರ ಫೋಟೋ ಬಳಸಿದ್ದು ಅದೇ ಪ್ರಥಮವಾಗಿತ್ತು. ಅದು ಅವರಿಗೆ ಅಚ್ಚರಿಯ ಉಡುಗೊರೆಯಾಗಿತ್ತು. ನಂತರ ನನ್ನನ್ನು ಹುಡುಕಿಕೊಂಡು ಥ್ಯಾಂಕ್ಸ್ ಹೇಳಿದ್ದರು.

  ನನ್ನ ಮತ್ತು ಜಗ್ಗೇಶ್ ನಡುವೆ ಪತ್ರಕರ್ತ ಹಾಗೂ ಕಲಾವಿದನ ನಡುವಣ ಸಂಬಂಧಕ್ಕಿಂತ ಹೆಚ್ಚು ಬಾಂಧವ್ಯವಿದೆ. ಹೀಗಾಗಿಯೇ ಜಗ್ಗೇಶ್‍ರನ್ನು ನಾನು ಹತ್ತಿರದಿಂದ ನೋಡಿ ಬಲ್ಲೆ. ಅವರ ಹೃದಯವಂತಿಕೆಗೆ ಬೆರಗಾಗಿದ್ದೇನೆ. ಅವರ ಹತ್ತಿರದವರು ಕಷ್ಟದಲ್ಲಿದ್ದರೆ, ಜಗ್ಗೇಶ್ ಯಾವತ್ತೂ ಸುಮ್ಮನಿದ್ದವರಲ್ಲ. ತಮ್ಮ ಕೈಲಾದ ಸಹಾಯವನ್ನು ಎಷ್ಟು ಸಾಧ್ಯವೋ ಅಷ್ಟು.. ಎಷ್ಟೋ ಬಾರಿ ತಮ್ಮ ಕೈ ಮೀರಿ ಮಾಡಿದ್ದಾರೆ. ಹಾಗೆಂದು ಜಗ್ಗೇಶ್ ಚಿತ್ರರಂಗದಲ್ಲಿಯೇ ಕೋಟಿ ಕೋಟಿ ದುಡಿದವರೇನಲ್ಲ. ಕೆಲವು ವರ್ಷಗಳ ಹಿಂದಿನವರೆಗೂ ಜಗ್ಗೇಶ್ ಅಷ್ಟು ದೊಡ್ಡ ಮೊತ್ತವನ್ನೇನೂ ಪಡೆಯುತ್ತಿರಲಿಲ್ಲ. ಇವತ್ತಿಗೂ ಅವರ ಬಳಿ ಬೌನ್ಸ್ ಆದ ಅದೆಷ್ಟೋ ಚೆಕ್ಕುಗಳು ದೂಳು ಹಿಡಿಯುತ್ತಿವೆ.  ಹೀಗಿದ್ದರೂ ಕಷ್ಟದಲ್ಲಿದ್ದವರನ್ನು ಆತುಕೊಳ್ಳೋದ್ರಲ್ಲಿ ಜಗ್ಗೇಶ್ ಹಿಂದೆ ಬಿದ್ದವರಲ್ಲ.

