ರ್ಯಾಪ್ ಸಿಂಗರ್ ಚಂದನ್ ಶೆಟ್ಟಿ, ಬಿಗ್ ಬಾಸ್ ಗೊಂಬೆ ಖ್ಯಾತಿ ನಿವೇದಿತಾ ಗೌಡ ದಸರಾ ಪ್ರೇಮ ನಿವೇದನೆ ವಿವಾದವನ್ನಷ್ಟೇ ಅಲ್ಲ, ತಲ್ಲಣವನ್ನೂ ಸೃಷ್ಟಿಸಿದೆ. ಸಚಿವ ವಿ.ಸೋಮಣ್ಣನವರೇನೋ ಆರಂಭದಲ್ಲಿ ಕೇಸು, ಚಾಮುಂಡೇಶ್ವರಿ ಶಾಪ ಎಂದೆಲ್ಲ ಮಾತನಾಡಿದರೂ, ಕೊನೆ ಕೊನೆಗೆ ಹೋಗ್ಲಿ ಬಿಡಿ ಅತ್ಲಾಗೆ ಎಂದುಕೊಂಡು ಸುಮ್ಮನಾಗಿರುವಂತಿದೆ. ಸಂಸದ ಪ್ರತಾಪ್ ಸಿಂಹ ತಪ್ಪೇನಿದೆ.. ನಾನೇ ಇದ್ದಿದ್ದರೆ ಹೂಗುಚ್ಛ ಕೊಟ್ಟು ಅಭಿನಂದಿಸುತ್ತಿದ್ದೆ ಎಂದಿದ್ದಾರೆ. ಅತ್ತ, ಚಂದನ್ ಶೆಟ್ಟಿ ಕೂಡಾ ತಪ್ಪಾಗಿದ್ದರೆ ಕ್ಷಮಿಸಿ ಎನ್ನುತ್ತಿದ್ದಾರೆ. ಇಷ್ಟಿದ್ದರೂ ಕೇಸುಗಳೇನೂ ಬಿಟ್ಟಿಲ್ಲ.
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿರುದ್ಧ ಒಟ್ಟು 4 ಕೇಸ್ ದಾಖಲಾಗಿವೆ.
ದೂರು ನಂ.1 : ಸರ್ಕಾರಿ ವೇದಿಕೆ ದುರ್ಬಳಕೆ
ದೂರು ನಂ.2 : ವೇದಿಕೆಗೆ ನಿವೇದಿತಾ ಅತಿಕ್ರಮ ಪ್ರವೇಶ
ದೂರು ನಂ.3 : ಸಂಚು ರೂಪಿಸಿ ಪ್ರಚಾರ ಪಡೆದಿರುವುದು
ದೂರು ನಂ. 4 : ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತ ವರ್ತನೆ
ಇದಿಷ್ಟೂ ದಾಖಲಾಗಿರುವ ದೂರುಗಳಲ್ಲಿರೋ ಆರೋಪಗಳು. ಇಬ್ಬರ ವಿರುದ್ಧ ಮೈಸೂರು ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೊಹ್ಸಿನ್ ಖಾನ್, ಆರ್‍ಟಿಐ ಕಾರ್ಯಕರ್ತ ಗಂಗರಾಜು, ಪರಿಸರ ಸಂರಕ್ಷಣಾ ಸಮಿತಿಯ ಭಾನುಮೋಹನ್ ಹಾಗೂ ಕರ್ನಾಟಕ ಪ್ರಜಾ ಪಾರ್ಟಿ ಸದಸ್ಯರು ದೂರು ಕೊಟ್ಟಿದ್ದಾರೆ. ಲಕ್ಷ್ಮೀಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ. ಜಿಲ್ಲಾಧಿಕಾರಿಗಳೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಎಸ್‍ಪಿಯೇ ನೋಟಿಸ್ ಕೊಟ್ಟಿದ್ದಾರೆ. ಪ್ರಕರಣ ಮುಗಿಯುವಂತೆ ಕಾಣುತ್ತಿಲ್ಲ.