` james - chitraloka.com | Kannada Movie News, Reviews | Image

james

  • ಜೇಮ್ಸ್ ರೀ ರಿಲೀಸ್ : ಅಪ್ಪು ಧ್ವನಿಯನ್ನು ಮರು ಸೃಷ್ಟಿಸಿದ್ದು ಯಾರು?

    ಜೇಮ್ಸ್ ರೀ ರಿಲೀಸ್ : ಅಪ್ಪು ಧ್ವನಿಯನ್ನು ಮರು ಸೃಷ್ಟಿಸಿದ್ದು ಯಾರು?

    ಅಪ್ಪು ಹೀರೋ ಆಗಿ ನಟಿಸಿದ್ದ ಕೊನೆಯ ಸಿನಿಮಾ ಜೇಮ್ಸ್. ಮಾರ್ಚ್ 18ರ ಅಪ್ಪು ಹುಟ್ಟುಹಬ್ಬದ ದಿನವೇ ರಿಲೀಸ್ ಆಗಿ, ಬಾಕ್ಸಾಫೀಸ್‍ನಲ್ಲಿ ದಾಖಲೆ ಬರೆದಾಯ್ತು. 5ನೇ ವಾರದ ವೇಳೆಗೆ ಜೇಮ್ಸ್, ಈಗ ಒಟಿಟಿಯಲ್ಲೂ ಲಭ್ಯವಿದೆ. ಒಟಿಟಿಯಲ್ಲೂ ಟ್ರೆಂಡ್ ಸೃಷ್ಟಿಸಿರೋ ಜೇಮ್ಸ್‍ನ್ನು ಮತ್ತೊಮ್ಮೆ ಬಿಡುಗಡೆ ಮಾಡೋಕೆ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಮುಂದಾಗಿದ್ದಾರೆ.

    ಜೇಮ್ಸ್ ಡಬ್ಬಿಂಗ್ ವೇಳೆ ಅಪ್ಪು ಧ್ವನಿಯನ್ನೇ ಬಳಸಿಕೊಳ್ಳೋಕೆ ಚಿತ್ರತಂಡ ಹರಸಾಹಸ ಮಾಡಿತ್ತು. ಆದರೆ, ಸರಿಯಾದ ಸಮಯಕ್ಕೆ ಸಿಗಲಿಲ್ಲ. ತಾಂತ್ರಿಕ ಸಂಸ್ಥೆಯೊಂದಕ್ಕೆ ಪುನೀತ್ ಅವರ ಧ್ವನಿಯ ಸುಮಾರು 15 ಗಂಟೆಗಳ ಸಂಗ್ರಹವನ್ನು ಕೊಡಲಾಗಿತ್ತು. ಈ ಸಾಹಸವನ್ನು ಕೈಗೆತ್ತಿಕೊಂಡವರು ಸೌಂಡ್ ಇಂಜಿನಿಯರ್ ಶ್ರೀನಿವಾಸ ರಾವ್. ಹೈದರಾಬಾದ್‍ನವರು. ನಟ ಶ್ರೀಕಾಂತ್ ಇವರನ್ನು ಕಿಶೋರ್ ಅವರಿಗೆ ಪರಿಚಯಿಸಿದರಂತೆ.

    ಪುನೀತ್ ಜೇಮ್ಸ್ ಚಿತ್ರದ ಶೂಟಿಂಗ್ ಸಮಯದಲ್ಲಿ ಸೇರಿದಂತೆ ವಿವಿಧ ಚಿತ್ರಗಳಲ್ಲಿನ ರಾ ವಾಯ್ಸ್ ಫುಟೇಜ್, ರಿಯಾಲಿಟಿ ಶೋಗಳಲ್ಲಿನ ರಾ ವಾಯ್ಸ್ ಫುಟೇಜ್ ಎಲ್ಲವನ್ನೂ ಪಡೆದುಕೊಂಡಿದ್ದ ಶ್ರೀನಿವಾಸ ರಾವ್, ಅದರ ಮೇಲೆ ಸತತ 6 ತಿಂಗಳು ಕೆಲಸ ಮಾಡಿ, ಕೊನೆಗೂ ಅಪ್ಪು ಧ್ವನಿಯನ್ನು ಚಿತ್ರಕ್ಕೆ ಹೊಂದಿಸಿದ್ದಾರೆ. ಇದಕ್ಕಾಗಿ ಶ್ರೀನಿವಾಸ ರಾವ್ ಅವರ 61 ಮಂದಿಯ ತಂಡ ಕೆಲಸ ಮಾಡಿದೆ.

    ಚಿತ್ರದ ರಿಲೀಸ್ ವೇಳೆ ಶಿವಣ್ಣ ಅವರಿಂದ ಡಬ್ ಮಾಡಿಸಲಾಗಿತ್ತು. ನಿರ್ದೇಶಕ ಚೇತನ್ ಕುಮಾರ್ ಅದನ್ನು ಯಶಸ್ವಿಯಾಗಿ ಮಾಡಿದ್ದರು. ಪ್ರೇಕ್ಷಕರೂ ಇಷ್ಟಪಟ್ಟಿದ್ದರು. ಈಗ ಅಪ್ಪು ಅವರ ಧ್ವನಿಯನ್ನೇ ಚಿತ್ರಕ್ಕೆ ಮರುಸೃಷ್ಟಿಸಲಾಗಿದ್ದು, ಶಿವಣ್ಣ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಚಿತ್ರದ ಕ್ಲಿಪ್ಪಿಂಗ್‍ಗಳನ್ನು ನೋಡಿದ್ದಾರೆ ಎಂದು ತಿಳಿಸಿದ್ದಾರೆ ಕಿಶೋರ್ ಪತ್ತಿಕೊಂಡ. 5ನೇ ವಾರವೂ ಜೇಮ್ಸ್ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, 61 ಸಿಂಗಲ್ ಸ್ಕ್ರೀನ್ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಶೋ ಆಗುತ್ತಿದೆ. ಏಪ್ರಿಲ್ 22ರಿಂದ ಅಪ್ಪು ಧ್ವನಿಯಲ್ಲಿ ಚಿತ್ರ ರೀ ರಿಲೀಸ್ ಆಗಲಿದೆ. ನಂತರ ಜನರ ಪ್ರತಿಕ್ರಿಯೆ ನೋಡಿಕೊಂಡು ಥಿಯೇಟರ್ಸ್ ಅಥವಾ ಶೋ ಹೆಚ್ಚಿಸುವ ಬಗ್ಗೆ ತೀರ್ಮಾನಿಸುತ್ತೇವೆ ಎಂದಿದ್ದಾರೆ ಕಿಶೋರ್ ಪತ್ತಿಕೊಂಡ.

  • ಜೇಮ್ಸ್ ಶೂಟಿಂಗ್ ಮತ್ತೆ ಶುರು

    ಜೇಮ್ಸ್ ಶೂಟಿಂಗ್ ಮತ್ತೆ ಶುರು

    ಜೇಮ್ಸ್. ಪುನೀತ್ ನಟಿಸಿರುವ ಕೊನೆಯ ಸಿನಿಮಾ. ಚೇತನ್ ಕುಮಾರ್ ನಿರ್ದೇಶನದ ಚಿತ್ರದ ಕೊನೆಯ ಭಾಗಗಳ ಚಿತ್ರೀಕರಣ ಶುರುವಾಗಿದೆ. ಅಪ್ಪು ಇಲ್ಲ. ಚಿತ್ರದ ಕೆಲವು ಟಾಕಿ ಪೋರ್ಷನ್ಸ್ ಬಾಕಿ ಇದ್ದು, ಅವುಗಳ ಶೂಟಿಂಗ್ ನಡೆಯುತ್ತಿದೆ.

    ಅಪ್ಪು ಪಾತ್ರಕ್ಕೆ ಯಾರಿಂದ ಡಬ್ಬಿಂಗ್ ಮಾಡಿಸಬೇಕು ಅನ್ನೋದು ಇನ್ನೂ ಫೈನಲ್ ಆಗಿಲ್ಲ. ಚಿತ್ರವನ್ನು ಪುನೀತ್ ಹುಟ್ಟುಹಬ್ಬವಾದ ಮಾರ್ಚ್ 17ರಂದೇ ರಿಲೀಸ್ ಮಾಡುವ ಪ್ಲಾನ್‍ನಲ್ಲಿದೆ ಜೇಮ್ಸ್ ತಂಡ.

