ಮಹದಾಯಿ ಕಿಚ್ಚು ಈಗ ರಾಜ್ಯದ ರಾಜಕೀಯ ಪಕ್ಷಗಳನ್ನು ಸುಡಲಾರಂಭಿಸಿದೆ. ಆರಂಭದಲ್ಲಿ ಇದು ಬಿಜೆಪಿಗಷ್ಟೇ ಸಮಸ್ಯೆ ಎಂದು ಖುಷಿಪಟ್ಟಿದ್ದ ಕಾಂಗ್ರೆಸ್, ಜೆಡಿಎಸ್‍ಗೂ ಬಿಸಿ ತಟ್ಟೋಕೆ ಶುರುವಾಗಿದೆ. ಚಿತ್ರರಂಗದವರು ಬೆಂಬಲ ನೀಡುತ್ತಿಲ್ಲ ಎಂಬ ಕೂಗಿಗೆ ಸ್ಪಂದಿಸಿದ್ದ ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಚಿತ್ರರಂಗದ ಎಲ್ಲ ಸದಸ್ಯರ ಸಭೆ ಕರೆದಿದ್ದರು. ಸಭೆಯ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ಮಹದಾಯಿ ಹೋರಾಟಗಾರ ವೀರೇಂದ್ರ ಸೊಬರದಮಠ ಅವರನ್ನೂ ಜೊತೆಯಲ್ಲೇ ಕೂರಿಸಿಕೊಂಡಿದ್ದು, ಹೋರಾಟಗಾರರಿಗೆ ನೀಡಿದ ಗೌರವ.
ಜನವರಿಯಲ್ಲಿ ಇಡೀ ಚಿತ್ರರಂಗ ನರಗುಂದಕ್ಕೆ ಬಂದು ಹೋರಾಟಕ್ಕೆ ಬೆಂಬಲ ನೀಡಲಿದೆ ಎಂದು ಘೋಷಿಸಿದ ಸಾ.ರಾ.ಗೋವಿಂದು, ಶಿವರಾಜ್ ಕುಮಾರ್ ಅವರೊಂದಿಗೆ ಚರ್ಚಿಸಿ ದಿನಾಂಕ ನಿಗದಿಪಡಿಸುವುದಾಗಿ ತಿಳಿಸಿದರು.
ನಟ ಜಗ್ಗೇಶ್, ಕಲಾವಿದರನ್ನು ರಾಜಕೀಯಕ್ಕೆ ಎಳೆದುತರಬೇಡಿ ಎನ್ನುತ್ತಲೇ, ನಟ ಚೇತನ್ ನೀಡಿದ್ದ ಹೇಳಿಕೆಯನ್ನು ಖಂಡಿಸಿದರು. ಅದಾದ ಮೇಲೆ ಮಾತನಾಡಿದ್ದು ಶಿವರಾಜ್ ಕುಮಾರ್. ಹಿರಿಯರು ಮಾತನಾಡಿದ್ದಾರೆ, ನನ್ನದೇನಿದೆ ಮಾತನಾಡೋಕೆ ಎನ್ನುತ್ತಲೇ, ಎಲ್ಲರನ್ನೂ ತರಾಟೆಗೆ ತೆಗೆದುಕೊಂಡರು. ಎಲ್ಲರಿಗೂ ಜವಾಬ್ದಾರಿಯನ್ನು ನೆನಪಿಸಿದರು.
