` indira gandhi, - chitraloka.com | Kannada Movie News, Reviews | Image

indira gandhi,

 • ಇಂದಿರಾ ವಿರುದ್ಧ ರಾಜ್ ನಿಲ್ಲಲಿಲ್ಲ ಏಕೆ.? ರಾಘು ಹೇಳಿದ ರಾಜ್ ರಹಸ್ಯ

  inidra gandhi, sm krishna, rajkumar, raghavendra rajkumar image

  ಡಾ.ರಾಜ್‍ಕುಮಾರ್ ಅನ್ನೋ ಕನ್ನಡಿಗರ ಆರಾಧ್ಯ ದೈವ, 1978ರಲ್ಲಿ ರಾಜಕೀಯ ಪ್ರವೇಶಿಸಬೇಕಿತ್ತು. ಆಗ ಲೋಕಸಭೆಯಲ್ಲಿ ಸೋತಿದ್ದ ಇಂದಿರಾ ಗಾಂಧಿ, ಚಿಕ್ಕಮಗಳೂರಿನಲ್ಲಿ ಭವಿಷ್ಯ ಅರಸಿ ಚುನಾವಣೆಗೆ ನಿಂತಿದ್ದರು. ಅವರನ್ನು ಸೋಲಿಸಲು ಪಣ ತೊಟ್ಟಿದ್ದ ಜನತಾ ಪಕ್ಷದವರು ಇಂದಿರಾಗೆ ಎದುರಾಗಿ ನಿಲ್ಲಿಸಲು ಡಾ.ರಾಜ್‍ರನ್ನು ಆಯ್ಕೆ ಮಾಡಿದರು. ಆದರೆ, ಡಾ.ರಾಜ್ ಕುಮಾರ್, ಯಾರ ಕೈಗೂ ಸಿಗದೆ, ಚುನಾವಣೆ ಬಿಸಿ ತಣ್ಣಗಾಗುವವರೆಗೆ ಅಕ್ಷರಶಃ ನಾಪತ್ತೆಯಾಗಿಬಿಟ್ಟರು. ರಾಜಕೀಯಕ್ಕೆ ಬರಲಿಲ್ಲ. ಕನ್ನಡಿಗರ ಹೃದಯದಲ್ಲಿ ಅಣ್ಣಾವ್ರಾಗಿಯೇ ಉಳಿದರು.

  ಆದರೆ, ಡಾ.ರಾಜ್ ಏಕೆ ರಾಜಕೀಯಕ್ಕೆ ಬರಲಿಲ್ಲ..? ಅದನ್ನು ರಾಜ್‍ಕುಮಾರ್ ಬಹಿರಂಗವಾಗಿ ಹೇಳಿಕೊಳ್ಳಲೇ ಇಲ್ಲ. ಇದುವರೆಗೆ ನಮಗೆ ಸಿಕ್ಕಿರುವುದು ಅವರಿವರು ಊಹಿಸಿಕೊಂಡು ಹೇಳಿರುವ ಮಾತುಗಳಷ್ಟೆ. ಈಗ.. ರಾಜ್ ನಿಧನರಾದ 12 ವರ್ಷಗಳ ನಂತರ, ರಾಘವೇಂದ್ರ ರಾಜ್‍ಕುಮಾರ್, ತಮ್ಮ ತಂದೆ ಏಕೆ ರಾಜಕೀಯದಿಂದ ದೂರವೇ ಉಳಿದರು ಅನ್ನೋದನ್ನ ಹೇಳಿದ್ದಾರೆ.

  `ಅಪ್ಪಾಜಿಗೆ ರಾಜಕೀಯಕ್ಕೆ ಸೇರಲು ಆಹ್ವಾನ ಬಂದಾಗ, ನಾನು ಪಿಯುಸಿ ಮುಗಿಸಿದ್ದೆ. ಮೆಡಿಕಲ್ ಸೇರಲು ಸಿದ್ಧನಾಗುತ್ತಿದ್ದೆ. ಆಗ ನಾನು ಅಪ್ಪಾಜಿಯನ್ನು ಕೇಳಿದಾಗ.. `ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ' ಎಂದಿದ್ದರು. ನಿನಗೆ ಇನ್ನೂ ಅರ್ಥವಾಗುವುದಿಲ್ಲ, ಸಮಯ ಬಂದಾಗ ಹೇಳುತ್ತೇನೆ ಎಂದಿದ್ದರು.

