` james - chitraloka.com | Kannada Movie News, Reviews | Image

james

 • ಅಪ್ಪು ಹುಟ್ಟುಹಬ್ಬಕ್ಕೆ ಡಬಲ್ ಧಮಾಕಾ

  james motion poster fr puneeth's birthday

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 16ಕ್ಕೆ  44ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ ಪುನೀತ್. ಆ ದಿನ ಪುನೀತ್ ಅಭಿಮಾನಿಗಳಿಗೆ ಡಬಲ್ ಧಮಾಕಾ ಕಾಯುತ್ತಿದೆ. ಒಂದಲ್ಲ.. ಎರಡು ಭರ್ಜರಿ ಉಡುಗೊರೆ ಸಿಗುತ್ತಿವೆ.

  ಈಗಾಗಲೇ ಗೊತ್ತಿರುವಂತೆ ಆ ದಿನ ಯುವರತ್ನ ಚಿತ್ರದ ಡೈಲಾಗ್ ಟೀಸರ್ ರಿಲೀಸ್ ಆಗಲಿದೆ. ಇದರ ಜೊತೆಯಲ್ಲಿ ಬರುತ್ತಿದೆ ಜೇಮ್ಸ್ ಮೋಷನ್ ಪೋಸ್ಟರ್.

  ಜೇಮ್ಸ್ ಅಡ್ಡಾದಿಂದ ಬಂದಿರೋ ಸುದ್ದಿ ಪ್ರಕಾರ ಆ ದಿನ ಮೋಷನ್ ಪೋಸ್ಟರ್ ಫಿಕ್ಸ್. ಬೋಲೋ ಬೋಲೋ ಜೇಮ್ಸ್ ಅನ್ನೋ ಟೈಟಲ್ ಇರೋ ಪೋಸ್ಟರ್ ವೈರಲ್ ಆಗ್ತಿದೆ. ಏನದು.. ಸ್ಪೆಷಲ್..? ವೇಯ್ಟ್.. ವೇಯ್ಟ್.. ವೇಯ್ಟ್..

 • ಅಪ್ಪುಗೆ ಅಣ್ಣ ಆಗೋಕೆ ಅದೃಷ್ಟ ಮಾಡಿದ್ದೆ : ಶಿವಣ್ಣ

  ಅಪ್ಪುಗೆ ಅಣ್ಣ ಆಗೋಕೆ ಅದೃಷ್ಟ ಮಾಡಿದ್ದೆ : ಶಿವಣ್ಣ

  ಜೇಮ್ಸ್ ಮಾರ್ಚ್ 17ಕ್ಕೆ ರಿಲೀಸ್ ಅಗುತ್ತಿದೆ. ಸೆನ್ಸಾರ್ ಆಗಿದ್ದು ಯು/ಎ ಪ್ರಮಾಣ ಪತ್ರವೂ ಸಿಕ್ಕಿದೆ. ಚಿತ್ರದ ಪ್ರಮೋಶನ್ ಶುರುವಾಗಿದ್ದು, ಬಳ್ಳಾರಿಯ ಹೊಸಪೇಟೆಯಲ್ಲಿ ಚಿತ್ರದ ಸುದ್ದಿಗೋಷ್ಟಿ ನಡೆಯಿತು. ಚಿತ್ರದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಮತ್ತು ತಂತ್ರಜ್ಞರು ಸುದ್ದಿಗೋಷ್ಟಿಯಲ್ಲಿದ್ದರು. ಚಿತ್ರದ ಪ್ರೀ ಈವೆಂಟ್ ಶೋ ಬೆಂಗಳೂರಿನಲ್ಲಿಯೇ ನಡೆಯಲಿದೆ. ಆ ಕಾರ್ಯಕ್ರಮಕ್ಕೆ ಇಡೀ ಚಿತ್ರರಂಗ ಹಾಜರ್ ಇರಲಿದೆ.

  ಅಪ್ಪು ಇಲ್ಲ ಅನ್ನೋದನ್ನು ಅರಗಿಸಿಕೊಂಡು ಹೇಗೋ ಬದುಕುತ್ತಿದ್ದೇವೆ. ಯಾವಾಗ ಫೋನ್ ಮಾಡಿದರೂ ಹೇಳು ಶಿವಣ್ಣ ಅಂತಿದ್ದ. ಅವನು ಹಗ್ ಮಾಡೊವಾಗ ಹೃದಯಕ್ಕೆ ಟಚ್ ಆಗುವಂತೆ ಅಪ್ಪಿಕೊಳ್ತಿದ್ದ. ಎಷ್ಟೋ ಕಡೆ ಅದರಲ್ಲೂ ಚೆನ್ನೈ, ಕೃಷ್ಣಗಿರಿ ಮೊದಲಾದ ಕಡೆ ನೀವು ಪುನೀತ್ ಅಣ್ಣ ಅಲ್ವಾ ಅಂತಾ ಜನ ಕೇಳಿದ್ರು. ಅವನಿಗೆ ಅಣ್ಣನಾಗೋಕೆ ಅದೃಷ್ಟ ಮಾಡಿದ್ದೆ ಎಂದು ಭಾವುಕರಾದರು ಶಿವಣ್ಣ.