  • ಜೇಮ್ಸ್ ಸಲಾಂ ಸೋಲ್ಜರ್ ಹಾಡು ಬಿಡುಗಡೆ ಮಾಡಿದ್ದು ಕಿಚ್ಚ..!

    ಜೇಮ್ಸ್ ಸಲಾಂ ಸೋಲ್ಜರ್ ಹಾಡು ಬಿಡುಗಡೆ ಮಾಡಿದ್ದು ಕಿಚ್ಚ..!

    ಪುನೀತ್ ರಾಜ್‍ಕುಮಾರ್ ಅವರ ಜೇಮ್ಸ್ ಚಿತ್ರದ ಪ್ರಚಾರ ಕಾರ್ಯಗಳು ಬಿರುಸಾಗುತ್ತಿವೆ. ನಿರ್ಮಾಪಕ ಕಿಶೋರ್ ಪತ್ತಿಕೊಂಡ ಚಿತ್ರವನ್ನು ಇಡೀ ದೇಶದ ಮೂಲೆ ಮೂಲೆಗೂ ತಲುಪಿಸೋ ಸಾಹಸದಲ್ಲಿದ್ದಾರೆ. ಈಗ ಚಿತ್ರದ ಸಲಾಂ ಸೋಲ್ಜರ್ ಹಾಡನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದಾರೆ.

    ಇದು ನನಗೆ ಸಿಕ್ಕ ಗೌರವ ಎಂದು ಬರೆದುಕೊಂಡಿದ್ದಾರೆ ಸುದೀಪ್. ಡೈರೆಕ್ಟರ್ ಚೇತನ್ ಕುಮಾರ್ ಅವರ ಸಾಹಿತ್ಯವಿರೋ ಹಾಡಿಗೆ ಧ್ವನಿ ನೀಡಿರೋದು ಸಂಜಿತ್ ಹೆಗ್ಡೆ. ಚರಣ್ ರಾಜ್ ಸಂಗೀತ ನಿರ್ದೇಶನದ ಹಾಡನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಅಲ್ಲಿಯೂ ದಾಖಲೆ ಬರೆಯುತ್ತಿದೆ ಜೇಮ್ಸ್.

  • ಜೇಮ್ಸ್ ಸೃಷ್ಟಿಸಿದ ಇನ್ನಷ್ಟು ದಾಖಲೆಗಳ ಲಿಸ್ಟು..

    ಜೇಮ್ಸ್ ಸೃಷ್ಟಿಸಿದ ಇನ್ನಷ್ಟು ದಾಖಲೆಗಳ ಲಿಸ್ಟು..

    ಜೇಮ್ಸ್ ಮಾರ್ಚ್ 17ಕ್ಕೆ ರಿಲೀಸ್. ಪುನೀತ್ ಹೀರೋ ಆಗಿ ನಟಿಸಿರೋ ಕೊನೆಯ ಸಿನಿಮಾ ಆಗಿರೋದ್ರಿಂದ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಜೇಮ್ಸ್ ಸೃಷ್ಟಿಸಿರೋ.. ಸೃಷ್ಟಿಸುತ್ತಿರೋ ದಾಖಲೆಗಳ ಪಟ್ಟಿಗೆ ಈಗ ಇನ್ನೊಂದು ಹೊಸ ದಾಖಲೆಗಳು ಸೇರಿವೆ. ಇದು ಕೇವಲ ಆಸ್ಟ್ರೇಲಿಯಾದಲ್ಲಿ ಸೃಷ್ಟಿಯಾಗಿರೋ ದಾಖಲೆಗಳು.

    ಆಸ್ಟ್ರೇಲಿಯಾದಲ್ಲಿ ಸೆನ್ಸಾರ್ ಆಗಿರೋ ಜೇಮ್ಸ್, ಅಲ್ಲಿಯೇ ಸೆನ್ಸಾರ್ ಆದ ಮೊದಲ ಕನ್ನಡ ಸಿನಿಮಾ ಅನ್ನೋ ದಾಖಲೆ ಬರೆದಿದೆ. ಅಲ್ಲಿ ಎಂಎ 15+ ಸರ್ಟಿಫಿಕೇಟ್ ಸಿಕ್ಕಿದೆ.

    ಅಲ್ಲಿನ ಕ್ಲಾಸಿಫಿಕೇಷನ್ ಬ್ರಾಂಚ್‍ನಲ್ಲಿ ಸ್ಥಾನ ಪಡೆದ ಮೊದಲ ಕನ್ನಡ ಸಿನಿಮಾ ಜೇಮ್ಸ್. ಆಸ್ಟ್ರೇಲಿಯಾದಲ್ಲಿ ಮೊದಲ ದಿನವೇ 150+ ಶೋ ದಾಖಲೆ ಬರೆಯುತ್ತಿರೋ ಮೊದಲ ಕನ್ನಡ ಸಿನಿಮಾ ಜೇಮ್ಸ್.

    ಸಿನಿಮಾ ರಿಲೀಸಾಗೋಕೆ ಇನ್ನೂ ಕೆಲವು ದಿನಗಳಿವೆ.. ಮತ್ತಷ್ಟು ಹೊಸ ಹೊಸ ದಾಖಲೆಗಳೂ ಸೃಷ್ಟಿಯಾಗಲಿವೆ..

  • ಜೇಮ್ಸ್ ಹಬ್ಬ : ಮೊದಲ ದಿನ ಅಭಿಮಾನಿಗಳಿಗೆ ಏನೆಲ್ಲಾ ಇರುತ್ತೆ..?

    ಜೇಮ್ಸ್ ಹಬ್ಬ : ಮೊದಲ ದಿನ ಅಭಿಮಾನಿಗಳಿಗೆ ಏನೆಲ್ಲಾ ಇರುತ್ತೆ..?

    ಅಭಿಮಾನಿಗಳಿಂದ.. ಅಭಿಮಾನಿಗಳಿಗಾಗಿ.. ಅಭಿಮಾನಿಗಳಿಗೋಸ್ಕರ..

    ಇದು ಮಾರ್ಚ್ 17ರ ಜೇಮ್ಸ್ ಹಬ್ಬದ ಸಿದ್ಧತೆ.  ಅಪ್ಪು ಕಳೆದುಕೊಂಡ ನೋವಿನಲ್ಲಿಯೇ ಇರುವ ಅಭಿಮಾನಿಗಳು ಆ ದಿನವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ. ಥಿಯೇಟರುಗಳ ಲಿಸ್ಟ್ ಸಿಕ್ಕ ನಂತರ ಪ್ಲಾನ್ ಕೂಡಾ ಜೋರಾಗಿಯೇ ಇದೆ. 400 ಥಿಯೇಟರ್ ಸೇರಿದಂತೆ, ಎಲ್ಲೆಡೆ ಆ ದಿನ 4 ಸಾವಿರಕ್ಕೂ ಹೆಚ್ಚು ಶೋಗಳಿವೆ.

    ಮೆಜೆಸ್ಟಿಕ್ ಬಳಿಯ ಥಿಯೇಟರ್ ಬಳಿ 81 ಅಡಿ ಎತ್ತರದ ಕಟೌಟ್ ಇರಲಿದೆ. ಎಲ್ಲ ಥಿಯೇಟರುಗಳಲ್ಲೂ ಕಟೌಟ್ಗೆ ಹಾಲಿನ ಅಭಿಷೇಕ. ಮೆರವಣಿಗೆ. ಪುನೀತ್ ಅವರದ್ದಷ್ಟೇ ಅಲ್ಲ, ಡಾ.ರಾಜ್ ಮತ್ತು ಪಾರ್ವತಮ್ಮನವರ ಕಟೌಟ್ ಕೂಡಾ ರಾರಾಜಿಸಲಿವೆ.

