ಅಂಬರೀಷ್ರನ್ನು ಕಲಿಯುಗ ಕರ್ಣ ಎನ್ನುತ್ತಾರೆ. ತಾಯಿಗೊಬ್ಬ ಕರ್ಣ ಸಿನಿಮಾ ಮಾಡಿದ್ದಕ್ಕೆ ಆ ಹೆಸರು ಬಂದಿದೆ ಎಂದುಕೊಂಡಿದ್ದರೆ, ಅದು ತಪ್ಪು. ಅಂಬರೀಷ್ ಇದ್ದುದೇ ಹಾಗೆ. ಅವರಿಂದ ನೆರವು ಪಡೆದವರ ಸಂಖ್ಯೆ ಅಸಂಖ್ಯ. ತಾವು ಮಾಡಿದ ಯಾವುದೇ ನೆರವನ್ನು ಅವರು ಹೊರಗೆ ಹೇಳಿಕೊಂಡವರಲ್ಲ. ಸಹಾಯ ಪಡೆದವರ ಸ್ವಾಭಿಮಾನಕ್ಕೆ ಘಾಸಿಯಾಗಬಾರದು ಎನ್ನುವುದು ಅವರು ಇಟ್ಟುಕೊಂಡಿದ್ದ ನಂಬಿಕೆ. ಸಹಾಯ ಪಡೆದವರೇ, ಬೆನ್ನಿಗೆ ಇರಿದಾಗಲೂ.. ಹೋಗ್ಲಿ ಬಿಡು ಎಂದಿದ್ದಾರೆ. ಬೆನ್ನಿಗೆ ಇರಿದವರೇ ಸಹಾಯ ಕೇಳಿದಾಗಲೂ ಥಟ್ಟನೆ ಎದ್ದು ನಿಂತು ನೆರವು ಕೊಟ್ಟಿದ್ದಾರೆ. ಅದು ಅಂಬರೀಷ್. ಮಾತಷ್ಟೇ ಒರಟು. ಮನಸು.. ಅಪ್ಪಟ ಮಂಡ್ಯದ ಸಕ್ಕರೆ.
ಗುರುವಿನ ಎದುರು : ಮಸಣದ ಹೂವು ಸಿನಿಮಾ ನೋಡಿರುತ್ತೀರಿ. ಅದು ಅಂಬಿಯ ಗುರು ಪುಟ್ಟಣ್ಣನವರ ಕೊನೆಯ ಸಿನಿಮಾ. ಆ ಸಿನಿಮಾ ಮಾಡುವಾಗ ಅಂಬಿ ರೆಬಲ್ಸ್ಟಾರ್. ಯಶಸ್ಸಿನ ಉತ್ತುಂಗದಲ್ಲಿದ್ದ ದಿನಗಳು. ಆಗ ಪುಟ್ಟಣ್ನ, ಮಸಣದ ಹೂವು ಚಿತ್ರಕ್ಕೆ ಅಂಬಿಯವರನ್ನು ಕೇಳಿದರು. ಗುರುವಿಗೆ ಓಕೆ ಎಂದರು ಅಂಬಿ. ಪುಟ್ಟಣ್ಣ ಕಥೆ ಹೇಳೋಕೆ ಹೋದಾಗ.. ಗುರುಗಳೇ.. ನೀವು ಕಥೆ ಹೇಳಬೇಡಿ. ನೀವು ಯಾವ ಪಾತ್ರವನ್ನಾದರೂ ಕೊಡಿ. ಮಾಡೋಕೆ ನಾನು ರೆಡಿ ಎಂದಿದ್ದರು ಅಂಬಿ. ನಿಮಗೆ ನೆನಪಿರಲಿ.. ಆ ಚಿತ್ರದಲ್ಲಿ ಅಂಬರೀಷ್ ಪಿಂಪ್ ಪಾತ್ರ ಮಾಡಿದ್ದರು. ಸ್ಟಾರ್ಗಿರಿಯನ್ನು ಪಕ್ಕಕ್ಕಿಟ್ಟು, ಪೋಷಕ ನಟನಾಗಿ ನಟಿಸಿದ್ದರು. ಆ ಪಾತ್ರ ಅವರಿಗೆ ಪ್ರಶಸ್ತಿ ಕೊಡಿಸಿತ್ತು.
