ಸಾಧಿಸುವ ಛಲವಿದ್ದರೆ.. ಅದಕ್ಕಾಗಿ ನಿರಂತರ ಶ್ರಮ ವಹಿಸಿದರೆ.. ಗುರಿಯನ್ನು ಮುಂದಿಟ್ಟುಕೊಂಡು.. ಮುನ್ನುಗ್ಗಿದರೆ.. ಗೆಲುವು ಕಟ್ಟಿಟ್ಟ ಬುತ್ತಿ ಎನ್ನುವುದು ಯಾವತ್ತೂ ಸುಳ್ಳಾಗಿಲ್ಲ. ಸ್ಫೂರ್ತಿಯ ಕಥೆಗಳು ನಮ್ಮ ನಡುವೆಯೇ ಇರುತ್ತವೆ. ಹುಡುಕಬೇಕಷ್ಟೆ. ಅಂತಾದ್ದೊಂದು ಕಥೆ 777 ಚಾರ್ಲಿ ಚಿತ್ರದ ಡೈರೆಕ್ಟರ್ ಕಿರಣ್ ರಾಜ್ ಅವರದ್ದು.
ಕಿರಣ್ ರಾಜ್ ಎಸ್‍ಎಸ್‍ಎಲ್‍ಸಿ ಕೂಡಾ ಪಾಸು ಮಾಡೋಕೆ ಆಗಿಲ್ಲವಂತೆ. 10ನೇ ಕ್ಲಾಸಿನಲ್ಲಿದ್ದಾಗಲೇ ಮನೆಯಲ್ಲಿನ ಬಡತನದ ಕಾರಣ ಸ್ಕೂಲು ಬಿಟ್ಟೆ. ನಂತರ ಮಂಗಳೂರಿನ ಹೋಟೆಲೊಂದರಲ್ಲಿ ವೇಯ್ಟರ್ ಆಗಿ ಕೆಲಸಕ್ಕೆ ಸೇರಿದೆ. ನಂತರ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿದೆ. ಇದರ ಮಧ್ಯೆ ಸಿನಿಮಾ ಸೆಳೆಯುತ್ತಲೇ ಇತ್ತು. 2010ರಲ್ಲಿ ಬೆಂಗಳೂರಿಗೆ ಬಂದೆ. ಜ್ಯೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದೆ. ಕೊನೆಗೊಮ್ಮೆ ಬೇಸತ್ತು ಕಾಸರಗೋಡಿಗೆ ಹೋಗಿ ಕಬ್ಬಿನ ಹಾಲು ಶಾರ್ಟ್ ಫಿಲ್ಮ್ ಮಾಡಿದೆ. ಹಾಗೆ ಕೆಲಸ ಮಾಡುತ್ತಿರುವಾಗಲೇ ಜಯತೀರ್ಥ ಅವರ ಪರಿಚಯವಾಯಿತು.. ಎನ್ನುತ್ತಾ ಕಥೆ ಹೇಳುತ್ತಾರೆ ಕಿರಣ್ ರಾಜ್.
ಜಯತೀರ್ಥ ಅವರ ಸಂಪರ್ಕಕ್ಕೆ ಬಂದ ನಂತರ ರಿಕ್ಕಿ, ಎಂದೆಂದಿಗೂ ಚಿತ್ರಗಳಲ್ಲಿ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ ಅನುಭವ ಹೆಚ್ಚಿಸಿಕೊಂಡ ಕಿರಣ್ ರಾಜ್, ನಂತರ ಸ್ಕ್ರಿಪ್ಟ್ ವರ್ಕ್ ಟೀಂಗಳಲ್ಲಿ ಕೆಲಸ ಮಾಡತೊಡಗಿದರು. ಆಗ ಸಿದ್ಧವಾದ ಕಥೆಯೇ 777 ಚಾರ್ಲಿ.
ಈ ಕಥೆಯ ಎಳೆ ಬಂದಾಗ ಕಣ್ಣೆದುರು ಬಂದ ಮೊದಲ ಪಾತ್ರವೇ ರಕ್ಷಿತ್ ಶೆಟ್ಟಿ ಅವರದ್ದು. ಜೊತೆಗೆ ದೊಡ್ಡ ಬ್ಯಾನರ್ ಕೂಡಾ ಸಿಕ್ಕಿತು. ನನ್ನ ಮೊದಲ ಸಿನಿಮಾನೇ ಪ್ಯಾನ್ ಇಂಡಿಯಾ ಆಗಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ ಎನ್ನವುದು ಖುಷಿ ಕೊಟ್ಟಿದೆ.. ಎಂದು ಖುಷಿಯಾಗಿದ್ದಾರೆ ಕಿರಣ್ ರಾಜ್.
ಪರಂವಾ ಸ್ಟುಡಿಯೋಸ್ ನಿರ್ಮಾಣದ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಹೀರೋ. ಸಂಗೀತಾ ಶೃಂಗೇರಿ ನಾಯಕಿ. ಸಿನಿಮಾ ಜೂನ್ 10ಕ್ಕೆ ಜಗತ್ತಿನಾದ್ಯಂತ ರಿಲೀಸ್ ಆಗುತ್ತಿದೆ. ಈಗಾಗಲೇ ಪ್ರೀಮಿಯರ್ ಶೋಗಳೂ ಶುರುವಾಗಿವೆ.