    ವೀರಭದ್ರೇಶ್ವರ ಟಾಕೀಸ್ನ ಸೀಟ್ ನಂ.17 ಪುನೀತ್ ಅವರಿಗಾಗಿ ಮೀಸಲು. ಅದು ಖಾಲಿ ಇರಲಿದೆ. ಅಲ್ಲಿ ಪುನೀತ್ ಫೋಟೋ ಇಡಲಿದ್ದಾರೆ. ಅಪ್ಪು ನಮ್ಮ ಜೊತೆ ಇಲ್ಲ. ಆದರೆ ನಾವು ಅವರ ಸಿನಿಮಾ ನೋಡುವಾಗ ಅವರು ನಮ್ಮೊಂದಿಗೆ ಇರುತ್ತಾರೆ ಅನ್ನೋದು ಅಭಿಮಾನಿಗಳ ನಂಬಿಕೆ.

    ವೀರೇಶ್ ಥಿಯೇಟರ್ ಬಳಿ 30 ಅಡಿ ಎತ್ತರದ 31 ಕಟೌಟ್ ಇರಲಿವೆ. ಪ್ರತೀ ಕಟೌಟ್ಗೂ ಹೂವಿನ ಅಭಿಷೇಕ. ಬೆಂಗಳೂರಿನ ವೀರೇಶ್, ಪ್ರಸನ್ನ, ವೀರಭದ್ರೇಶ್ವರ ಸೇರಿದಂತೆ ಎಲ್ಲೆಡೆ ಹಾಗೂ ರಾಜ್ಯದ ಎಲ್ಲ ಜೇಮ್ಸ್ ಟಾಕೀಸ್ಗಳಲ್ಲಿ ಪುಷ್ಪಾರ್ಚನೆ. ಪುನೀತ್ ರಾಜ್ಕುಮಾರ್ ಸಮಾಧಿಯಿಂದ ಥಿಯೇಟರಿನವರೆಗೆ ಅಭಿಮಾನಿಗಳ ಅಭಿಮಾನದ ಮೆರವಣಿಗೆ.

    ಅಂದಹಾಗೆ ಇದ್ಯಾವುದಕ್ಕೂ ನಿರ್ಮಾಪಕ ಕಿಶೋರ್ ಧನಸಹಾಯ ಪಡೆದಿಲ್ಲವಂತೆ. ನಿರ್ಮಾಪಕರು ನಾವಿದ್ದೇವೆ ಎಂದರೂ ಅಭಿಮಾನಿಗಳು ಬೇಡ ಎಂದಿದ್ದು, ಎಲ್ಲ ವೆಚ್ಚವನ್ನೂ ರಾಜ್ಯದ ಡಾ.ರಾಜ್, ಶಿವಣ್ಣ ಮತ್ತು ಅಪ್ಪು ಅಭಿಮಾನಿಗಲ ಸಂಘಗಳೇ ನೋಡಿಕೊಳ್ಳುತ್ತಿವೆ.

    ಇದು ಅಪ್ಪು ಅಭಿನಯದ ಕೊನೆಯ ಸಿನಿಮಾ.

  • ಜೇಮ್ಸ್ ಹೂಮಳೆ, ಮೆರವಣಿಗೆಗೆ ಹಿಜಾಬ್ ಬ್ರೇಕ್

    ಜೇಮ್ಸ್ ಹೂಮಳೆ, ಮೆರವಣಿಗೆಗೆ ಹಿಜಾಬ್ ಬ್ರೇಕ್

    ಜೇಮ್ಸ್ ಬಿಡುಗಡೆಗಾಗಿ ಅಭಿಮಾನಿಗಳು ನೂರಾರು ಯೋಜನೆ ಹಾಕಿಕೊಂಡಿದ್ದರು. ಸಾಮಾಜಿಕ ಸೇವಾ ಕೈಂಕರ್ಯಗಳ ಜೊತೆಗೆ ಅದ್ಧೂರಿಯಾಗಿ ಜೇಮ್ಸ್ ಬಿಡುಗಡೆ ಸಂಭ್ರಮಕ್ಕೆ ಪ್ಲಾನ್ ಮಾಡಿದ್ದರು.

    ಪುನೀತ್ ಸಮಾಧಿ, ವೀರೇಶ್ ಮತ್ತು ವೀರಭದ್ರೇಶ್ವರ ಥಿಯೇಟರ್ ಬಳಿ ಹೆಲಿಕಾಪ್ಟರ್‍ನಿಂದ ಹೂಮಳೆ, ರಾಜಾಜಿನಗರದಿಂದ ವೀರೇಶ್ ಥಿಯೇಟರ್‍ವರೆಗೆ ಮೆರವಣಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಅಭಿಮಾನಿಗಳಿಂದ ಮೆರವಣಿಗೆ.. ಹೀಗೆ.. ಯೋಜನೆ ರೂಪಿಸಿದ್ದರು. ಈಗ ಅವೆಲ್ಲಕ್ಕೂ ಬ್ರೇಕ್ ಹಾಕಿದೆ ಹಿಜಾಬ್.

    ರಾಜ್ಯದಲ್ಲಿ ಕಳೆದ ಕೆಲವು ತಿಂಗಳಿಂದ ಹಿಜಾಬ್ ವಿವಾದ ಬಿಟ್ಟೂಬಿಡದೆ ಸುಡುತ್ತಿದೆ. ಮಂಗಳವಾರ ಹೈಕೋರ್ಟ್ ತೀರ್ಪು ಬಂದಿದ್ದು, ಶಾಲೆಗಳ ತರಗತಿಗಳಲ್ಲಿ ಹಿಜಾಬ್ ಬೇಡ, ಸಮವಸ್ತ್ರ ಕಡ್ಡಾಯ ಎಂದಿದೆ. ಇಸ್ಲಾಂನಲ್ಲಿ ಹಿಜಾಬ್ ಅವಿಭಾಜ್ಯ ಅಂಗ ಅಲ್ಲ ಎಂದು ತೀರ್ಪಿತ್ತಿದೆ. ಹೈಕೋರ್ಟ್ ವಿರುದ್ಧ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಹೋಗಿರುವ ವಿದ್ಯಾರ್ಥಿಗಳು ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಮತ್ತೊಂದೆಡೆ ಮುಸ್ಲಿಂ ಸಂಘಟನೆಗಳು ಮಾರ್ಚ್ 17ರಂದೇ ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿವೆ. ಇದೆಲ್ಲದರ ಪರಿಣಾಮ ರಾಜ್ಯಾದ ಸೂಕ್ಷ್ಮ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿಯಾಗಿದೆ.

    ಹೀಗಾಗಿ ಹೈಕೋರ್ಟ್ ಸೂಚನೆ ಪ್ರಕಾರ ಮೆರವಣಿಗೆ, ರ್ಯಾಲಿ, ಪ್ರತಿಭಟನೆ.. ಯಾವುದಕ್ಕೂ ಅವಕಾಶ ಇಲ್ಲ. ಇದರಿಂದಾಗಿ ಜೇಮ್ಸ್ ಅಭಿಮಾನಿಗಳ ಜಾತ್ರೆಗೆ ಬ್ರೇಕ್ ಬಿದ್ದಿದೆ. ಮಧ್ಯರಾತ್ರಿ 2 ಗಂಟೆಗೇ ಶುರುವಾಗಬೇಕಿದ್ದ ಜೇಮ್ಸ್ ಶೋಗಳನ್ನು ಕಾನೂನು ಸುವ್ಯವಸ್ಥೆ ಕಾರಣ ನೀಡಿ ರದ್ದುಗೊಳಿಸಲಾಗಿದೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿದ್ದಾರೆ ಪೊಲೀಸರು.

  • ಜೇಮ್ಸ್‍ಗೆ ಸಮಸ್ಯೆ ಕಾಶ್ಮೀರ್ ಫೈಲ್ಸ್ ಚಿತ್ರವಾ? ಆರ್.ಆರ್.ಆರ್. ಚಿತ್ರವಾ ?

