ಒಂದು ಕಡೆ ವಿಕ್ರಾಂತ್ ರೋಣ ಸಿನಿಮಾ ದೇಶದಾದ್ಯಂತ ಸಂಚಲನ ಸೃಷ್ಟಿಸುತ್ತಿದೆ. ಇದೇ ಮೊದಲ ಬಾರಿಗೆ ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಕನ್ನಡದ ಸಿನಿಮಾ ವಿಕ್ರಾಂತ್ ರೋಣ. ರಕ್ಕಮ್ಮ ಹಾಡಿನ ಕ್ರೇಜ್ ಒಂದು ಕಡೆಯಾದರೆ, ಉಳಿದ ಹಾಡುಗಳ ಕಿಚ್ಚು ಮತ್ತೊಂದು ಕಡೆ. ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್`ನ ಸಿನಿಮಾ ಅಮಿತಾಭ್ ಬಚ್ಚನ್ ಸೇರಿದಂತೆ ಸ್ಟಾರ್ ನಟರನ್ನೆಲ್ಲ ಸೆಳೆಯುವಲ್ಲಿ ಗೆದ್ದಿದೆ. ಇದರ ಮಧ್ಯೆಯೇ ಕಿಚ್ಚ ಹೊಸ ಬಿಸಿನೆಸ್ ಆರಂಭಿಸುವ ಉತ್ಸಾಹ ತೋರಿಸಿದ್ದಾರೆ. ಇದು ಸಿನಿಮಾಗೆ ಸಂಬಂಧಿಸಿದ್ದಲ್ಲ. ಸಿನಿಮಾ ಹೊರತಾದ ಅಡುಗೆಗೆ ಸಂಬಂಧಿಸಿದ್ದು.
ಕಿಚ್ಚ ಸುದೀಪ್ ಅವರ ಕ್ವಾಲಿಟಿಗಳಲ್ಲಿ ಇನ್ನೊಂದು.. ಸುದೀಪ್ ಒಳ್ಳೆಯ ಅಡುಗೆ ಭಟ್ಟ. ಮನೆಗೆ ಹೋದವರಿಗೆ ಪ್ರೀತಿಯಿಂದ ಅಡುಗೆ ಮಾಡಿ ಬಡಿಸುವುದು ಎಂದರೆ ಸುದೀಪ್‍ಗೆ ವಿಶೇಷ ಸಂಭ್ರಮ. ಆ ಸಂಭ್ರಮವೇ ಈಗ ಬಿಸಿನೆಸ್ ಆಗುತ್ತಿದೆ.
ಕಾಫಿ & ಬನ್ಸ್ ಇನ್ನೋವೇಷನ್ಸ್ ಅನ್ನೋ ಹೋಟೆಲ್, ರೆಸ್ಟೋರೆಂಟ್ ಉದ್ಯಮ ಆರಂಭಿಸುತ್ತಿದ್ದಾರೆ ಸುದೀಪ್. ಈ ಉದ್ದಿಮೆಗೆ ಎಂದಿನಂತೆ ಸಾಥ್ ಕೊಟ್ಟಿರುವುದು ಪ್ರಿಯಾ ಸುದೀಪ್.
ಅಪ್ಪ ಹೋಟೆಲ್ ಉದ್ಯಮಿ. ಅವರಂತೆ ಸರೋವರದಂತಾ ದೊಡ್ಡ ಸಂಸ್ಥೆ ಕಟ್ಟುತ್ತೇನೆಯೋ ಇಲ್ಲವೋ ಗೊತ್ತಿಲ್ಲ. ಒಂದಂತೂ ನಿಜ. ಅದರಲ್ಲಿ ಸ್ವಲ್ಪವನ್ನಾದರೂ ಸಾಧಿಸಬಲ್ಲೆ. ಈ ಸಂಸ್ಥೆಯ ಅಡಿಯಲ್ಲಿ ಹೋಟೆಲ್, ಕೆಫೆ, ರೆಸ್ಟೋರೆಂಟ್ ಶುರು ಮಾಡಲಿದ್ದೇವೆ ಎಂದಿದ್ದಾರೆ ಸುದೀಪ್. ಸಂಸ್ಥೆಯ ಚೇರ್ಮನ್ ಪ್ರಿಯಾ ಸುದೀಪ್.
ಇದು ಸುದೀಪ್ ಅವರದ್ದೇ ಐಡಿಯಾ. ಹೆಸರೂ ಅವರದ್ದೇ ಸೆಲೆಕ್ಷನ್. 26 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲೇ ಇದ್ದಾರೆ. ಸಿನಿಮಾ, ಕ್ರಿಕೆಟ್, ಹೋಟೆಲ್ ಅವರ ಇಷ್ಟವಾದ ಪ್ಯಾಷನ್ ಎಂದಿದ್ದಾರೆ ಪ್ರಿಯಾ.
ಹಾಗಂತ ಸುದೀಪ್ ಸಿನಿಮಾದಿಂದ ದೂರವಾಗುತ್ತಾರೆ ಎಂದಲ್ಲ. ಕೆಫೆ ಬಿಸಿನೆಸ್ ಪ್ರಿಯಾ ಅವರದ್ದಾದರೆ, ಸಿನಿಮಾ ಸುದೀಪ್ ಅವರದ್ದೇ. ಪ್ರಿಯಾ ಸುದೀಪ್ ಅವರಿಗೆ ವ್ಯವಹಾರ ಚೆನ್ನಾಗಿಯೇ ಗೊತ್ತಿದೆ. ಹೀಗಾಗಿ ಸುದೀಪ್ ಅವರ ಬೆನ್ನ ಹಿಂದಿನ ಶಕ್ತಿಯಾಗಿರೋ ಪ್ರಿಯಾ ಸುದೀಪ್ ತಾವು ಬಿಸಿನೆಸ್ ನೋಡಿಕೊಂಡು ಸುದೀಪ್ ಅವರನ್ನು ಸಂಪೂರ್ಣ ಚಿತ್ರರಂಗಕ್ಕೆ ಬಿಡಲಿದ್ದಾರೆ.
ಇದೆಲ್ಲದರ ಮಧ್ಯೆ ಸುದೀಪ್ ವಿಕ್ರಾಂತ್ ರೋಣ ಚಿತ್ರದ ಪ್ರಚಾರದಲ್ಲಿ ಬ್ಯುಸಿ. ಇದರ ಅಂಗವಾಗಿ ಜುಲೈ 25ಕ್ಕೆ ಕಿಚ್ಚವರ್ಸ್ ಲಾಂಚ್ ಆಗುತ್ತಿದೆ.