  ಈ ರೀತಿಯ ಪ್ರಮೋಷನ್ ಮಾಡುವ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಚಿಕ್ಕಣ್ಣ ಕಣ್ಣೀರಾದರೆ, ಅಪ್ಪು ಸರ್ ಕೊಡ್ತಾ ಇದ್ದ ಪ್ರೋತ್ಸಾಹ ಮಿಸ್ ಮಾಡಿಕೊಳ್ತೀನಿ ಎಂದವರು ಚೇತನ್ ಕುಮಾರ್. ಚಿತ್ರತಂಡಕ್ಕೆ ಹಾಗೂ ಅಶ್ವಿನಿ ಪುನೀತ್ ಅವರಿಗೆ ವಿಶೇಷ ಧನ್ಯವಾದ ತಿಳಿಸಿದರು ಡೈರೆಕ್ಟರ್ ಚೇತನ್.

  ಅಪ್ಪು ಸರ್ ಇಲ್ಲದೆ ಈ ಸಿನಿಮಾ ರಿಲೀಸ್ ಮಾಡೋಕೆ ಕಷ್ಟವಾಗ್ತಿದೆ ಎಂದು ಭಾವುಕರಾದ ನಿರ್ಮಾಪಕ ಕಿಶೋರ್ ಚಿತ್ರದ ಬಿಡುಗಡೆಗೆ ದೊಡ್ಡ ಯೋಜನೆಯನ್ನೇ ಹಮ್ಮಿಕೊಂಡಿದ್ದಾರೆ. ಮಾರ್ಚ್ 13ರಂದು ಪ್ರೀ-ಈವೆಂಟ್ ನಡೆಯೋ ಸಾಧ್ಯತೆ ಇದೆ.

 • ಏಪ್ರಿಲ್ 14ಕ್ಕೆ ಓಟಿಟಿಯಲ್ಲಿ ಜೇಮ್ಸ್

  ಏಪ್ರಿಲ್ 14ಕ್ಕೆ ಓಟಿಟಿಯಲ್ಲಿ ಜೇಮ್ಸ್

  ಪುನೀತ್ ರಾಜಕುಮಾರ್ ಹೀರೋ ಆಗಿ ನಟಿಸಿರೋ ಜೇಮ್ಸ್ ಚಿತ್ರ ಏಪ್ರಿಲ್ 14ಕ್ಕೆ ಮನೆ ಮನೆಗೆ, ಮೊಬೈಲ್‍ಗೆ ಬರುತ್ತಿದೆ. ಏ.14ರಂದು ಜೇಮ್ಸ್ ಸೋನಿ ಲೈವ್ ಓಟಿಟಿಯಲ್ಲಿ ರಿಲೀಸ್ ಆಗಲಿದೆ. ಪುನೀತ್ ರಾಜಕುಮಾರ್ ಹುಟ್ಟುಹಬ್ಬದಂದು ಬಿಡುಗಡೆಯಾಗಿದ್ದ ಜೇಮ್ಸ್ ದಾಖಲೆಯ ಕಲೆಕ್ಷನ್ ಮಾಡಿದೆ. 100 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿರುವ ಜೇಮ್ಸ್ ಈಗಲೂ ಬಹುತೇಕ ಕಡೆ ಅತ್ಯುತ್ತಮ ಪ್ರದರ್ಶನ ಕಾಣುತ್ತಿದೆ.

  ಪುನೀತ್, ಪ್ರಿಯಾ ಆನಂದ್ ಪ್ರಧಾನ ಪಾತ್ರದಲ್ಲಿರುವ ಜೇಮ್ಸ್ ಚಿತ್ರಕ್ಕೆ ಚೇತನ್ ಕುಮಾರ್ ನಿರ್ದೇಶಕ. ಕಿಶೋರ್ ಪತ್ತಿಕೊಂಡ ನಿರ್ಮಾಣದ ಜೇಮ್ಸ್ ಸದ್ಯಕ್ಕೆ ಕಡಿಮೆ ಅವಧಿಯಲ್ಲಿ ಅತ್ಯಧಿಕ ಕಲೆಕ್ಷನ್ ಮಾಡಿದ ದಾಖಲೆ ಬರೆದಿದೆ. 