    ಜೇಮ್ಸ್‍ಗೆ ಸಮಸ್ಯೆ ಕಾಶ್ಮೀರ್ ಫೈಲ್ಸ್ ಚಿತ್ರವಾ? ಆರ್.ಆರ್.ಆರ್. ಚಿತ್ರವಾ ?

    ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಹಾಕುವುದಕ್ಕಾಗಿ ಬಿಜೆಪಿಯ ಶಾಸಕರು, ಸಚಿವರು ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‍ನವರಿಗೆ ಫೋನ್ ಮಾಡಿ ಒತ್ತಡ ಹೇರುತ್ತಿದ್ದಾರೆ. ಇದನ್ನು ತಪ್ಪಿಸಬೇಕು. ಜೇಮ್ಸ್ ಚಿತ್ರವನ್ನು ಎತ್ತಂಗಡಿ ಮಾಡದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದರು ವಿಧಾನಸಭೆ ಪ್ರತಿಪಕ್ಷ ನಾಯಕ.

    ಪುನೀತ್ ರಾಜಕುಮಾರ್ ಚಿತ್ರವನ್ನು ತೆಗೆದು ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಹಾಕೋಕೆ ನಾವು ಒತ್ತಡ ಹೇರಿಲ್ಲ. ಅದು ನಮ್ಮ ಕೆಲಸ ಅಲ್ಲ. ಇದೆಲ್ಲ ಊಹಾಪೋಹ ಎಂದಿದ್ದರು ಗೃಹ ಸಚಿವ ಅರಗ ಜ್ಞಾನೇಂದ್ರ.

    ಜೇಮ್ಸ್ ಚಿತ್ರವನ್ನು ವಿನಾಕಾರಣ ತೆಗೆಯೋಕೆ ಅವಕಾಶ ಇಲ್ಲ. ಸರ್ಕಾರ ಜೇಮ್ಸ್ ಚಿತ್ರತಂಡದ ಜೊತೆಗಿದೆ ಎಂದು ಆಶ್ವಾಸನೆ ನೀಡಿದ್ದರು ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ.

    ಹಾಗಾದರೆ ಚಿತ್ರಕ್ಕೆ ಅಡ್ಡಿಯಾಗಿರುವುದು ಯಾರು? ಯಾವ ಚಿತ್ರ? ಈ ಪ್ರಶ್ನೆಗೆ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಕೊಟ್ಟಿರುವ ಸ್ಪಷ್ಟನೆ ಇದು.

    ಮೊದಲ ವಾರ ಎಲ್ಲ ಚಿತ್ರಮಂದಿರ, ಸ್ಕ್ರೀನ್‍ಗಳಲ್ಲೂ ಜೇಮ್ಸ್ ಪ್ರದರ್ಶನವಾಗಿದೆ. ಉದಾಹರಣೆಗೆ ಮಾಗಡಿ ರಸ್ತೆಯ ಪ್ರಸನ್ನ, ವೀರೇಶ್ ಚಿತ್ರಮಂದಿರದ ಎರಡೂ ಸ್ಕ್ರೀನ್, ಅಂಜನ್ ಥಿಯೇಟರ್, ಅದೇ ರಸ್ತೆಯಲ್ಲಿರೋ ಜಿಟಿ ಮಾಲ್‍ನ ಎಲ್ಲ ಸ್ಕ್ರೀನ್‍ಗಳಲ್ಲೂ ಜೇಮ್ಸ್ ಶೋ ಮಾಡಿದ್ದೇವೆ. ಸಾಮಾನ್ಯವಾಗಿ ಆ ಒಂದು ರಸ್ತೆಯಲ್ಲಿ ಒಂದೇ ಥಿಯೇಟರ್ ಪಡೆಯಲಾಗುತ್ತೆ. ಎರಡನೇ ವಾರವೂ ಎಲ್ಲವೂ ನಮಗೆ ಬೇಕು ಅನ್ನೋಕೆ ಆಗಲ್ಲ. ವೀರೇಶ್‍ನಲ್ಲಿ ಸಿನಿಮಾ ಕಂಟಿನ್ಯು ಆಗುತ್ತೆ. ಉಳಿದಂತೆ ಸ್ಕ್ರೀನ್ ಸಂಖ್ಯೆ ಕಡಿಮೆಯಾಗುತ್ತೆ. ಇನ್ನು ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಅವರು ಒಂದೋ ಎರಡೋ ಸ್ಕ್ರೀನ್‍ಗಳಲ್ಲಿ, ಅದೂ ರಾತ್ರಿಯಲ್ಲಿ ಕೇಳಿದ್ದಾರೆ. ಅದರಿಂದ ನಮಗೇನೂ ನಷ್ಟವಿಲ್ಲ. ಕಾಶ್ಮೀರ್ ಫೈಲ್ಸ್ ಚಿತ್ರದಿಂದ ಜೇಮ್ಸ್ ಚಿತ್ರಕ್ಕೆ ಅಡ್ಡಿಯಾಗಿಲ್ಲ. ಜೇಮ್ಸ್ ಚಿತ್ರವಿದ್ದ ಬಹುತೇಕ ಸ್ಕ್ರೀನ್ ಮತ್ತು ಥಿಯೇಟರುಗಳನ್ನು ತೆಗೆದುಕೊಂಡಿರೋದು ಆರ್.ಆರ್.ಆರ್. ಎಂದಿದ್ದಾರೆ ಕಿಶೋರ್.

  • ಜೇಮ್ಸ್‍ಗೆ ಹೆಲಿಕಾಪ್ಟರ್ ಹೂಮಳೆ : ಬಜೆಟ್ ಎಷ್ಟು..?

    ಜೇಮ್ಸ್‍ಗೆ ಹೆಲಿಕಾಪ್ಟರ್ ಹೂಮಳೆ : ಬಜೆಟ್ ಎಷ್ಟು..?

    ಮಾರ್ಚ್ 17ರಂದು ಜೇಮ್ಸ್ ಚಿತ್ರ ರಿಲೀಸ್ ಆಗುತ್ತಿದ್ದು, ಅಭಿಮಾನಿಗಳು ಅಕ್ಷರಶಃ ಜಾತ್ರೆಯನ್ನೇ ಮಾಡುತ್ತಿದ್ದಾರೆ. ಜೇಮ್ಸ್ ಸಿನಿಮಾ ಪ್ರದರ್ಶನವಾಗುವ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಗ್ಯಾರಂಟಿ. ಅಷ್ಟರಮಟ್ಟಿಗೆ ಪ್ಲಾನ್ ಇದೆ.

    ಆ ದಿನ 2 ಹೆಲಿಕಾಪ್ಟರ್ ಬುಕ್ ಆಗಿವೆ. ಅಪ್ಪು ಭಾವಚಿತ್ರ ಮತ್ತು ಸಮಾಧಿಗೆ ಹೆಲಿಕಾಪ್ಟರ್‍ಗಳಿಂದ ಹೂಮಳೆ ಸುರಿಯಲಿದೆ. ಹೆಲಿಕಾಪ್ಟರ್ ವೆಚ್ಚವೇ 7ರಿಂದ 8 ಲಕ್ಷ. ಹೂವಿನ ಖರ್ಚು ಬೇರೆ.

    ರಾಜ್ಯಾದ್ಯಂತ ರೆಡಿಯಾಗುತ್ತಿರೋ ಫ್ಲೆಕ್ಸ್ ಮತ್ತು ಪೋಸ್ಟರ್‍ಗಳಿಗೆ ಅಭಿಮಾನಿಗಳು ಖರ್ಚು ಮಾಡುತ್ತಿರೋ ಹಣ ಸುಮಾರು 8 ಲಕ್ಷ. 3 ಸಾವಿರಕ್ಕೂ ಹೆಚ್ಚು ಹ್ಯಾಪಿ ಬರ್ತ್ ಡೇ ಅಪ್ಪು ಪ್ಲೆಕ್ಸ್ ಮತ್ತು ಪೋಸ್ಟರ್ ಮಾಡಿಸಿ ಹಂಚುತ್ತಿದ್ದಾರೆ ಫ್ಯಾನ್ಸ್.