  ಸುಮಾರು 23 ವರ್ಷಗಳ ಹಿಂದೆ, ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಅವರ ಪತ್ನಿ ನಿಧನರಾಗಿದ್ದರು. ಗೋವಿಂದು ಅವರು ಎಷ್ಟರಮಟ್ಟಿಗೆ ಖಿನ್ನತೆಗೆ ಬಿದ್ದರೆಂದರೆ, ಶೇವ್ ಕೂಡಾ ಮಾಡುತ್ತಿರಲಿಲ್ಲ. ಆಗಾಗ್ಗೆ ಅವರ ಮನೆಗೆ ಹೋಗಿ ಸಾಂತ್ವನ ಹೇಳುತ್ತಿದ್ದ ಜಗ್ಗೇಶ್‍ಗೆ 6 ತಿಂಗಳಾದರೂ ಸಾ.ರಾ.ಗೋವಿಂದು, ಖಿನ್ನತೆಯಿಂದ ಹೊರಬರಲಿಲ್ಲ ಎಂದು ಗೊತ್ತಾಯಿತೋ, ತಕ್ಷಣ ಅವರನ್ನು ಕೆಲಸದಲ್ಲಿ ತೊಡಗಿಸಲು ಮುಂದಾದರು. ಗೋವಿಂದು ಅವರನ್ನು ನಿರ್ಮಾಪಕರನ್ನಾಗಿಸಿ, ವಾಸು ಅವರನ್ನು ಕರೆದು ಇನ್ನೊಂದು ವಾರದಲ್ಲಿ ಸಿನಿಮಾ ಶುರು ಮಾಡುವಂತೆ ತಾಕೀತು ಮಾಡಿದರು. ಆಗ ಬಂದಿದ್ದೇ ವೀರಣ್ಣ ಚಿತ್ರ. ಆಗಿನ ಕಾಲಕ್ಕೆ ಸೂಪರ್ ಹಿಟ್. ಸಾ.ರಾ.ಗೋವಿಂದು ಅವರನ್ನು ಬೆಂಗಳೂರಿನಿಂದ ಹೊರತರಲೆಂದೇ ಮೈಸೂರಿನಲ್ಲಿಯೇ ಲೊಕೇಷನ್ ಫಿಕ್ಸ್ ಮಾಡಿ ಶೂಟ್ ಮಾಡಿಸಿದ್ದರು ಜಗ್ಗೇಶ್. ಆದರೆ, ಮಕ್ಕಳನ್ನು ಬಿಟ್ಟಿರಲು ಸಾಧ್ಯವಿಲ್ಲದ ಸಾ.ರಾ.ಗೋವಿಂದು ಪ್ರತಿದಿನ ಮೈಸೂರಿನಿಂದ ಬೆಂಗಳೂರಿಗೆ ಸ್ವತಃ  ಡ್ರೈವ್ ಮಾಡಿಕೊಂಡು ಹೋಗಿ ಬರುತ್ತಿದ್ದರು. ಅದು ಬೇರೆ ವಿಷಯ.

  1990ರಲ್ಲಿ ಆಗಿನ್ನೂ ಮೊಬೈಲ್ ಕಣ್ಣು ಬಿಡುತ್ತಿದ್ದ ಕಾಲ. ಮೊಬೈಲ್‍ಗಳೋ ದುಬಾರಿ. ಅಂತಹಾ ಮೊಬೈಲ್ ಇಟ್ಟುಕೊಂಡು ಜಗ್ಗೇಶ್ ಜೊತೆ ವಾಕಿಂಗ್ ಮಾಡುತ್ತಾ ಹೋಗುತ್ತಿದ್ದಾಗ ಕಳ್ಳನೊಬ್ಬ ನನ್ನ ಮೊಬೈಲ್‍ನ್ನು ಎಗರಿಸಿಬಿಟ್ಟ. ಕಳ್ಳ ಮೊಬೈಲ್‍ನೊಂದಿಗೆ ಓಡಿ ಹೋದ ಆ ಸಂಜೆಯಲ್ಲಿ ನನ್ನ ಜೊತೆ ಇದ್ದವರು ಜಗ್ಗೇಶ್. ಆಗ ತಮ್ಮದೇ ಮೊಬೈಲ್‍ನ್ನು ನನಗೆ ಕೊಟ್ಟು ನೆರವಾಗಿದ್ದವರು ಜಗ್ಗೇಶ್.

  ಇನ್ನು ಸುಮಾರು 18 ವರ್ಷಗಳ ಹಿಂದೆ ರಾಜಾರಾವ್ ಎಂಬ ಹಿರಿಯ ಪತ್ರಕರ್ತರು ಸಂಕಷ್ಟದಲ್ಲಿದ್ದರು. ಅವರು ತಮ್ಮ ವೃತ್ತಿಯಲ್ಲಿ ಗೌರವವನ್ನು ಸಂಪಾದಿಸಿದ್ದರೇ ಹೊರತು, ಹಣವನ್ನಲ್ಲ. ಸಂಯುಕ್ತ ಕರ್ನಾಟಕದಿಂದ ನಿವೃತ್ತರಾದ ಆ ಪತ್ರಕರ್ತರಿಗೆ ಒಂದು ಸೈಟಾದರೂ ಇದ್ದರೆ ಸಹಾಯವಾಗುತ್ತಿತ್ತು ಎಂದು ಜಗ್ಗೇಶ್ ಬಳಿ ಹೇಳಿದ್ದೆನಷ್ಟೆ.. ಜಗ್ಗೇಶ್ ತಮ್ಮದೊಂದು ಸೈಟ್‍ನ್ನು ರಾಜಾರಾವ್‍ಗೆ ಕಾಣಿಕೆಯಾಗಿ ಕೊಟ್ಟಿದ್ದರು. ಶ್ರೀರಾಂಪುರದಲ್ಲಿ ನಡೆದ ಜಗ್ಗೇಶ್ ಹುಟ್ಟುಹಬ್ಬದ ದಿನ, ಸೈಟ್‍ನ ಉಡುಗೊರೆ ಪಡೆದ ರಾಜಾರಾವ್ ಕಣ್ಣಲ್ಲಿದ್ದುದು ಆನಂದ ಬಾಷ್ಪ.