ಕಲಾವಿದರನ್ನು ರಾಜಕೀಯಕ್ಕೇಕೆ ಎಳೆಯುತ್ತೀರಿ. ಒಂದು ಪಕ್ಷದ ಎದುರು ನಡೆಯುವ ಹೋರಾಟಕ್ಕೆ ಬನ್ನಿ, ಬೆಂಬಲ ನೀಡಿ ಎಂದರೆ ನಾವು ಬರುವುದು ಹೇಗೆ..? ಎಂದು ಪ್ರಶ್ನಿಸಿದ ಶಿವಣ್ಣ, ನಾವು ಬಂದರೆ ಸಮಸ್ಯೆ ಬಗೆಹರಿಯುತ್ತೆ ಎಂದಾದರೆ ನಾವು ಬಂದು ನಿಲ್ಲುತ್ತೇವೆ. ಆದರೆ, ಮಹದಾಯಿ ವಿಚಾರದಲ್ಲಿ ನಮಗೆ ಯಾವ ಅಧಿಕಾರವಿದೆ..? ನೀವೇಕೆ ರಾಜಕಾರಣಿಗಳನ್ನು ಕೇಳೋದಿಲ್ಲ. ವೋಟು ಪಡೆದವರನ್ನು ಬಿಟ್ಟು, ಚಿತ್ರರಂಗದವರು ಬಂದು ಬಗೆಹರಿಸಲಿ ಎಂದರೆ ಹೇಗಾಗುತ್ತೆ..? ಎಂದು ಪ್ರಶ್ನಿಸಿದರು.
ಕೋಟ್ಯಂತರ ಜನ ಕೊಟ್ಟ ಅಭಿಮಾನದ ಭಿಕ್ಷೆಯಿಂದಲೇ ನಾವು ಸ್ಟಾರ್ ಆಗಿರುವುದು. ಜವಾಬ್ದಾರಿ ನಮ್ಮದಷ್ಟೇ ಅಲ್ಲ, ಪ್ರತಿಯೊಬ್ಬರದ್ದೂ ಇದೆ ಎಂದ ಶಿವಣ್ಣ, ಹೋರಾಟಕ್ಕೆ ಬಂದವರು ನಮ್ಮೊಂದಿಗೆ ಸೆಲ್ಫಿ ತೆಗೆದುಕೊಂಡು ಹೋಗುತ್ತಾರೆ. ಅದರಿಂದ ಲಾಭವೇನು ಎಂದು ಪ್ರಶ್ನಿಸಿದಾಗ ಹೌದಲ್ಲವೇ ಎನಿಸಿದ್ದು ನಿಜ.
ಈಗ ಕಲಾವಿದರೆಲ್ಲರನ್ನೂ ಒಟ್ಟುಗೂಡಿಸುವ ಜವಾಬ್ದಾರಿಯನ್ನು ಸಾ.ರಾ.ಗೋವಿಂದು ಹಾಗೂ ಶಿವರಾಜ್ ಕುಮಾರ್ ಹೊತ್ತುಕೊಂಡಿದ್ದಾರೆ. ಜನವರಿ ತಿಂಗಳಲ್ಲಿ ಒಂದು ದಿನ ಹುಬ್ಬಳ್ಳಿ ಬಳಿಯ ನರಗುಂದದಲ್ಲಿ ಚಿತ್ರರಂಗದ ಸ್ಟಾರ್‍ಗಳೆಲ್ಲ ಜಮಾಯಿಸಲಿದ್ದಾರೆ. ಹೋರಾಟಕ್ಕೆ ಕಳೆ ತರಲಿದ್ದಾರೆ.
ನಾವು ಬಣ್ಣ ಹಚ್ಚಿದಾಗ ಮಾತ್ರವೇ ಕಲಾವಿದರು. ಮೇಕಪ್ ತೆಗೆದ ಮೇಲೆ ನಾವೂ ಸಾಮಾನ್ಯ ಮನುಷ್ಯರು ಎಂದ ಶಿವಣ್ಣ ಮಾತಿನಲ್ಲಿ ಪ್ರತಿಯೊಂದಕ್ಕೂ ಚಿತ್ರರಂಗದವರನ್ನು ಟೀಕಿಸುವವರ ವಿರುದ್ಧ ಸಾತ್ವಿಕ ಆಕ್ರೋಶವಿತ್ತು.
Related Articles :-
KFCC Supports Mahadayi; To Hold A Meeting Today