    ಮಾರ್ಚ್ 17ರಿಂದ ಆರಂಭದ 4 ದಿನ ಪ್ರತಿ ಶೋಗೂ ಪಟಾಕಿ ಹೊಡೆಯೋ ಪ್ಲಾನ್ ಇದೆ. ಅದಕ್ಕಾಗಿಯೇ 2 ಲಕ್ಷಕ್ಕೂ ಹೆಚ್ಚು ಪಟಾಕಿಗಾಗಿ ಖರ್ಚು ಮಾಡಲಾಗಿದೆ. ಥಿಯೇಟರಿಗೆ ಬರುವ ಪ್ರೇಕ್ಷಕರಿಗೆ ಅಪ್ಪು ಅಭಿಮಾನಿಗಳು ಸಿಹಿ ಮತ್ತು ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಇದು ಕೆಲವು ಥಿಯೇಟರುಗಳಲ್ಲಿ ಮಾತ್ರ.

    ಇನ್ನು ಮಾರ್ಚ್ 17ರಂದು ಸಂಜೆ ಅಪ್ಪು ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಮೆರವಣಿಗೆಯುದ್ದಕ್ಕೂ 10 ಜೆಸಿಬಿಗಳಿಂದ ಅಪ್ಪು ಭಾವಚಿತ್ರಕ್ಕೆ ಹೂವಿನ ಅಭಿಷೇಕ.

    ಇವೆಲ್ಲವೂ ಇನ್ನೂ ಆರಂಭ ಮಾತ್ರ..

  • ಜೇಮ್ಸ್‍ನಲ್ಲಿ ಶಿವಣ್ಣಂದೇ ವಾಯ್ಸ್ ಇರುತ್ತಾ? ಗ್ಯಾರಂಟಿ ಇಲ್ಲ..!

    ಜೇಮ್ಸ್‍ನಲ್ಲಿ ಶಿವಣ್ಣಂದೇ ವಾಯ್ಸ್ ಇರುತ್ತಾ? ಗ್ಯಾರಂಟಿ ಇಲ್ಲ..!

    ಜೇಮ್ಸ್ ಚಿತ್ರವನ್ನು ಮಾರ್ಚ್ 17ಕ್ಕೆ ಅಪ್ಪು ಹುಟ್ಟಿದ ದಿನವೇ ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಚಿತ್ರಕ್ಕೆ ಇತ್ತೀಚೆಗಷ್ಟೇ ಶಿವ ರಾಜ್ ಕುಮಾರ್ ಡಬ್ಬಿಂಗ್ ಮಾಡಿದ್ದರು. ಜೇಮ್ಸ್‍ನಲ್ಲಿ ಸ್ವತಃ ಶಿವಣ್ಣ ಕೂಡಾ ಪುಟ್ಟ ಪಾತ್ರ ಮಾಡಿದ್ದಾರೆ. ಆ ಪಾತ್ರದ್ದಷ್ಟೇ ಅಲ್ಲ, ಅಪ್ಪು ಪಾತ್ರಕ್ಕೂ ಅವರೇ ಡಬ್ ಮಾಡಿದ್ದಾರೆ.

    ಶಿವಣ್ಣ ಅಪ್ಪು ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಆದರೆ ಚಿತ್ರ ರಿಲೀಸ್ ಆದಾಗ ಅದೇ ಧ್ವನಿ ಇರುತ್ತೆ ಅಂತಾ ಹೇಳೋಕೆ ಆಗಲ್ಲ. ಅಪ್ಪು ಧ್ವನಿಯನ್ನೇ ಉಳಿಸಿಕೊಳ್ಳೋಕೆ ಪ್ರಯತ್ನ ಇನ್ನೂ ನಿಂತಿಲ್ಲ. ಟೆಕ್ನಿಕಲ್ ಸರ್ಕಸ್ ನಡೀತಾನೇ ಇದೆ. ಅಕಸ್ಮಾತ್ ಅದು ಲೇಟ್ ಆದರೆ ಚಿತ್ರದ ಕೆಲಸ ತಡವಾಗಬಾರದು ಎಂಬ ಕಾರಣಕ್ಕೆ ಶಿವಣ್ಣ ಡಬ್ ಮಾಡಿಕೊಟ್ಟಿದ್ದಾರೆ, ಅಷ್ಟೆ ಎಂದಿದ್ದಾರೆ ನಿರ್ದೇಶಕ ಚೇತನ್ ಕುಮಾರ್.

    ತಂತ್ರಜ್ಞಾನದ ಮೂಲಕ ಅಪ್ಪು ಧ್ವನಿ ಬಳಸಿಕೊಳ್ಳೋಕೆ ಸಾಧ್ಯವಾಗದೆ ಹೋದರೆ ಶಿವಣ್ಣ ಅವರ ಧ್ವನಿಯನ್ನೇ ಬಳಸಿಕೊಳ್ತೇವೆ ಎಂದೂ ಹೇಳಿದ್ದಾರೆ ಚೇತನ್. ಕಿಶೋರ್ ಪತ್ತಿಕೊಂಡ ನಿರ್ಮಾಣದ ಜೇಮ್ಸ್ ಚಿತ್ರದ ಫೈನಲ್ ಕಾಪಿಗೆ ಇಡೀ ಟೀಂ ಕಾಯುತ್ತಿದೆ.

  • ತಡೆದ ಮಳೆ ಜಡಿದು ಬಂತು.. ಶುರುವಾಗಲಿದೆ ಸುಗ್ಗಿ..

    ತಡೆದ ಮಳೆ ಜಡಿದು ಬಂತು.. ಶುರುವಾಗಲಿದೆ ಸುಗ್ಗಿ..

    ಕೊರೊನಾ 3ನೇ ಅಲೆಯೂ ಅಂತ್ಯವಾಗುತ್ತಿರುವ ಹೊತ್ತಿಗೆ ತಡೆದ ಮಳೆ ಜಡಿದು ಬಂತು ಅನ್ನೋ ಹಾಗೆ ಸಿನಿಮಾಗಳ ಸುಗ್ಗಿ ಶುರುವಾಗುತ್ತಿದೆ. ಡಿಸೆಂಬರ್ ಕೊನೆಯವರೆಗೆ ಸಿನಿಮಾಗಳ ರಿಲೀಸ್ ಹಬ್ಬ ಜೋರಾಗಿತ್ತು. ಯಾವಾಗ ಡಿಸೆಂಬರ್ ಕೊನೆಯ ಹೊತ್ತಿಗೆ ಮತ್ತೊಮ್ಮೆ ಲಾಕ್ ಡೌನ್ ಭಯ ಶುರುವಾಯ್ತೋ.. ಎಲ್ಲರೂ ಸೈಲೆಂಟ್ ಆಗಿಬಿಟ್ಟರು. ಈಗ ಫೆಬ್ರವರಿ ಶುರುವಾಗೋ ಹೊತ್ತಿಗೆ ಭಯ ಹೋಗುತ್ತಿದೆ. ಸುಗ್ಗಿ ಶುರುವಾಗಿದೆ.

    ಕನ್ನಡದಲ್ಲಿ ವಿಕ್ರಾಂತ್ ರೋಣ ರಿಲೀಸ್ ಮುಂದಕ್ಕೆ ಹೋಗಿದ್ದರೂ ಏಪ್ರಿಲ್ ನಂತರ ರಿಲೀಸ್ ಡೇಟ್ ಘೋಷಣೆಯಾಗಬಹುದು.

    ಮಾರ್ಚ್ 17ಕ್ಕೆ ಪುನೀತ್ ಹುಟ್ಟುಹಬ್ಬ. ಆ ದಿನವೇ ಜೇಮ್ಸ್ ರಿಲೀಸ್ ಮಾಡೋಕೆ ಚಿತ್ರತಂಡ ಹಗಲೂ ರಾತ್ರಿ ಶ್ರಮಿಸುತ್ತಿದೆ.  ಏಪ್ರಿಲ್ 14ಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಇದೆ.