  ಪತ್ರಕರ್ತರಷ್ಟೇ ಅಲ್ಲ, ಜಗ್ಗೇಶ್ ಅವರಿಂದ ನೆರವು ಪಡೆದವರು ಒಬ್ಬಿಬ್ಬರಲ್ಲ. ನೂರಾರು ಜನ. ಜಗ್ಗೇಶ್‍ರ ನೂರಾರು ಹಸ್ತಗಳಿಗೆ ನಾನು ಸಾಕ್ಷಿ. ಆದರೆ, ಅವುಗಳನ್ನು ಹೊರಗೆ ಹೇಳಿಕೊಳ್ಳಲು ಬಯಸದ ಜಗ್ಗೇಶ್, ಅವುಗಳನ್ನು ಆತ್ಮಸಂತೃಪ್ತಿಗೆ ಮಾಡುತ್ತೇನೆ ಎನ್ನುತ್ತಾರೆ. ಶಾಸಕರಾಗಿದ್ದಾಗಲಂತೂ ಅದೆಷ್ಟು ಜನರಿಗೆ ನೆರವು ನೀಡಿದರೊ.. ಸಹಾಯ ಮಾಡುವ ಶಕ್ತಿಯನ್ನು ದೇವರು ಕೊಟ್ಟಿರುವಾಗ ಮಾಡಿಬಿಡಬೇಕು ಅನ್ನೋದು ಜಗ್ಗೇಶ್ ಪಾಲಿಸಿ. ಹಾಗೆ ನೆರವು ಪಡೆದವರ ಹಾರೈಕೆಗಳು ಜಗ್ಗೇಶ್ ಅವರನ್ನು ಕಾಪಾಡುತ್ತಿವೆ ಅನ್ನೋದು ನಿಜ. ಹಾಗೆಯೇ ನೆರವು ನೀಡಿಯೂ ಕೃತಜ್ಞತೆಯಿಲ್ಲದವರು ಮಾಡಿದ ಅವಮಾನಕ್ಕೆ ಗುರಿಯಾಗಿದ್ದೂ ಇದೆ.

  ಸಂಯುಕ್ತ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಪತ್ರಕರ್ತರೊಬ್ಬರಿಗೆ ಆಕ್ಸಿಡೆಂಟ್ ಆಗಿದೆ ಎಂಬ ಸುದ್ದಿ ಬಂತು. ವಿಷಯ ತಿಳಿದಾಗ ಜಗ್ಗೇಶ್ ಶೂಟಿಂಗ್‍ನಲ್ಲಿದ್ದರು. ಅಪಘಾತದ ಸುದ್ದಿ ತಿಳಿದವರೇ, ಅವರ ಆರ್ಥಿಕ ಸ್ಥಿತಿಗತಿ ಹೇಗಿದೆ ಎಂದು ನನ್ನನ್ನು ಕೇಳಿದರು. ಕಷ್ಟದಲ್ಲಿರುವ ವ್ಯಕ್ತಿ, ಸಹಾಯದ ಅವಶ್ಯಕತೆಯಿದೆ ಎಂದಾಗ, ನಿರ್ದೇಶಕರನ್ನು ಕೇಳಿಕೊಂಡು ಒಂದು ಗಂಟೆ ಬಿಡುವು ಮಾಡಿಕೊಂಡು ಪತ್ರಕರ್ತನ ಮನೆಗೆ ದೌಡಾಯಿಸಿದರು. ಆದರೆ, ಅಲ್ಲೇನಿದೆ... ಆಕ್ಸಿಡೆಂಟ್ ಆಗಿದೆ ಎಂದುಕೊಂಡಿದ್ದ ಪತ್ರಕರ್ತ ನೆಮ್ಮದಿಯಾಗಿ ಕೆಲಸಕ್ಕೆ ಹೋಗಿದ್ದ. ವಾಸ್ತವದ ಅರಿವಾದ ಜಗ್ಗೇಶ್ ಹಾಗೆಯೇ ವಾಪಸ್ ಬರಲಿಲ್ಲ. ತಮ್ಮಲ್ಲಿದ್ದ 10 ಸಾವಿರ ರೂ. ಹಣವನ್ನು ಅವರ ಪತ್ನಿಯ ಕೈಗಿಟ್ಟು, ಸಹಾಯ ಎಂದು ಕೂಡಾ ಹೇಳದೆ, ನಾನೇ ಕೊಡಬೇಕಿತ್ತು ಎಂದು ಹೇಳಿ ಬಂದರು.