ಪ್ರಭಾಕರ್ ಸಂಸ್ಕಾರದ ವೇಳೆ : ಟೈಗರ್ ಪ್ರಭಾಕರ್, ಬದುಕಿರುವ ಅಷ್ಟೂ ದಿನ ಟೈಗರ್ ಆಗಿಯೇ ಇದ್ದವರು. ಕೊನೆ ದಿನಗಳಲ್ಲಿ ದುಡ್ಡನ್ನೆಲ್ಲ ಕಳೆದುಕೊಂಡಿದ್ದರು. ಮಲ್ಯ ಆಸ್ಪತ್ರೆಯಲ್ಲಿ ನಿಧನರಾದಾಗ ಅವರ ಮೃತದೇಹವನ್ನು ಕೊಡಲು ನಿರಾಕರಿಸಿದ್ದರು. ಕಾರಣ, ಬಿಲ್ ಕಟ್ಟಿರಲಿಲ್ಲ. ವಿಷಯ ಗೊತ್ತಾಗಿದ್ದೇ ತಡ, ಆಸ್ಪತ್ರೆಯವರಿಗೆ ಫೋನ್ ಮಾಡಿ, ಬಿಲ್ ಎಷ್ಟಾದರೂ ಆಗಿರಲಿ. ಬಿಲ್ ನಾನು ಕಟ್ಟುತ್ತೇನೆ ಎಂದು ಹೇಳಿದ್ದರು ಅಂಬಿ. ಪ್ರಭಾಕರ್ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದರು.
ಸುಧೀರ್ ಮನೆ ಅಂಬರೀಷ್ ನಿಲಯ : ಅದನ್ನು ಅಂಬಿ ಮುಚ್ಚಿಟ್ಟರೂ, ಸುಧೀರ್ ಮುಚ್ಚಿಡಲಿಲ್ಲ. ಕಷ್ಟದ ದಿನಗಳಲ್ಲಿ ಮನೆ ಕಟ್ಟಿಸಿಕೊಳ್ಳಲು ನೆರವಾಗಿದ್ದ ಗೆಳೆಯನ ನೆನಪಿಗಾಗಿ ಸುಧೀರ್, ತಮ್ಮ ಮನೆಗೆ ಅಂಬರೀಷ್ ನಿಲಯ ಎಂದೇ ಹೆಸರಿಟ್ಟಿದ್ದಾರೆ.
ವಜ್ರಮುನಿಗೆ ಜೀವ ನೀಡಿದ್ದರು : ವಜ್ರಮುನಿ ನಿರ್ಮಾಪಕರಾಗಿ ಲಾಸ್ ಆಗಿದ್ದಾಗ, ಅವರಿಗೆ ಗಂಡಭೇರುಂಡ ಚಿತ್ರ ನಿರ್ಮಿಸು ಎಂದು ಹೇಳಿ, ಸಂಭಾವನೆ ತೆಗೆದುಕೊಳ್ಳದೇ ನಟಿಸಿದ್ದರು ಅಂಬಿ. ತಾವಷ್ಟೇ ಅಲ್ಲ, ಆ ಚಿತ್ರದಲ್ಲಿ ನಟಿಸಿದ್ದ ಶಂಕರ್ನಾಗ್, ಶ್ರೀನಾಥ್ರನ್ನೂ ಕಡಿಮೆ ಸಂಭಾವನೆಗೆ ಒಪ್ಪಿಸಿದ್ದರು. ಚಿತ್ರ ಯಶಸ್ವಿಯಾಗಿತ್ತು. ವಜ್ರಮುನಿ ಸಾಲಭಾದೆ ತೀರಿತ್ತು.
ಇದೆಲ್ಲ ನೆನಪಾಗಿದ್ದು ಅಂತ್ಯ ಸಂಸ್ಕಾರದ ವೇಳೆ ಕಾಣಿಸಿಕೊಂಡ ಅಂಗವಿಕಲ ಯುವತಿಯೊಬ್ಬಳ ಮಾತಿನಿಂದ. ಆಕೆಗೆ ಅಂಬರೀಷ್, ಸಾಲ, ಜಾಗ ಎಲ್ಲವನ್ನೂ ಕೊಡಿಸಿ ಜೀವನಕ್ಕೆ ದಾರಿ ಕಲ್ಪಿಸಿದ್ದರು. ಅಂತಹ ಋಣಗಳನ್ನು ಅದೆಷ್ಟು ಜನರ ಮೇಲೆ ಹೊರಿಸಿ ಹೋಗಿದ್ದಾರೋ ಅಂಬಿ.