 • ಕನ್ನಡ ಚಿತ್ರರಂಗದ ಅತೀ ದೊಡ್ಡ ರಿಲೀಸ್ ಜೇಮ್ಸ್

  ಕನ್ನಡ ಚಿತ್ರರಂಗದ ಅತೀ ದೊಡ್ಡ ರಿಲೀಸ್ ಜೇಮ್ಸ್

  ಜೇಮ್ಸ್ ಜಗತ್ತಿನಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಿದೆ. ಇದು ಪುನೀತ್ ಹೀರೋ ಆಗಿ ನಟಿಸಿರೋ ಕಟ್ಟಕಡೆಯ ಸಿನಿಮಾ. ಲಕ್ಕಿಮ್ಯಾನ್ ಚಿತ್ರದಲ್ಲಿ ನಟಿಸಿದ್ದರೂ, ಹೀರೋ ಪುನೀತ್ ಅಲ್ಲ. ಈಗ ಜೇಮ್ಸ್ ಅವರ ಹುಟ್ಟುಹಬ್ಬದಂದೇ ರಿಲೀಸ್ ಆಗಿದೆ. ಆದರೆ.. ಅವರಿಲ್ಲ. ಜೇಮ್ಸ್ ದಾಖಲೆಯನ್ನೇ ಬರೆಯುತ್ತಿದೆ.

  ಕರ್ನಾಟಕ ಸೇರಿದಂತೆ ವಿಶ್ವದಾದ್ಯಂತ 4000+ ಸ್ಕ್ರೀನ್‍ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.

  ಈಗಾಗಲೇ 15 ಲಕ್ಷಕ್ಕೂ ಹೆಚ್ಚು ಥಿಯೇಟರ್ ಸೇಲ್ ಆಗಿವೆ. ಮೊದಲ 4 ದಿನದ ಎಲ್ಲ ಟಿಕೆಟ್‍ಗಳೂ ಸೋಲ್ಡ್ ಔಟ್.

  ಆಸ್ಟ್ರೇಲಿಯಾದಲ್ಲಿ ಸೆನ್ಸಾರ್ ಆಗಿ ರಿಲೀಸ್ ಆದ ಮೊದಲ  ಕನ್ನಡ ಸಿನಿಮಾ ಜೇಮ್ಸ್.

  ರಷ್ಯಾದಲ್ಲಿ ರಿಲೀಸ್ ಆಗಿರೋ ಮೊದಲ ಕನ್ನಡ ಸಿನಿಮಾ ಜೇಮ್ಸ್.

  ನ್ಯೂಜೆರ್ಸಿಯಲ್ಲಿ ಅಪ್ಪು ಅಭಿಮಾನಿಗಳು 150 ಕಾರುಗಳಲ್ಲಿ ಮೆರವಣಿಗೆ ಮಾಡಲಿದ್ದಾರೆ. ಅಮೆರಿಕದಲ್ಲಿ ಕನ್ನಡದ ಹೀರೋಗೆ ಇಷ್ಟು ದೊಡ್ಡ ಸ್ವಾಗತ ಪಡೆಯುತ್ತಿರುವ ಚಿತ್ರ ಜೇಮ್ಸ್.

  ಇನ್ನು ವೀರೇಶ್ ಚಿತ್ರಮಂದಿರ ಅಷ್ಟೇ ಅಲ್ಲ, ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲೂ ಅಪ್ಪು ಕಟೌಟ್‍ಗಳು ರಾರಾಜಿಸುತ್ತಿವೆ. ಜೊತೆಗೆ ಅಭಿಮಾನಿಗಳಿಂದ ಪೂಜೆ, ರಕ್ತದಾನ, ಅನ್ನ ಸಂತರ್ಪಣೆ, ಆರೋಗ್ಯ ತಪಾಸಣೆ ಶಿಬಿರ, ಗಿಡಗಳನ್ನು ನೆಡುವ ಅಭಿಯಾನ, ಶಾಲೆ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ, ಅನಾಥಾಶ್ರಮ-ವೃದ್ಧಾಶ್ರಮಗಳಲ್ಲಿ ಸೇವೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳೂ ನಡೆಯುತ್ತಿವೆ. ಒಂದು ಚಿತ್ರದ ಬಿಡುಗಡೆ ವೇಳೆ ಇಷ್ಟು ದೊಡ್ಡ ಮಟ್ಟದ ಸಾಮಾಜಿಕ ಸೇವೆ ನಡೆಯುತ್ತಿರುವುದೂ ಇದೇ ಮೊದಲು. ಪುನೀತ್ ಪಾಲಿಸುತ್ತಿದ್ದ ಕೆಲಸಗಳನ್ನೇ ಅಭಿಮಾನಿಗಳು ಮಾಡುತ್ತಿರುವುದು ವಿಶೇಷ.