  ಆದರೆ, ಹಣ ಸ್ವೀಕರಿಸಿದ ದಿನ ನನಗೆ ಹಾಗೂ ಜಗ್ಗೇಶ್‍ಗೆ ಫೋನ್ ಮಾಡಿ ಕಣ್ಣೀರು ಸುರಿಸಿದ್ದ ಅದೇ ಪತ್ರಕರ್ತ, ಕೆಲವೇ ವರ್ಷಗಳ ನಂತರ ಜಗ್ಗೇಶ್ ವಿರುದ್ಧ ಕಪೋಕಲ್ಪಿತ ಸುದ್ದಿಗಳ ಮೂಲಕ ಕಿರುಕುಳ ಕೊಡಲು ಶುರು ಮಾಡಿದ್ದ. ಆತನನ್ನು ನಿಯಂತ್ರಿಸಿದ್ದು ಕಾನೂನಿನ ಮೂಲಕ. ಆತ ಕೆಲಸ ಮಾಡುತ್ತಿದ್ದ ಪತ್ರಿಕೆಯ ಸಂಪಾದಕರಿಗೆ ದೂರು ಕೊಟ್ಟು, ಆತನನ್ನು ನಿಯಂತ್ರಿಸಬೇಕಾಯ್ತು.

  ತೀರಾ ಇತ್ತೀಚೆಗೆ ಮಲ್ಲೇಶ್ವರಂನಲ್ಲಿ ತಮ್ಮ ಪರಿಚಯದವರೊಬ್ಬರಿಗೆ ಸಹಾಯ ಮಾಡಲು ಹೋಗಿ ವಿವಾದವೊಂದನ್ನು ಮೈಮೇಲೆಳೆದುಕೊಂಡಿದ್ದರು ಜಗ್ಗೇಶ್. ಜಗ್ಗೇಶ್ ಕಾನೂನಿನ ಮೊರೆ ಹೋಗಿದ್ದರೆ, ಅವರ ಎದುರಾಳಿಗಳು ಸೋಷಿಯಲ್ ಮೀಡಿಯಾ ಮೊರೆಹೋಗಿದ್ದರು. ಕೊನೆಗೂ ಅದನ್ನು ಜಗ್ಗೇಶ್ ಗೆದ್ದಿದ್ದು ಕಾನೂನಿನ ಮೂಲಕವೇ.

  ಕನ್ನಡದ ವಿಚಾರ ಬಂದಾಗ ಸದಾ ಧ್ವನಿಯೆತ್ತುವ ಜಗ್ಗೇಶ್, ಹೃದಯವಂತ. ಹೋರಾಟಗಾರ. ಅಂತಹ ಜಗ್ಗೇಶ್ ಈಗ ಯಶವಂತಪುರದಲ್ಲಿ ಬಿಜೆಪಿ ಅಭ್ಯರ್ಥಿ. ಜಗ್ಗೇಶ್‍ರಂತಹವರು ಚುನಾವಣೆ ಗೆಲ್ಲಬೇಕು. ಚಿತ್ರರಂಗದ ನೂರಾರು ಜನರ ಬಯಕೆ ಇದು. ಚಿತ್ರಲೋಕದ ಹಾರೈಕೆಯೂ ಅದೇ.. ಜಗ್ಗೇಶ್ ಗೆಲ್ಲಲಿ. 

India Vs England Pressmeet Gallery

Odeya Audio Launch Gallery