    ಅತ್ತ ತೆಲುಗಿಗೆ ಹೋದರೆ ಆರ್.ಆರ್.ಆರ್. ಮಾರ್ಚ್ 25ಕ್ಕೆ ರಿಲೀಸ್ ಡೇಟ್ ಘೋಷಿಸಿದೆ. ಸ್ಸೋ.. ಜೇಮ್ಸ್ ಚಿತ್ರಕ್ಕೆ ಎದುರಾಳಿಯಾಗಿ ಬರುತ್ತಿಲ್ಲ. ಮಾರ್ಚ್ 11ಕ್ಕೆ ಪ್ರಭಾಸ್ ನಟನೆಯ ರಾಧೇ ಶ್ಯಾಂ ಇದೆ. ಏಪ್ರಿಲ್ 1ಕ್ಕೆ ಪವನ್ ಕಲ್ಯಾಣ್ ನಟಿಸಿರೋ ಭೀಮ್ಲಾ ನಾಯಕ್ ಬರುತ್ತಿದೆ. ಮಹೇಶ್ ಬಾಬು ನಟನೆಯ ಸರ್ಕಾರಿ ವಾರು ಪಾಟ ಕೂಡಾ ಮೇ ತಿಂಗಳ ರೇಸ್‍ನಲ್ಲಿದೆ. ಇದರ ಮಧ್ಯೆ ಚಿರಂಜೀವಿ ನಟಿಸಿರೋ ಆಚಾರ್ಯ ರಿಲೀಸ್ ಡೇಟ್ ಅನೌನ್ಸ್ ಆಗಬಹುದು.

    ಅತ್ತ ತಮಿಳಿಗೆ ಹೋದರೆ ಅಜಿತ್ ನಟನೆಯ ವಲಿಮೈ, ಆರ್.ಆರ್.ಆರ್.ಗೆ ಮೊದಲು ಫೆಬ್ರವರಿ 24ಕ್ಕೇ ಬರುತ್ತಿದೆ. ವಿಜಯ್ ನಟಿಸಿರೋ ಬೀಸ್ಟ್ ಕೆಜಿಎಫ್ ಚಾಪ್ಟರ್ 2ಗೆ ಫೈಟ್  ಕೊಡಬಹುದು. ಅಂದಹಾಗೆ ಕೆಜಿಎಫ್ ಚಾಪ್ಟರ್ 2, ಹಿಂದಿಯಲ್ಲಿ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಈಗಾಗಲೇ ಫೈಟ್ ಕೊಡೋದು ಅಧಿಕೃತವಾಗಿದೆ.

    ಕನ್ನಡದಲ್ಲಿ ಸದ್ಯಕ್ಕೆ ಫೆಬ್ರವರಿ 25ಕ್ಕೆ ರಿಲೀಸ್ ಡೇಟ್ ಅನೌನ್ಸ್ ಮಾಡಿರೋದು ಓಲ್ಡ್ ಮಾಂಕ್ ಮಾತ್ರ. ಇನ್ನುಳಿದಂತೆ ತೋತಾಪುರಿ, ಏಕ್ ಲವ್ ಯಾ ಸೇರಿದಂತೆ ಹಲವು ಚಿತ್ರಗಳು ರೇಸ್‍ನಲ್ಲಿವೆ. ಒಟ್ಟಿನಲ್ಲಿ ಸುಗ್ಗಿ ಶುರುವಾಗಿದೆ.

  • ನಿರ್ದೇಶಕರೇ.. ಲೇಟ್ ಮಾಡಿದ್ರೆ ಅಷ್ಟೆ.. ಅಭಿಮಾನಿಗಳು ಸಿನಿಮಾನೇ ಮಾಡಿ ಮುಗಿಸ್ತಾರೆ..!!!

    james craze goes another level

    ನಿರ್ದೇಶಕ, ಯಾವುದೇ ಸಿನಿಮಾದ ರಿಯಲ್ ಹೀರೋ. ಆದರೆ, ಹೀರೋಗೇ ಚಾಲೆಂಜ್ ಹಾಕೋ ಕೆಲಸ ಮಾಡೋದು ಅಭಿಮಾನಿಗಳು. ಅವರು ತಮ್ಮ ಅಭಿಮಾನದ ನಟನನ್ನು ನೋಡಲು ಎಷ್ಟರಮಟ್ಟಿಗೆ ಕಾಯುತ್ತಿರುತ್ತಾರೆ ಎಂದರೆ.. ಅದನ್ನು ಪದಗಳಲ್ಲಿ ಬಣ್ಣಿಸೋಕೆ ಸಾಧ್ಯವಿಲ್ಲ. ಅದರಲ್ಲೂ ಪುನೀತ್ ರಾಜ್‌ಕುಮಾರ್ ಫ್ಯಾನ್ಸ್ ಇದ್ದಾರಲ್ಲ..

    ನೀವೇ ನೋಡಿ.. ಭರ್ಜರಿ ಚೇತನ್ ನಿರ್ದೇಶನದಲ್ಲಿ ಜೇಮ್ಸ್ ಬರಲಿದೆ ಅನ್ನೋ ಸುದ್ದಿ ಗೊತ್ತಿದೆ ತಾನೇ. ಚೇತನ್ ಅದನ್ನು ಸ್ವಲ್ಪ ಅರ್ಜೆಂಟ್ ಆಗಿಯೇ ಅನೌನ್ಸ್ ಮಾಡಿದ್ದರು. ಈಗ ನೋಡಿದ್ರೆ.. ಅಪ್ಪು ಫ್ಯಾನ್ಸ್ ಎಷ್ಟು ಫಾಸ್ಟ್ ಆಗಿದ್ದಾರೆ ಅಂದ್ರೆ.. ನಿರ್ದೇಶಕರಿಗೇ ಐಡಿಯಾ ಕೊಟ್ಟಿದ್ದಾರೆ.

    ತಮ್ಮದೇ ಕಲ್ಪನೆಯಲ್ಲಿ ಡಿಸೈನ್ ಡಿಸೈನ್ ಪೋಸ್ಟರ್ ರೆಡಿ ಮಾಡಿಬಿಟ್ಟಿದ್ದಾರೆ. ಅಭಿಮಾನಿಗಳು ಎಷ್ಟು ವೇಯ್ಟಿಂಗಲ್ಲಿದ್ದಾರೆ ಅಂದ್ರೆ, ಚೇತನ್ ಲೇಟ್ ಮಾಡಿದ್ರೆ.. ಅವರೇ ಸಿನಿಮಾನೂ ಮಾಡಿಬಿಡ್ತಾರೇನೋ..

  • ಪುನೀತ್`ಗಾಗಿ ತೆರೆಯಿತು ವಿಂಡ್ಸರ್ ಮ್ಯಾನರ್ ಬಾಗಿಲು

    ಪುನೀತ್`ಗಾಗಿ ತೆರೆಯಿತು ವಿಂಡ್ಸರ್ ಮ್ಯಾನರ್ ಬಾಗಿಲು

    ವಿಂಡ್ಸರ್ ಮ್ಯಾನರ್, ಬೆಂಗಳೂರಿನ ಐತಿಹಾಸಿಕ ಹೋಟೆಲ್. ವಾಸ್ತು ಸೌಂದರ್ಯಕ್ಕೂ ಹೆಸರುವಾಸಿ. ಇಂತಹ ಹೋಟೆಲ್‍ನಲ್ಲಿ ಸಿನಿಮಾ ಮಾಡಬೇಕು ಅನ್ನೋ ಕನಸು ಯಾರಿಗಿರಲ್ಲ ಹೇಳಿ... ಆದರೆ, ಈ ಹೋಟೆಲ್‍ನಲ್ಲಿ ಇದುವರೆಗೆ ಚಿತ್ರೀಕರಣಗೊಂಡಿರೋದು ಕೆಲವೇ ಕೆಲವು ಚಿತ್ರಗಳು. ಕಮಲ್‍ಹಾಸನ್ ಅಭಿನಯದ ಪುಷ್ಪಕ ವಿಮಾನ, ಮದನ ಕಾಮರಾಜ ಚಿತ್ರಗಳನ್ನು ಬಿಟ್ಟರೆ, ಬೇರೆ ಚಿತ್ರಗಳಿಗೆ ಈ ಹೋಟೆಲ್ ಅನುಮತಿಯನ್ನೇ ಕೊಡೋದಿಲ್ಲ. ಅಂಥಾದ್ದರಲ್ಲಿ ಈಗ ಮತ್ತೊಂದು ಚಿತ್ರಕ್ಕೆ ವಿಂಡ್ಸರ್ ಮ್ಯಾನರ್ ಹೋಟೆಲ್ ಬಾಗಿಲು ತೆರೆದಿದೆ.