 • ಜ.19ಕ್ಕೆ ಜೇಮ್ಸ್ ಸ್ಟಾರ್ಟ್

  after 4 long years wait, james begin

  ಪುನೀತ್ ರಾಜ್‍ಕುಮಾರ್ ಅಭಿನಯದ ಜೇಮ್ಸ್ ಯಾವಾಗ ಶುರುವಾಗುತ್ತೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ನಿರೀಕ್ಷೆಯಂತೆಯೇ ಜನವರಿ 19ರಂದು ಚಿತ್ರದ ಮುಹೂರ್ತ ನಡೆಯುತ್ತಿದೆ. 4 ವರ್ಷಗಳ ಹಿಂದೆ ಘೋಷಣೆಯಾಗಿದ್ದ ಚಿತ್ರವಿದು. ಭರ್ಜರಿ ಚೇತನ್ ನಿರ್ದೇಶನದ ಚಿತ್ರಕ್ಕೆ ಈಗ ಕಾಲ ಕೂಡಿ ಬಂದಿದೆ.

  ಜನವರಿ 19ರಂದು ದೇವಸಂದ್ರ ಲೇಔಟ್‍ನಲ್ಲಿರೋ ಶ್ರೀಬಾಲಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ನಡೆಯಲಿದೆ. ಆದರೆ ಶೂಟಿಂಗ್ ಶುರುವಾಗುವುದೇನಿದ್ದರೂ ಫೆಬ್ರವರಿಯಲ್ಲಿ. ಅಷ್ಟು ಹೊತ್ತಿಗೆ ಯುವರತ್ನ ಶೂಟಿಂಗ್ ಮುಗಿದು, ಜೇಮ್ಸ್ ಲುಕ್‍ಗೆ ಪುನೀತ್ ಬದಲಾಗುತ್ತಾರೆ.

  ಅಂದಹಾಗೆ ಜನವರಿ 19, ಚೇತನ್ ಪಾಲಿಗೆ ಲಕ್ಕಿ ಡೇ ಕೂಡಾ ಹೌದು. ಭರಾಟೆ ಚಿತ್ರ ಸೆಟ್ಟೇರಿದ್ದ ದಿನವದು. 

 • ಜೇಮ್ಸ್ : 3ನೇ ವಾರವೂ ಬಾಕ್ಸಾಫೀಸ್ ಬಾಸ್

  ಜೇಮ್ಸ್ : 3ನೇ ವಾರವೂ ಬಾಕ್ಸಾಫೀಸ್ ಬಾಸ್

  ಪುನೀತ್ ರಾಜಕುಮಾರ್ ಹೀರೋ ಆಗಿ ನಟಿಸಿರುವ ಕೊನೆಯ ಸಿನಿಮಾ ಜೇಮ್ಸ್. ಆರಂಭದ ವಾರವೇ 100 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದ್ದ ಜೇಮ್ಸ್ ಚಿತ್ರ, 2ನೇ ವಾರವೂ ಬೊಂಬಾಟ್ ಕಲೆಕ್ಷನ್ ಮಾಡಿತ್ತು. ಆರ್.ಆರ್.ಆರ್. ಚಿತ್ರಕ್ಕಾಗಿ ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾದರೂ ಬಾಕ್ಸಾಫೀಸ್ ಕಲೆಕ್ಷನ್ ಸ್ಟಡಿಯಾಗಿತ್ತು. ಈಗ 3ನೇ ವಾರ. ಚಿತ್ರಮಂದಿರಗಳ ಸಂಖ್ಯೆ ಇನ್ನಷ್ಟು ಕಡಿಮೆಯಾಗಿದೆ. ಆದರೆ.. ಈಗಲೂ ಜೇಮ್ಸ್ ಚಿತ್ರದ ಕಲೆಕ್ಷನ್ ಚೆನ್ನಾಗಿಯೇ ಇದೆ.

