ಅಂಬರೀಷ್ ಮೃತಪಟ್ಟ ದಿನ ಸ್ವೀಡನ್‍ನಲ್ಲಿದ್ದ ದರ್ಶನ್, ತರಾತುರಿಯಲ್ಲಿ ಬೆಂಗಳೂರಿಗೆ ಬಂದರು. ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದರು. ಅಮ್ಮ ಸುಮಲತಾ, ಅಭಿಷೇಕ್‍ಗೆ ಆಸರೆಯಾದರು.
ಆದರೆ, ಸ್ವೀಡನ್‍ನಿಂದ ಬೆಂಗಳೂರಿಗೆ ಬರುವುದು ಸುಲಭವಾಗಿರಲಿಲ್ಲ. ಭಾರತ ಮತ್ತು ಸ್ವೀಡನ್ ನಡುವೆ ಸಂಚಾರ ಕಡಿಮೆ. ಹೀಗಾಗಿ ವಿಮಾನಗಳೂ ಕಡಿಮೆ. ಟಿಕೆಟ್ ಸಿಗುವುದಿಲ್ಲ. ವಿಷಯ ಗೊತ್ತಾದ ಕ್ಷಣದಿಂದ ಚಡಪಡಿಸುತ್ತಿದ್ದ ದರ್ಶನ್, ಪತ್ನಿ ವಿಜಯಲಕ್ಷ್ಮಿಯನ್ನು ತಕ್ಷಣ ಅಂಬಿ ಮನೆಗೆ ಕಳಿಸಿದರು. ಸುಮಲತಾರನ್ನು ಬಿಟ್ಟು ಹೋಗದಂತೆ ಸೂಚಿಸಿದರು. ಇತ್ತ ನಾವು ಟಿಕೆಟ್ ಹೊಂದಿಸಲು ಒದ್ದಾಡುತ್ತಿದ್ದೆವು ಎಂದು ಆ ದಿನದ ಘಟನೆ ಹೇಳಿದ್ದಾರೆ ಯಜಮಾನ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್.
ಬಿ.ಸುರೇಶ್, ಸ್ವೀಡನ್‍ನಿಂದ ಫ್ಲೈಟ್ ಸಿಗದೆ ಸ್ವೀಡನ್‍ನಿಂದ ದುಬೈಗೆ ಒಂದು, ದುಬೈನಿಂದ ಬೆಂಗಳೂರಿಗೆ ಒಂದು ಫ್ಲೈಟ ಬುಕ್ ಮಾಡಿದ್ರು. ಬೇರೆ ಮಾರ್ಗವೇ ಇರಲಿಲ್ಲ. ದುಬೈನಲ್ಲಿ ಬೆಂಗಳೂರಿನ ವಿಮಾನಕ್ಕಾಗಿಯೇ 4 ಗಂಟೆ ಕಾಯಬೇಕಾಯ್ತು. ಎಮರ್ಜೆನ್ಸಿಯಲ್ಲಿ ಟಿಕೆಟ್ ಬುಕ್ ಮಾಡಿದ್ದರಿಂದಾಗಿ 4 ಲಕ್ಷ ರೂ. ಖರ್ಚಾಯ್ತು. ಹಣ ಮುಖ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ ಶೈಲಜಾ ನಾಗ್.
ಸ್ವೀಡನ್‍ನಲ್ಲಿ ನಡೆಯಬೇಕಿದ್ದ ಯಜಮಾನ ಚಿತ್ರದ ಇನ್ನೊಂದು ಹಾಡನ್ನು ಬೆಂಗಳೂರಿನಲ್ಲೇ ಚಿತ್ರೀಕರಿಸಲು ಚಿತ್ರತಂಡ ನಿರ್ಧರಿಸಿದೆ. ಇಡೀ ಚಿತ್ರತಂಡ ಈಗ ಬೆಂಗಳೂರಿಗೆ ವಾಪಸ್ ಆಗಿದೆ. ಜನವರಿ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.