    ಪುನೀತ್ ರಾಜ್‍ಕುಮಾರ್, ಭರ್ಜರಿ ಚೇತನ್ ಕಾಂಬಿನೇಷನ್ನಿನ ಜೇಮ್ಸ್ ಚಿತ್ರದ ಕೆಲವು ಭಾಗಗಳ ಶೂಟಿಂಗ್ ಈ ಹೋಟೆಲ್‍ನಲ್ಲಿ ನಡೆಯುತ್ತಿದೆ. ಸಾಮಾನ್ಯವಾಗಿ ಯಾರಿಗೂ ಅನುಮತಿ ಕೊಡಲ್ಲ. ಆದರೆ ಪುನೀತ್ ರಾಜ್‍ಕುಮಾರ್ ಹೇಳಿದರೆ ಕೆಲಸ ಆಗುತ್ತೆ ಎನಿಸಿ, ಅವರಿಂದಲೇ ಮಾತನಾಡಿಸಿದೆವು. ಪುನೀತ್ ಚಿತ್ರನಾ..? ಹಾಗಾದರೆ ಓಕೆ ಎಂದರು ಎನ್ನುತ್ತಾರೆ ಚೇತನ್.

    ಸ್ಸೋ.. ವಿಂಡ್ಸರ್ ಮ್ಯಾನರ್‍ಗೆ ಜೇಮ್ಸ್ ಎಂಟ್ರಿ ಕೊಟ್ಟಿದ್ದಾಗಿದೆ.

  • ಬಹದ್ದೂರ್ ಹೊತ್ತಲ್ಲೇ ಜೇಮ್ಸ್ ಜಾಕ್‍ಪಾಟ್

    james movie begins

    ಪುನೀತ್ ರಾಜ್‍ಕುಮಾರ್ ಅಭಿನಯದ ಜೇಮ್ಸ್ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಬಹುದ್ದೂರ್ ಚೇತನ್ ನಿರ್ದೇಶನದ ಚಿತ್ರವಿದು. ಸುಮಾರು 4 ವರ್ಷಗಳ ಹಿಂದೆಯೇ ಅನೌನ್ಸ್ ಆಗಿದ್ದ ಚಿತ್ರ ಇಷ್ಟು ತಡವಾಗಿದ್ದೇಕೆ..? ಕಾರಣ ಕಮಿಟ್‍ಮೆಂಟ್ಸ್.

    ಜೇಮ್ಸ್ ಚಿತ್ರಕ್ಕೆ ಬುನಾದಿ ಬಿದ್ದಿದ್ದು ಬಹದ್ದೂರ್ ಚಿತ್ರದಲ್ಲಿ. ಆ ಚಿತ್ರಕ್ಕೆ ಪುನೀತ್ ಹಿನ್ನೆಲೆ ಧ್ವನಿ ಕೊಟ್ಟಿದ್ದರು. ಆಗ ಪುನೀತ್ ಅವರಿಗೆ ಕಥೆ ಹೇಳಿದ್ದೆ. ಔಟ್ ಆಫ್ ದಿ ಬಾಕ್ಸ್ ಸ್ಟೋರಿ. ಅವರಿಗೂ ಇಷ್ಟವಾಗಿತ್ತು. ಆದರೆ,ನಡುವೆ ಬೇರೆ ಏನೇನೋ ಕಮಿಟ್‍ಮೆಂಟ್ಸ್ ಬಂದ ಕಾರಣ, ಮುಂದೆ ಹೋಗುತ್ತಲೇ ಹೋಯ್ತು ಎಂದಿದ್ದಾರೆ ಚೇತನ್.

    ಅಂದಹಾಗೆ ಇದು ಪುನೀತ್ ಅಭಿನಯದ 30ನೇ ಸಿನಿಮಾ. ಮಾರ್ಚ್ 17ಕ್ಕೆ ಪುನೀತ್ ಹುಟ್ಟುಹಬ್ಬವಿದ್ದು, ಆ ದಿನ ಟೀಸರ್ ಕೊಡ್ತಾರಂತೆ ಚೇತನ್. ಚಿತ್ರಕ್ಕೆ ಚೇತನ್ ಅವರ ಸ್ನೇಹಿತ ಶೇಖರ್ ನಿರ್ಮಾಪಕರು.

    ಅಪ್ಪ ಅಮ್ಮ ಹೆಸರಿಟ್ಟರೆ ವಾಡಿಕೆ, ನಮಗೆ ನಾವೇ ಹೆಸರಿಟ್ಕೊಂಡ್ರೆ ಅದು ಬೇಡಿಕೆ ಅನ್ನೋ ಡೈಲಾಗ್ ಮೂಲಕ ಜೇಮ್ಸ್ ಶುರುವಾಗಿದೆ. ಕ್ಲಾಪ್ ಮಾಡಿರೋದು ಅಶ್ವಿನಿ ಪುನೀತ್ ರಾಜ್‍ಕುಮಾರ್.

  • ಬೋಲೋ ಬೋಲೋ ಜೇಮ್ಸ್ : ಸ್ಯಾಂಡಲ್‍ವುಡ್ ಸೆಲಬ್ರೇಷನ್

    ಬೋಲೋ ಬೋಲೋ ಜೇಮ್ಸ್ : ಸ್ಯಾಂಡಲ್‍ವುಡ್ ಸೆಲಬ್ರೇಷನ್

    ಜೇಮ್ಸ್ ಟೀಸರ್ ಬಂದಿದೆ. ಅಪ್ಪು ಹೀರೋ ಆಗಿ ನಟಿಸಿರೋ ಕೊನೆಯ ಚಿತ್ರ ಜೇಮ್ಸ್. ಟೀಸರ್‍ನ ಕ್ಷಣ ಕ್ಷಣವೂ ಅದ್ಭುತ. ಅದ್ಧೂರಿತನ. ಕಥೆಯ ಒಂದೆಳೆಯನ್ನಷ್ಟೇ ಬಿಟ್ಟುಕೊಟ್ಟು ಜೇಮ್ಸ್ ಪರಿಚಯ ಮಾಡಿಸಿದ್ದಾರೆ ಚೇತನ್ ಕುಮಾರ್. ಅಪ್ಪುಗೆ ಧ್ವನಿಯಾಗಿರೋದು ಶಿವಣ್ಣ.

    ಚಿತ್ರದಲ್ಲಿರೋದು ಒಂದೇ ಡೈಲಾಗ್. ಮೊದಲಿಂದಲೂ ನನಗೆ ರೆಕಾರ್ಡ್ ಬ್ರೇಕ್ ಮಾಡಿನೇ ಅಭ್ಯಾಸ ಅನ್ನೋ ಡೈಲಾಗ್. ನೋಡುವ ಅಭಿಮಾನಿಗಳ ಹೃದಯದಲ್ಲಿ ಚಳಕ್ ಎಂದರೆ ಟೀಸರ್ ಮಾತ್ರ ವ್ಹಾವ್ ಎನಿಸುತ್ತೆ. ಎಲ್ಲೆಲ್ಲೂ ಟೀಸರ್ ಹವಾ ಎದ್ದಿದೆ. ದಾಖಲೆ ಬರೆಯುತ್ತಿದೆ. ಇಡೀ ಕನ್ನಡ ಚಿತ್ರರಂಗ ಟೀಸರ್‍ನ್ನು ಶೇರ್ ಮಾಡಿರೋದು ವಿಶೇಷ. ಕನ್ನಡದ ಜೊತೆಗೆ ತಮಿಳು ಹಾಗೂ ಹಿಂದಿಯಲ್ಲಿ ಕೂಡಾ ಟೀಸರ್ ಬಂದಿದೆ. ಎಲ್ಲ ಕಡೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.