  ಚೇತನ್ ಕುಮಾರ್ ನಿರ್ದೇಶನದ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಿರೋ ನಿರ್ಮಾಪಕ ಕಿಶೋರ್ ಪತ್ತಿಕೊಂಡ, ಲಾಭವನ್ನೂ ನೋಡಿದ್ದಾರೆ. ಪ್ರಿಯಾ ಆನಂದ್ ನಾಯಕಿಯಾಗಿರೋ ಚಿತ್ರದಲ್ಲಿ ಶಿವಣ್ಣ, ರಾಘವೇಂದ್ರ ರಾಜಕುಮಾರ್ ಕೂಡಾ ನಟಿಸಿದ್ದು, ಅಣ್ಣಾವ್ರ ಮಕ್ಕಳು ಒಂದೇ ಚಿತ್ರದಲ್ಲಿ ನಟಿಸಿರೋ ಏಕೈಕ ಸಿನಿಮಾ ಜೇಮ್ಸ್. ಪುನೀತ್ ಪಾತ್ರಕ್ಕೆ ಡಬ್ ಮಾಡಿರುವುದೂ ಶಿವಣ್ಣನೇ. 2ನೇ ವಾರಕ್ಕೆ ಜೇಮ್ಸ್ ಎತ್ತಂಗಡಿ ವಿವಾದ ಎದ್ದಾಗ ಖುದ್ದು ಶಿವಣ್ಣನೇ ಮುಂದೆ ನಿಂತು ವಿವಾದ ಬಗೆಹರಿಸಿದ್ದರು. ಈಗ 3ನೇ ವಾರವೂ ಉತ್ತಮವಾಗಿಯೇ ಕಲೆಕ್ಷನ್ ಮಾಡುತ್ತಿದೆ ಜೇಮ್ಸ್.

 • ಜೇಮ್ಸ್ : ದಾಖಲೆ ಬರೆಯಲಿದೆ ಫಸ್ಟ್ ಡೇ

  ಜೇಮ್ಸ್ : ದಾಖಲೆ ಬರೆಯಲಿದೆ ಫಸ್ಟ್ ಡೇ

  ಜೇಮ್ಸ್. ರಿಲೀಸ್ ಆಗುತ್ತಿರೋದು ಮಾರ್ಚ್ 17ಕ್ಕೆ. ಇನ್ನೆರಡೇ ದಿನ ಬಾಕಿ. ಆನ್‍ಲೈನ್ ಬುಕ್ಕಿಂಗ್ ಶುರುವಾಗಿದೆ. ಪುನೀತ್ ಹೀರೋ ಆಗಿ ನಟಿಸಿರೋ ಕೊನೆಯ ಸಿನಿಮಾ ಅನ್ನೋ ಸೆಂಟಿಮೆಂಟ್ ಕೂಡಾ ಜೊತೆಗಿರೋದ್ರಿಂದ ಅಭಿಮಾನಿಗಳು ಅಪ್ಪುವನ್ನು ಕಣ್ತುಂಬಿಕೊಳ್ಳೋಕೆ ಕಾತರರಾಗಿದ್ದಾರೆ.

  ರಾಜ್ಯದಲ್ಲಿಯೇ ಹೆಚ್ಚೂ ಕಡಿಮೆ 150 ಥಿಯೇಟರ್ ಸೇರಿದಂತೆ 400ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಪ್ರದರ್ಶನಗೊಳ್ಳಲಿದೆ ಜೇಮ್ಸ್. ಚೇತನ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ ಮತ್ತು ರಾಘವೇಂದ್ರ ರಾಜ್‍ಕುಮಾರ್ ಕೂಡಾ ನಟಿಸಿರೋದು ಇನ್ನೊಂದು ಹೈಲೈಟ್. ಪುನೀತ್ ಪಾತ್ರಕ್ಕೆ ಶಿವಣ್ಣ ಧ್ವನಿ ಕೊಟ್ಟಿದ್ದಾರೆ. ಚಿತ್ರದ ಫಸ್ಟ್ ಡೇ ಶೋಗಳು ದಾಖಲೆ ಬರೆಯಲಿವೆ. ಬೆಳಗ್ಗೆ 2 ಗಂಟೆ, 4 ಗಂಟೆ, 7 ಗಂಟೆಯಿಂದಲೇ ಶೋಗಳು ಶುರುವಾಗಲಿವೆ.

  ಬುಕ್ಕಿಂಗ್ ಕೂಡಾ ಅಷ್ಟೆ.. ಮೂರ್ನಾಲ್ಕು ದಿನಗಳ ಬುಕ್ಕಿಂಗ್ ಬಹುತೇಕ ಕಂಪ್ಲೀಟ್. ಟಿಕೆಟ್ ದರವೂ ಹೆಚ್ಚಿರೋದ್ರಿಂದ ಮೊದಲ ದಿನ 30 ಕೋಟಿ ಕಲೆಕ್ಷನ್ ಆದರೂ ಆಶ್ಚರ್ಯವಿಲ್ಲ. ನಿರ್ಮಾಪಕ ಕಿಶೋರ್ ಪತ್ತಿಕೊಂಡ ಚಿತ್ರವನ್ನು ಅದ್ಧೂರಿಯಾಗಿಯೇ ಪ್ರೇಕ್ಷಕರಿಗೆ ತಲುಪಿಸುತ್ತಿದ್ದಾರೆ.

