ಲೂಸ್ ಮಾದ ಯೋಗಿಯ ಸಿನಿಮಾ ರಿಲೀಸ್ ಆಗಿ ಬಹಳ ದಿನಗಳಾಗಿತ್ತು. ಒಂದು ಸುದೀರ್ಘ ವಿರಾಮದ ನಂತರ ಬರುತ್ತಿರುವ ಚಿತ್ರ ಯೋಗಿ ದುನಿಯಾ. ದುನಿಯಾ ಚಿತ್ರದ ಮೂಲಕವೇ ನಟನಾಗಿ ಪರಿಚಯಗೊಂಡ ಯೋಗಿ, ಈಗ ಯೋಗಿ ದುನಿಯಾ ಮೂಲಕ ದೊಡ್ಡ ಬ್ರೇಕ್ ಎದುರು ನೋಡುತ್ತಿದ್ದಾರೆ. ಇಷ್ಟು ಸುದೀರ್ಘ ಗ್ಯಾಪ್ ಏಕೆ ಎಂದಾಗ ಯೋಗಿ ಬಿಚ್ಚಿಟ್ಟ ಯೋಗಿ ದುನಿಯಾದ ಕಥೆ ಇದು.
ನಾನು ವರ್ಷಕ್ಕೆ ನಾಲ್ಕು, ಐದು ಸಿನಿಮಾ ಮಾಡುತ್ತಿದ್ದೆ. ಎಷ್ಟೋ ಬಾರಿ ನಾನು ಕೇಳುತ್ತಿದ್ದ ಕಥೆಗೂ, ತೆರೆ ಮೇಲೆ ಬಂದ ಕಥೆಗೂ ತಾಳಮೇಳವೇ ಇರುತ್ತಿರಲಿಲ್ಲ. ಹಾಗೆಂದು ಯಾರನ್ನೂ ದೂರೋಕೆ ಹೋಗಲ್ಲ. ಒಟ್ಟಿನಲ್ಲಿ ಸತತ ಫ್ಲಾಪ್‍ಗಳ ಹೊಣೆಯನ್ನು ಹೊತ್ತುಕೊಂಡೆ. ಇದರ ಮಧ್ಯೆ ನಿರ್ದೇಶಕ ಹರಿ ಈ ಚಿತ್ರದ ಕಥೆ ಹೇಳಿದರು. ಪಾತ್ರಗಳನ್ನು ಅವರು ವಿವರಿಸಿದ ರೀತಿ ಇಷ್ಟವಾಯ್ತು. ನಂತರ, ಅದನ್ನು ನಮ್ಮ ತಂದೆ ಹಾಗೂ ಅವರ ಗೆಳೆಯರಿಗೆ ಹೇಳಿಸಿದೆ. ಅವರೂ ಇಷ್ಟಪಟ್ಟರು.
ಸಿನಿಮಾ ಮುಗಿಯುವ ಹೊತ್ತಿಗೆ ಇನ್ಯಾರೋ ದುನಿಯಾ ಟೈಟಲ್ ನನ್ನದು ಎಂದು ಕೋರ್ಟ್ ಮೆಟ್ಟಿಲೇರಿದರು. ಪರಿಸ್ಥಿತಿ ನಮ್ಮ ಕೈ ಮೀರಿತ್ತು. ಹೀಗಾಗಿ ಚಿತ್ರದ ಬಿಡುಗಡೆ ತಡವಾಯ್ತು. ಚಿತ್ರದಲ್ಲಿ ಇರೋದು ಕ್ರಿಕೆಟ್ ಬೆಟ್ಟಿಂಗ್ ಸ್ಟೋರಿ. ಜನ ಹೇಗೆ ತಮ್ಮ ದುಡಿಮೆಯ ಹಣವನ್ನು ಬೆಟ್ಟಿಂಗ್‍ಗೆ ಸುರಿದು ಹಾಳಾಗುತ್ತಿದ್ದಾರೆ ಎನ್ನುವ ಕಥೆಯನ್ನು ಕಮರ್ಷಿಯಲ್ಲಾಗಿ ಹೇಳಲಾಗಿದೆ.
ಅಂದಹಾಗೆ ಸಿನಿಮಾ ರಿಲೀಸ್ ಆಗುತ್ತಿರುವುದು ಐಪಿಎಲ್ ಆರಂಭವಾಗುವುದಕ್ಕೆ ಕೆಲವೇ ದಿನಗಳ ಮುಂಚೆ ಎನ್ನುವುದು ವಿಶೇಷ.