    ಕಿಶೋರ್ ಪತಿಕೊಂಡ ನಿರ್ಮಾಣದ ಜೇಮ್ಸ್ ರಿಲೀಸ್ ಆಗೋದು ಅಪ್ಪು ಹುಟ್ಟುಹಬ್ಬಕ್ಕೆ. ಮಾರ್ಚ್ 17ಕ್ಕೆ. ಚಿತ್ರದಲ್ಲಿ ಶಿವಣ್ಣ ಹಾಗೂ ರಾಘಣ್ಣ ಕೂಡಾ ನಟಿಸಿದ್ದಾರೆ. ಅಣ್ಣಾವ್ರ ಮಕ್ಕಳು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿರೋ ಏಕೈಕ ಸಿನಿಮಾ ಜೇಮ್ಸ್. ಪ್ರಿಯಾ ಆನಂದ್ ನಾಯಕಿ. ಜೊತೆಗೆ ಶರತ್ ಕುಮಾರ್, ಶ್ರೀಕಾಂತ್, ಅನು ಪ್ರಭಾಕರ್, ಅವಿನಾಶ್, ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್.. ಹೀಗೆ ಚಿತ್ರದಲ್ಲಿ ಕಲಾವಿದರ ಸೈನ್ಯವೇ ಇದೆ.

  • ಬೋಲೋ ಬೋಲೋರೆ ಜೇಮ್ಸ್

    james motion poster sensation

    ಯುವರತ್ನ ಟೀಸರ್ ಮೂಲಕ ಬರ್ತ್ ಡೇ ಮೊದಲು ಹಬ್ಬ ಶುರುವಾಯ್ತು. ಹಬ್ಬದ ದಿನದ ಕಿಕ್ ಹೆಚ್ಚಿಸಿದ್ದು ಜೇಮ್ಸ್.

    ಹುಟ್ಟುಹಬ್ಬದ ದಿನ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ ಜೇಮ್ಸ್ ಡೈರೆಕ್ಟರ್ ಚೇತನ್ ಕುಮಾರ್. ಕಿಶೋರ್ ಪತಿಕೊಂಡ ನಿರ್ಮಾಣದ ಜೇಮ್ಸ್ ಮೋಷನ್ ಪೋಸ್ಟರ್‍ನಲ್ಲಿಯೇ ಮಸ್ತ್ ಮಸ್ತ್ ಥ್ರಿಲ್ ಕೊಟ್ಟಿದೆ.

    ಕಷ್ಟ ಬಂದಾಗ ಹೆದರೋದು ಕಾಮನ್, ಎಲ್ಲವನ್ನೂ ಎದುರಿಸಿ ನಿಲ್ಲೋನು ನಂಬರ್ ಒನ್ ಅನ್ನೋ ಡೈಲಾಗ್‍ನೊಂದಿಗೆ ಶುರುವಾಗುತ್ತೆ ಪೋಸ್ಟರ್. ಬೋಲೋ ಬೋಲೋರೆ ಜೇಮ್ಸ್ ಅನ್ನೋ ರ್ಯಾಪ್ ಸಾಂಗ್, ಚೇಸಿಂಗ್ ಥ್ರಿಲ್ ಎಲ್ಲವನ್ನೂ ಲೈಟಾಗಿ ಟಚ್ ಮಾಡಿಸಿ ಥ್ರಿಲ್ ಕೊಡ್ತಾರೆ ಚೇತನ್.

    ಚರಣ್ ರಾಜ್ ಸಂಗೀತ ಇರೋ ಚಿತ್ರಕ್ಕೆ ಚೇತನ್ ಇನ್ನೂ ನಾಯಕಿಯನ್ನು ಪೈನಲ್ ಮಾಡಿಲ್ಲ.

  • ರಷ್ಯಾದಲ್ಲೂ ಜೇಮ್ಸ್..!

    ರಷ್ಯಾದಲ್ಲೂ ಜೇಮ್ಸ್..!

    ಜೇಮ್ಸ್ ಚಿತ್ರ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಲೇ ಇದೆ. ಆಸ್ಟ್ರೇಲಿಯಾದಲ್ಲಿ 150+ ಸ್ಕ್ರೀನ್‍ನಲ್ಲಿ ರಿಲೀಸ್ ಆಗುತ್ತಿದೆ. ಅಮೆರಿಕದ ಎಲ್ಲ 32 ರಾಜ್ಯಗಳ 75ಕ್ಕೂ ಹೆಚ್ಚು ನಗರಗಳಲ್ಲಿ ರಿಲೀಸ್ ಆಗುತ್ತಿದೆ. ನಾಳೆಯೇ. ಇದರ ಮಧ್ಯೆ ಇನ್ನೂ ಒಂದು ಬ್ರೇಕಿಂಗ್ ನ್ಯೂಸ್.

    ಇಡೀ ಜಗತ್ತನ್ನು ಆತಂಕಕ್ಕೆ ದೂಡಿರುವ, ಉಕ್ರೇನ್‍ನಲ್ಲಿ ರಣೋತ್ಸಾಹದಲ್ಲಿರೋ ರಷ್ಯಾದಲ್ಲೂ ರಿಲೀಸ್ ಆಗುತ್ತಿದೆ ಅಪ್ಪು ಜೇಮ್ಸ್. ರಷ್ಯಾದಲ್ಲಿ ರಿಲೀಸ್ ಆಗುತ್ತಿರೋ ಮೊದಲ ಕನ್ನಡ ಚಿತ್ರವಂತೆ ಜೇಮ್ಸ್. ರಾಜ್ಯದಲ್ಲಿ 1500ಕ್ಕೂ ಹೆಚ್ಚು ಸ್ಕ್ರೀನ್‍ನಲ್ಲಿ ಪ್ರದರ್ಶನವಾಗುತ್ತಿದ್ದು, ಮೊದಲ ದಿನವೇ 5 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್ ಆಗಿವೆ.

  • ಸೈನಿಕನ ಅವತಾರದಲ್ಲಿ ಜೇಮ್ಸ್ ಪುನೀತ್

    ಸೈನಿಕನ ಅವತಾರದಲ್ಲಿ ಜೇಮ್ಸ್ ಪುನೀತ್

    ಜೇಮ್ಸ್ ಚಿತ್ರದಲ್ಲಿ ಪುನೀತ್ ಆರ್ಮಿ ಅಧಿಕಾರಿಯಾಗಿ ನಟಿಸುತ್ತಿದ್ದಾರೆ ಎಂದು ನಿರ್ದೇಶಕ ಬಹದ್ದೂರ್ ಚೇತನ್ ಹೇಳಿದ್ದರು. ಅದರಂತೆಯೇ ಈಗ ಚಿತ್ರದ ಪೋಸ್ಟರ್ ಹೊರಬಿದ್ದಿದ್ದು, ಸೈನಿಕರ ಜೊತೆ ಪುನೀತ್ ನಿಂತಿರುವ ಪೋಸ್ಟರ್ ವ್ಹಾವ್ ಎನ್ನುವಂತಿದೆ. ಸಲಾಂ ಸೋಲ್ಜರ್.. ದೇಶಕ್ಕೆ ನೀನೇ ಪವರ್ ಅನ್ನೋ ಟ್ಯಾಗ್ ಲೈನ್ ಬೇರೆ ಜೊತೆಯಲ್ಲಿದೆ.

    ಬಹದ್ದೂರ್, ಭರ್ಜರಿ, ಭರಾಟೆಯ ನಂತರ ಚೇತನ್ ಕುಮಾರ್ ನಿರ್ದೇಶಿಸುತ್ತಿರುವ ಸಿನಿಮಾ ಜೇಮ್ಸ್. ಪ್ರಿಯಾ ಆನಂದ್ ನಾಯಕಿಯಾಗಿರುವ ಚಿತ್ರಕ್ಕೆ ಕಿಶೋರ್ ಪತಿಕೊಂಡ ನಿರ್ಮಾಪಕ. ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ ಆಗಸ್ಟ್ 14ರಂದು ಚಿತ್ರದ ನಿರ್ಮಾಪಕ ಕಿಶೋರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.