 • ಜೇಮ್ಸ್ : ಬಾಕ್ಸಾಫೀಸ್ ದಾಖಲೆ ಎಷ್ಟು?

  ಜೇಮ್ಸ್ : ಬಾಕ್ಸಾಫೀಸ್ ದಾಖಲೆ ಎಷ್ಟು?

  ಜೇಮ್ಸ್ ರಿಲೀಸ್ ಆಗಿದ್ದು, ಅಭಿಮಾನಿಗಳು ಅಧ್ರ್ರರಾಗುತ್ತಲೇ ಸಂಭ್ರಮಿಸಿದ್ದನ್ನು ಇಡೀ ನೋಡಿದ್ದೀರಿ.  ಹೀರೋ ಆಗಿ ಇದು ಪುನೀತ್ ಕಡೆಯ ಸಿನಿಮಾ. ಹೀರೋ ಅಲ್ಲದೇ ಇರೋ ಇನ್ನೂ ಒಂದು ಸಿನಿಮಾ ರೆಡಿಯಾಗುತ್ತಿದೆ. ಇದೆಲ್ಲದರ ನಡುವೆ ಜೇಮ್ಸ್ ಕಲೆಕ್ಷನ್ ಎಷ್ಟು?

  ಜೇಮ್ಸ್ ಒಟ್ಟು ಪ್ರದರ್ಶನಗಳ ಸಂಖ್ಯೆ : 4 ಸಾವಿರಕ್ಕೂ ಹೆಚ್ಚು

  ಕರ್ನಾಟಕದಲ್ಲಿ ಒಟ್ಟು ಶೋಗಳು : 2500ಕ್ಕೂ ಹೆಚ್ಚು

  ಇಂಡಿಯಾ : ಆಂಧ್ರ-500 ಶೋ, ತಮಿಳುನಾಡು-150 ಶೋ, ಕೇರಳ-100 ಶೋ, ಇತರೆ ರಾಜ್ಯಗಳು-400 ಶೋ..

  ವಿಶ್ವ : ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್, ರಷ್ಯಾ, ಕೆನಡಾ, ದುಬೈ, ಯುಎಇ, ಸೌದಿ ಅರೇಬಿಯಾ ಸೇರಿದಂತೆ 50ಕ್ಕೂ ಹೆಚ್ಚು ದೇಶಗಳು

  ಅಧಿಕೃತವಾಗಿ ಲೆಕ್ಕ ಸಿಕ್ಕಿಲ್ಲವಾದರೂ ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ 30 ಕೋಟಿ ಹತ್ತಿರದಲ್ಲಿದೆ. ಟ್ಯಾಕ್ಸ್ ಕಟ್ ಆಗಿ ನಿರ್ಮಾಪಕರಿಗೆ 20 ರಿಂದ 22 ಕೋಟಿಗೂ ಹೆಚ್ಚು ಲಾಭ ಬರುವ ನಿರೀಕ್ಷೆ ಇದೆ. ಭಾನುವಾರದವರೆಗೆ ಎಲ್ಲ ಕಡೆ ಟಿಕೆಟ್ ಸೋಲ್ಡ್ ಔಟ್ ಆಗಿವೆ. 3 ವಾರಗಳ ಬುಕಿಂಗ್ ಶೇ.80ರಷ್ಟು ಆಗಿದೆಯಂತೆ.

  ಇದರ ಮಧ್ಯೆ ಜೇಮ್ಸ್ ಸ್ಯಾಟಲೈಟ್ ಕೂಡಾ ಒಳ್ಳೆಯ ಬೆಲೆಗೆ ಮಾರಾಟವಾಗಿದೆ. ಇದುವರೆಗೆ ಅತೀ ಹೆಚ್ಚು ಸ್ಯಾಟಲೈಟ್ ಹಕ್ಕು ಪಡೆದ ದಾಖಲೆ ಕೆಜಿಎಫ್ ಹೆಸರಲ್ಲಿತ್ತು. ಅದನ್ನು ಮುರಿದಿರುವ ಜೇಮ್ಸ್ 13.80 ಕೋಟಿಗೆ ಸೇಲ್ ಆಗಿದೆ ಅನ್ನೋ ಸುದ್ದಿಯಿದೆ. ತೆಗೆದುಕೊಂಡಿರೋದು ಸ್ಟಾರ್ ಸುವರ್ಣ ಅನ್ನೋ ಮಾಹಿತಿ ಇದೆ. ಅಧಿಕೃತವಾಗಿಲ್ಲ.

