ಮಂಡ್ಯದಲ್ಲೀಗ ಸ್ಟಾರ್ ವಾರ್. ಒಂದು ಕಡೆ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ. ಅವರೂ ಸಿನಿಮಾದವರೇ. ಇನ್ನೊಂದ್ ಕಡೆ ಸುಮಲತಾ ಅಂಬರೀಷ್. ಅವರೂ ಸಿನಿಮಾದವರೇ. ಇಬ್ಬರಿಗೂ ಮಂಡ್ಯ ಬೇಕು.
ಅಂಬರೀಷ್ ಪತ್ನಿ ಎಂದೇ ಗುರುತಿಸಿಕೊಂಡಿದ್ದ ಸುಮಲತಾ ಈಗ ಮಂಡ್ಯ ಚುನಾವಣೆ ಯುದ್ಧಕ್ಕಿಳಿದಿದ್ದಾರೆ. ಅವರ ಜೊತೆಗೀಗ ನಿಂತಿರುವುದು ದರ್ಶನ್, ಯಶ್, ರಾಕ್‍ಲೈನ್ ವೆಂಕಟೇಶ್, ದೊಡ್ಡಣ್ಣ, ಜೈ ಜಗದೀಶ್, ವಿಜಯಲಕ್ಷ್ಮಿ ಸಿಂಗ್ ಮೊದಲಾದವರು. ಗಜಕೇಸರಿ ಯಶ್ ಮತ್ತು ಗಜ ದರ್ಶನ್ ಎಡಬಲಗಳಲ್ಲಿ ಕುಳಿತು ಅಮ್ಮನಿಗೆ ಬೆಂಬಲ ಘೋಷಿಸಿದ್ರು.
ದರ್ಶನ್ ನನ್ನ ದೊಡ್ಡ ಮಗ, ಯಶ್ ನನ್ನ ಮನೆ ಮಗ ಎಂದಿದ್ದರು ಸುಮಲತಾ. ವಿಧೇಯ ಮಕ್ಕಳಂತೆ ಸುಮಲತಾ ಅಕ್ಕಪಕ್ಕ ಕುಳಿತಿದ್ದ ದರ್ಶನ್-ಯಶ್, ತಾಯಿಗೆ ಬೆಂಬಲ ಎಂದು ಹೇಳಿದರು. ನನ್ನ ಇಬ್ಬರು ಅಣ್ಣಂದಿರು ಇವತ್ತು ನಮ್ಮ ಜೊತೆಗಿದ್ದಾರೆ ಎಂದರು ಅಭಿಷೇಕ್ ಅಂಬರೀಷ್.
ಎಲ್ಲಿಯೂ ನಿಖಿಲ್ ಬಗ್ಗೆ ಕೆಟ್ಟದಾಗಿ ಮಾತನಾಡದ ಸುಮಲತಾಗೆ ಎದುರಾದ ದೊಡ್ಡ ಪ್ರಶ್ನೆ, ಗೆದ್ದರೆ.. ನೀವು ಗೆದ್ದ ಮೇಲೆ ಬಿಜೆಪಿಗೆ ಹೋಗ್ತೀರಾ.. ಕಾಂಗ್ರೆಸ್‍ಗೆ ಹೋಗ್ತೀರಾ ಎಂಬುದು. ಅದನ್ನು ನಾನು ಜನರ ಮುಂದಿಡುತ್ತೇನೆ. ಜನ ಏನ್ ಹೇಳ್ತಾರೋ ಹಾಗೆ ನಡೆದುಕೊಳ್ತೇನೆ ಎಂದರು ಸುಮಲತಾ.