  ಅದಾದ ಮೇಲೆ ಅವರಿಗೆ 2005ರಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆ ಆಯ್ತು. ಆಗ ಆಸ್ಪತ್ರೆಯಲ್ಲಿದ್ದಾಗ ಅವರು ರಾಜಕೀಯಕ್ಕೆ ಏಕೆ ಬರಲಿಲ್ಲ ಅನ್ನೋದಕ್ಕೆ ನನ್ನ ಬಳಿ ಕಾರಣ ಹೇಳಿದರು. ಆಗ ಅಮ್ಮ, ಅಣ್ಣ, ತಮ್ಮ, ಬರಗೂರು ರಾಮಚಂದ್ರಪ್ಪ ಯಾರೂ ಆಸ್ಪತ್ರೆಯಲ್ಲಿ ಇರಲಿಲ್ಲ. 

  ಗೋಕಾಕ್ ಚಳವಳಿಗೆ ನನ್ನನ್ನು ಕರೆದಾಗ, ನನ್ನ ಭಾಗವಹಿಸುವಿಕೆಯಿಂದ ಏನೋ ಒಂದು ಬದಲಾವಣೆ ಮಾಡಬಹುದು ಎನಿಸಿತ್ತು. ಹಾಗಾಗಿ ಎರಡನೇ ಯೋಚನೆ ಮಾಡದೆ ಹೋರಾಟಕ್ಕೆ ಹೊರಟೆ. ಆದರೆ, ಇಂದಿರಾ ಗಾಂಧಿಯ ವಿರುದ್ಧ ನಿಲ್ಲಿ ಎಂದಾಗ, ಅದರಲ್ಲಿ ನನಗೆ ಧನಾತ್ಮಕ ಚಿಂತನೆಯೇ ಕಾಣಲಿಲ್ಲ. ಅಲ್ಲಿ, ಅವರಿಗೆ ಇಂದಿರಾ ಅವರನ್ನು ಸೋಲಿಸಲು ಒಬ್ಬ ವ್ಯಕ್ತಿ ಬೇಕಿತ್ತು. ಅದು ನನಗೆ ಇಷ್ಟವಾಗಲಿಲ್ಲ. ಹಾಗಾಗಿ ಚುನಾವಣೆಗೆ ನಿಲ್ಲಲಿಲ್ಲ ಎಂದು ಹೇಳಿಕೊಂಡರು.

  ಅಷ್ಟೇ ಅಲ್ಲ, ರಾಜಕೀಯಕ್ಕೆ, ಜನಸೇವೆ ಮಾಡೋಕೆ ಶಿಕ್ಷಣವೂ ಮುಖ್ಯ. ನನಗೆ ಶಿಕ್ಷಣ ಕಡಿಮೆ. ಅಲ್ಲಿ ಹೋಗಿ ಏನು ಮಾಡಲಿ ಅನ್ನೋದು ಕೂಡಾ ಅಪ್ಪಾಜಿ ಚುನಾವಣೆಯಿಂದ ದೂರ ನಿಲ್ಲೋಕೆ ಒಂದು ಕಾರಣವಾಗಿತ್ತು.

  ನನ್ನನ್ನು ದೇವರು ಕಳಿಸಿರುವುದು ಕಲಾಸೇವೆಗೆ. ಸಿನಿಮಾಗೆ. ನನಗೆ ಗೊತ್ತಿಲ್ಲದ ಕ್ಷೇತ್ರದಲ್ಲಿ ಹೋಗುವುದು ಸರಿಯಲ್ಲ. ಎಂಬುದು ಕೂಡಾ ಡಾ.ರಾಜ್ ನಂಬಿಕೆಯಾಗಿತ್ತು.

  ಆದರೆ ಈಗ ನೋಡಿ..ಡಾ.ರಾಜ್ ತಮ್ಮ ಬಳಿ ಯಾವ್ಯಾವ ಅರ್ಹತೆಗಳಿಲ್ಲ ಎಂದು ರಾಜಕೀಯದಿಂದ ದೂರವುಳಿದರೋ, ಆ ಅರ್ಹತೆಗಳಲ್ಲಿ ನಯಾಪೈಸವೂ ಇಲ್ಲದವರು ಈಗ ರಾಜಕೀಯ ರಂಗವನ್ನಾಳುತ್ತಿದ್ದಾರೆ. 

India Vs England Pressmeet Gallery

Odeya Audio Launch Gallery