  ಇದು ನಿರ್ಮಾಪಕ ಕಿಶೋರ್ ಪತ್ತಿಕೊಂಡ ಮತ್ತು ನಿರ್ದೇಶಕ ಚೇತನ್ ಕುಮಾರ್ ಅವರಿಗೆ ಒಂದೆಡೆ ಖುಷಿ. ಮತ್ತೊಂದೆಡೆ ಪುನೀತ್ ಇಲ್ಲದ ದುಃಖ. ಇವೆರಡರ ನಡುವೆಯೇ ಜೇಮ್ಸ್ ಚಿತ್ರವನ್ನು ಮನೆ ಮನೆಗೂ ತಲುಪಿಸುತ್ತಿದ್ದಾರೆ ಕಿಶೋರ್.

 • ಜೇಮ್ಸ್ 25ನೇ ದಿನದ ಸಂಭ್ರಮ ಎಲ್ಲಿ ಗೊತ್ತಾ..?

  ಜೇಮ್ಸ್ 25ನೇ ದಿನದ ಸಂಭ್ರಮ ಎಲ್ಲಿ ಗೊತ್ತಾ..?

  ಜೇಮ್ಸ್ ಭರ್ಜರಿ ದಾಖಲೆ ಬರೆಯುತ್ತಿದೆ. ಪುನೀತ್ ಅವರು ಹೀರೋ ಆಗಿ ನಟಿಸಿರೋ ಕೊನೆಯ ಸಿನಿಮಾ ಆಗಿರುವ ಕಾರಣಕ್ಕೆ ಅಭಿಮಾನಿಗಳ ಕಾತುರವೂ ಹೆಚ್ಚು. ಹೀಗಾಗಿ ರಾಜ್ಯದ ಎಲ್ಲ ಥಿಯೇಟರುಗಳ ಎಲ್ಲ ಶೋಗಳೂ ಹೌಸ್‍ಫುಲ್ ಆಗಿವೆ. ಸಿನಿಮಾ ಸೂಪರ್ ಸಕ್ಸಸ್. ಹೀಗಾಗಿಯೇ ಜೇಮ್ಸ್ ನಿರ್ಮಾಪಕರ ಕಿಶೋರ್ ಪತ್ತಿಕೊಂಡ ಚಿತ್ರದ ಸಕ್ಸಸ್ ಮೀಟ್ ಆಯೋಜಿಸಲು ನಿರ್ಧರಿಸಿದ್ದಾರೆ.

  ಚಿತ್ರದ 25ನೇ ದಿನ ಸಕ್ಸಸ್ ಮೀಟ್ ಮಾಡುವ ಯೋಜನೆ ಇದೆ. ಹೊಸಪೇಟೆಯಲ್ಲಿ ಕಾರ್ಯಕ್ರಮ ನಡೆಸುವ ಉದ್ದೇಶವಿದೆ. ಶಿವಣ್ಣ ಶೂಟಿಂಗ್‍ನಲ್ಲಿದ್ದಾರೆ. ಅವರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಹೇಳುತ್ತೇನೆ ಎಂದಿದ್ದಾರೆ ಕಿಶೋರ್ ಪತ್ತಿಕೊಂಡ.

  ಚಿತ್ರ ಮೊದಲ ದಿನವೇ 30 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, 2ನೇ ದಿನದ ಕಲೆಕ್ಷನ್ ಡೀಟೈಲ್ಸ್ ಸಿಕ್ಕಿಲ್ಲ. ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್, ಸ್ಯಾಟಲೈಟ್, ಒಟಿಟಿ, ಡಬ್ಬಿಂಗ್ ರೈಟ್ಸ್‍ಗಳಿಂದಲೇ 40 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿರುವ ಸುದ್ದಿ ಇದೆ.

 • ಜೇಮ್ಸ್ ಅಪ್ಪುಗೆ ಯಾರ ಧ್ವನಿ? ನಿರ್ಮಾಪಕರ ಐಡಿಯಾ ಏನು?

  ಜೇಮ್ಸ್ ಅಪ್ಪುಗೆ ಯಾರ ಧ್ವನಿ? ನಿರ್ಮಾಪಕರ ಐಡಿಯಾ ಏನು?

