ಬೆಟ್ಟದ ಹೂವು. 1984ರಲ್ಲಿ ಬಂದಿದ್ದ ಸಿನಿಮಾ. ಪಾರ್ವತಮ್ಮ ರಾಜ್‍ಕುಮಾರ್ ನಿರ್ಮಾಣದ ಆ ಸಿನಿಮಾ, ಇವತ್ತಿಗೂ ಕನ್ನಡದ ಅತ್ಯುತ್ತಮ ಮಕ್ಕಳ ಚಿತ್ರಗಳಲ್ಲಿ ಒಂದು. ಪುನೀತ್ ರಾಜ್‍ಕುಮಾರ್‍ಗೆ ರಾಷ್ಟ್ರಪ್ರಶಸ್ತಿ ದೊರಕಿಸಿಕೊಟ್ಟಿದ್ದ ಸಿನಿಮಾ ಅದು. ಸಿನಿಮಾ ಬಂದಾಗ ಪುನೀತ್‍ಗೆ 10 ವರ್ಷ. ಈಗ.. 34 ವರ್ಷಗಳ ನಂತರ ಪುನೀತ್, ಬೆಟ್ಟದ ಹೂವಿನ ಚಿತ್ರೀಕರಣ ನಡೆದ ಜಾಗ ಅತ್ತಿಬೆಲೆಯಲ್ಲಿ ಆ ದಿನಗಳ ಹುಡುಕಾಟ ನಡೆಸಿದ್ದಾರೆ. ನಟಸಾರ್ವಭೌಮ ಚಿತ್ರದ ಚಿತ್ರೀಕರಣಕ್ಕಾಗಿ ಹೋಗಿದ್ದ ಅಪ್ಪುಗೆ, ಇಲ್ಲಿಯೇ ಅಲ್ಲವಾ ಬೆಟ್ಟದ ಹೂವು ಚಿತ್ರೀಕರಣ ನಡೆಸಿದ್ದು ಎಂಬ ಬಾಲ್ಯದ ನೆನಪು ಮರುಕಳಿಸಿಬಿಟ್ಟಿದೆ. ತಕ್ಷಣವೇ ಹುಡುಕಾಟಕ್ಕೆ ನಿಂತುಬಿಟ್ಟಿದ್ದಾರೆ.
ಚಿತ್ರದ ನಿರ್ದೇಶಕ ಲಕ್ಷ್ಮೀನಾರಾಯಣ್, ಚಿತ್ರೀಕರಣದ ವೇಳೆ ತಮ್ಮನ್ನು ನೋಡಿಕೊಂಡಿದ್ದ ಚಿಕ್ಕಪ್ಪ ವರದಪ್ಪ, ಬಾಲಣ್ಣ, ಹೊನ್ನವಳ್ಳಿ ಕೃಷ್ಣ, ಗೌರಿಶಂಕರ್, ಪದ್ಮಾವಾಸಂತಿ, ಬ್ರಹ್ಮಾವರ್.. ಹೀಗೆ ಎಲ್ಲರ ಜೊತೆ ಕಳೆದ ಕ್ಷಣಗಳನ್ನೂ ಮೆಲುಕು ಹಾಕಿದ್ದಾರೆ. ಕೆಲವು ಜಾಗಗಳು ನೆನಪಿಗೆ ಬಂದಿಲ್ಲ. ಊರಿನವರನ್ನು ಮಾತನಾಡಿಸಿ, ಜಾಗಗಳನ್ನೆಲ್ಲ ನೋಡಿ ಖುಷಿಪಟ್ಟಿದ್ದಾರೆ ಪುನೀತ್.
ಅನಿರೀಕ್ಷಿತವಾಗಿ ಬಂದ ರಾಜಕುಮಾರನನ್ನು ಅಭಿಮಾನದಿಂದ ಸ್ವಾಗತಿಸಿದ ಅತ್ತಿಬೆಲೆ ಗ್ರಾಮದ ಜನ, ಅಪ್ಪು ಜೊತೆ ಫೋಟೋ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ. ತಮ್ಮ ನೆನಪಿನ ಕಥೆಗಳನ್ನೂ ಹೇಳಿದ್ದಾರೆ.
ಬೆಟ್ಟದ ಹೂವು.. ಮುಗ್ದ ಬಾಲಕನೊಬ್ಬನ ರಾಮಾಯಣ ಓದುವ ಕನಸು ಹೊತ್ತವನ ಸಿನಿಮಾ. ರಾಮಾಯಣ ಪುಸ್ತಕ ಕೊಳ್ಳಲೆಂದು ದಿನಕ್ಕೆ 10 ಪೈಸೆ ಕೂಡಿಟ್ಟು, 10 ರೂಪಾಯಿ ಆದ ಮೇಲೆ ರಾಮಾಯಣ ಕೊಳ್ಳದೆ, ಅಮ್ಮನಿಗೆ ರಗ್ಗು ತಂದುಕೊಡುವ ಬಾಲಕನ ಚಿತ್ರ.
ಆ ಚಿತ್ರದ ತಾಯಿ ಶಾರದೆ ಲೋಕ ಪೂಜಿತೆ.. ಇಂದಿಗೂ ಹಲವಾರು ಶಾಲೆಗಳಲ್ಲಿ ಪ್ರಾರ್ಥನಾ ಗೀತೆ. ಬಿಸಿಲೇ ಇರಲಿ.. ಮಳೆಯೇ ಬರಲಿ.. ಹಾಗೂ ಪಟ್ಟೆಹುಲಿ ಬಲು ಕೆಟ್ಟಹುಲಿ ಹಾಡುಗಳು ಇವತ್ತಿಗೂ ಜನಪ್ರಿಯ ಗೀತೆಗಳು.