ಶ್ರೇಯಸ್, ಕನ್ನಡ ಚಿತ್ರರಂಗದ ಕೆಲವೇ ಕೆಲವು ಸ್ಟಾರ್ ನಿರ್ಮಾಪಕರಲ್ಲಿ ಒಬ್ಬರಾದ ಕೆ.ಮಂಜು ಅವರ ಪುತ್ರ. ಅವರ ಮೊದಲ ಸಿನಿಮಾ ಪಡ್ಡೆಹಲಿ. ಆ ಚಿತ್ರದ ನಿರ್ಮಾಪಕ ಮಂಜು ಅಲ್ಲ, ರಮೇಶ್ ರೆಡ್ಡಿ ನುಂಗ್ಲಿ. ಅವರು ಮಂಜು ಅವರ ಗೆಳೆಯ. ಗೆಳೆಯನ ಮಗನನ್ನು ಬೆಳ್ಳಿತೆರೆಗೆ ಲಾಂಚ್ ಮಾಡುವ ಜವಾಬ್ದಾರಿ ಹೊತ್ತಿರುವುದೇ ಅವರು.
ಈ ಅವಕಾಶ ಸಿಕ್ಕಿದ್ದು ಮಂಜು ಅವರ ಪುತ್ರ ಎನ್ನುವ ಕಾರಣಕ್ಕಾ ಎಂದು ಪ್ರಶ್ನಿಸಿದರೆ, ಮುಚ್ಚುಮರೆಯಿಲ್ಲದೆ ಹೌದು ಎನ್ನುತ್ತಾರೆ ಶ್ರೇಯಸ್. ಮಾತು ಅಷ್ಟಕ್ಕೇ ನಿಲ್ಲೋದಿಲ್ಲ.
ಅಪ್ಪನ ಹೆಸರಲ್ಲಿ ಅವಕಾಶ ಸಿಕ್ಕಿರಬಹುದು. ಮುಂದೆಯೂ ಕೆಲವು ಅವಕಾಶಗಳು ಅದೇ ಕಾರಣಕ್ಕೆ ಬರಬಹುದು. ಆದರೆ, ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು ಎಂದರೆ, ನನಗೂ ಆಸಕ್ತಿ, ನಟನೆಯ ಬಗ್ಗೆ ತಿಳುವಳಿಕೆ, ನಿರ್ದೇಶಕನ ಕನಸಿಗೆ ಸಾರಥಿಯಾಗುವ ಶಕ್ತಿ ಇರಬೇಕು. ಅದು ನಿರ್ದೇಶಕರ ಎದುರು ನಿಂತ ಕೂಡಲೇ ನನಗೆ ಅರ್ಥವಾಗಿ ಹೋಯ್ತು. ಹೀಗಾಗಿ, ಮುಂದೆಯೂ ಶ್ರಮ ಹಾಕುತ್ತೇನೆ, ನಿರ್ದೇಶಕರ ವಿಶ್ವಾಸ ಉಳಿಸಿಕೊಂಡು ಬೆಳೆಯುತ್ತೇನೆ ಎನ್ನುತ್ತಾರೆ ಶ್ರೇಯಸ್.
ಹಾಗಾದರೆ, ಅಪ್ಪನ ಹೆಸರನ್ನು ಬಳಸಿಕೊಳ್ಳೋದಿಲ್ವಾ ಎಂದರೆ ಅವರ ಜಾಣ್ಮೆಯ ಉತ್ತರ ರೆಡಿ. ಅಪ್ಪನ ಹೆಸರು ಹೇಳಿದರೆ ಕೆಲಸ ಆಗುತ್ತೆ ಅನ್ನೋದಾದ್ರೆ ಹೆಸರು ಬಳಸಿಕೊಳ್ತೇನೆ. ಆದರೆ, ನನ್ನ ಬೆಳವಣಿಗೆಗೆ ನಾನೇ ಶ್ರಮ ಹಾಕುತ್ತೇನೆ ಎನ್ನುತ್ತಾರೆ ಶ್ರೇಯಸ್.
ಪಡ್ಡೆಹುಲಿ ಚಿತ್ರಕ್ಕೆ ಶ್ರೇಯಸ್ ಹೀರೋ. ನಿಶ್ವಿಕಾ ನಾಯ್ಡು ಹೀರೋಯಿನ್. ರವಿಚಂದ್ರನ್-ಸುಧಾರಾಣಿ, ಪುನೀತ್ ರಾಜ್‍ಕುಮಾರ್, ರಕ್ಷಿತ್ ಶೆಟ್ಟಿ ನಟಿಸಿರುವ ಚಿತ್ರಕ್ಕೆ ಗುರು ದೇಶಪಾಂಡೆ ಡೈರೆಕ್ಟರ್.