ಏಕ್ ಲವ್ ಯಾ ಟೀಸರ್ ಹೊರಬಿದ್ದ ಕ್ಷಣದಿಂದ ಚರ್ಚೆಯಾಗುತ್ತಿರೋದು ಇದೇ ವಿಷಯ. ಇತ್ತೀಚೆಗೆ ಐ ಲವ್ ಯೂ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸಿದ್ದ ರಚಿತಾ ರಾಮ್, ಈ ಚಿತ್ರದಲ್ಲಿ ಹೀರೋ ರಾಣಾ ಜೊತೆ ಲಿಪ್ ಲಾಕ್ ಮಾಡಿದ್ದಾರೆ. ರಚಿತಾ ಇದುವರೆಗೆ ಯಾವುದೇ ಚಿತ್ರದಲ್ಲಿ ಚುಂಬನ ದೃಶ್ಯಗಳಲ್ಲಿ ನಟಿಸಿರಲಿಲ್ಲ. ಅಷ್ಟೇ ಅಲ್ಲ, ಜೋಗಿ ಪ್ರೇಮ್ ಚಿತ್ರಗಳಲ್ಲಿಯೂ ಇದುವರೆಗೆ ಕಿಸ್ಸಿಂಗ್ ಸೀನ್ ಇರಲೇ ಇಲ್ಲ. ಈ ಬಗ್ಗೆ ಕೇಳಿದಾಗ ಜೋಗಿ ಪ್ರೇಮ್ ಹೇಳಿರೋದು ಇದು.
ನಾನು ಸುಮ್‌ಸುಮ್ನೆ ನಾನು ಕಿಸ್ಸಿಂಗ್ ಸೀನ್ ಇಟ್ಟಿಲ್ಲ. ಕಿಸ್ಸಿಂಗ್ ಸೀನ್ ಕಥೆಗೆ ಅವಶ್ಯಕವಾಗಿದ್ದರೆ ಇಡೋದ್ರಲ್ಲಿ ತಪ್ಪೇನಿಲ್ಲ. ಸುಮ್ ಸುಮ್ನೆ ತುರುಕಬಾರದು. ಸಿನಿಮಾ ನೋಡಿ, ಆ ದೃಶ್ಯ ಏಕೆ ಇದೆ ಅನ್ನೋದು ನಿಮಗೇ ಗೊತ್ತಾಗುತ್ತೆ ಎನ್ನುತ್ತಾರೆ ಡೈರೆಕ್ಟರ್ ಪ್ರೇಮ್.
ಇನ್ನು ಆ ದೃಶ್ಯ ಮಾಡೋಕೆ ಕಾರಣ ಏನು ಅಂದ್ರೆ ರಚಿತಾ ರಾಮ್ ಹೇಳೋದಿಷ್ಟು. ‘ನನಗೆ ಪ್ರೇಮ್ ಚಿತ್ರದಲ್ಲಿ ನಟಿಸಬೇಕು ಅನ್ನೋ ಆಸೆಯಿತ್ತು. ಹಾಗಾಗಿ ಈ ಚಿತ್ರ ಒಪ್ಪಿಕೊಂಡೆ. ಅಭಿಮಾನಿಗಳು ಆ ದೃಶ್ಯಕ್ಕೆ, ಸ್ಮೋಕಿಂಗ್ ಸೀನ್ಗಳಿಗೆ ಬೇಸರ ಮಾಡಿಕೊಂಡಿದ್ದಾರೆ. ನಾನು ಕೇಳಿಕೊಳ್ಳೋದು ಇಷ್ಟೆ, ಅಭಿಮಾನಿಗಳಿಲ್ಲದೆ ನಾವಿಲ್ಲ. ಸಿನಿಮಾ ನೋಡಿ. ಆ ಸೀನ್ ಯಾಕೆ ಇದೆ ಅನ್ನೋದು ಗೊತ್ತಾಗುತ್ತೆ’ ಎಂದಿದ್ದಾರೆ.
ರಕ್ಷಿತಾ ಪ್ರೇಮ್ ಸೋದರ ರಾಣಾ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಚಿತ್ರ ಇದು. ರಕ್ಷಿತಾ ಅವರೇ ನಿರ್ಮಾಪಕಿ. ರಾಣಾ ಸುಮಾರು 2 ವರ್ಷ ಅಮೆರಿಕದಲ್ಲಿ ಅಭಿನಯ ತರಬೇತಿ ಮಾಡಿ, ನಂತರ ವಿಲನ್ ಚಿತ್ರದಲ್ಲಿ ಪ್ರೇಮ್ ಅವರಿಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿ ನಂತರ ಈ ಚಿತ್ರಕ್ಕೆ ಹೀರೋ ಆಗಿದ್ದಾರೆ.