  ಜೇಮ್ಸ್ ಚಿತ್ರದ ಚಿತ್ರೀಕರಣ ಮುಗಿಯುವ ಮೊದಲೇ ವಿಧಿ ಆಘಾತ ನೀಡಿತ್ತು. ಅಪ್ಪು ದೂರವಾದರು. ಈಗ ಜೇಮ್ಸ್ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಎಲ್ಲರಲ್ಲಿಯೂ ಕಾಡುತ್ತಿರುವುದು ಒಂದೇ ಪ್ರಶ್ನೆ. ಪುನೀತ್ ಪಾತ್ರಕ್ಕೆ ಡಬ್ ಮಾಡುವವರು ಯಾರು?

  ಶಿವಣ್ಣ ನಾನು ರೆಡಿ ಎಂದರಾದರೂ ಶಿವಣ್ಣ ಧ್ವನಿ ಪುನೀತ್ ಧ್ವನಿಗೆ ಹೊಂದುವುದಿಲ್ಲ. ನಿರ್ಮಾಪಕರು ಮತ್ತು ನಿರ್ದೇಶಕರು ಹಲವಾರು ಮಿಮಿಕ್ರಿ ಆರ್ಟಿಸ್ಟ್‍ಗಳ ಧ್ವನಿಯನ್ನೂ ಟ್ರೈ ಮಾಡಿದ್ದಾರೆ.

  ಎರಡು ಮೂರು ನಿಮಿಷ ಪುನೀತ್ ಧ್ವನಿ ಅನುಕರಣೆ ಮಾಡೋದೇ ಬೇರೆ. ಎರಡೂವರೆ ಗಂಟೆಯ ಸಿನಿಮಾಗೆ ಪುನೀತ್ ಧ್ವನಿ ಕೂರಿಸೋದೇ ಬೇರೆ. ಅದು ಅಸಾಧ್ಯ ಎನ್ನುತ್ತಾರೆ ನಿರ್ಮಾಪಕ ಕಿಶೋರ್.

  ಶೂಟಿಂಗ್ ವೇಳೆ ರೆಕಾರ್ಡ್ ಆಗಿರುವ ಪುನೀತ್ ಅವರ ಧ್ವನಿಯನ್ನೇ ಸಿನಿಮಾದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿದ್ದೇವೆ. ರೆಕಾರ್ಡ್ ಆಗಿರುವ ವಾಯ್ಸ್‍ನ್ನೇ ಹಲವು ಲ್ಯಾಬ್‍ಗಳಿಗೆ ಕಳಿಸಿದ್ದೇವೆ. ಯಾರು ಕಳಿಸಿರೋದು ಚೆನ್ನಾಗಿರುತ್ತೋ, ಅದನ್ನು ಉಳಿಸಿಕೊಳ್ಳುತ್ತೇವೆ ಎಂದಿದ್ದಾರೆ ಕಿಶೋರ್.

  ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಚಿತ್ರದ ಬಹುಪಾಲು ಶೂಟಿಂಗ್ ನಿಧನಕ್ಕೆ ಮುನ್ನವೇ ಮುಗಿದಿತ್ತು. ಒಂದು ಹಾಡು ಬ್ಯಾಲೆನ್ಸ್ ಇತ್ತು. ಅದನ್ನು ಚಿತ್ರತಂಡ ಡ್ರಾಪ್ ಮಾಡಿದೆ. ಅಲ್ಲದೆ ಚಿತ್ರದ ಕೊನೆಗೆ ಶಿವಣ್ಣ ಮತ್ತು ರಾಘವೇಂದ್ರ ರಾಜ್‍ಕುಮಾರ್ ಅವರನ್ನು ಪುಟ್ಟ ಪುಟ್ಟ ಪಾತ್ರಗಳ ಮೂಲಕ ಎಂಟ್ರಿ ಕೊಡಿಸಲಾಗಿದೆ. ಆ ಮೂಲಕ ರಾಜ್‍ಕುಮಾರ್ ಸೋದರರನ್ನು ಒಂದೇ ಚಿತ್ರದಲ್ಲಿ ನೋಡಬೇಕು ಎನ್ನುವ ಅಭಿಮಾನಿಗಳ ಆಸೆಯನ್ನೂ ಈಡೇರಿಸುವ ಪ್ರಯತ್ನ ಮಾಡಲಾಗಿದೆ.

 • ಜೇಮ್ಸ್ ಚಿತ್ರಕ್ಕೆ ಆರ್.ಆರ್.ಆರ್. ಕಂಟಕ : ಸಿದ್ದರಾಮಯ್ಯ ಆರೋಪವೇನು?

  ಜೇಮ್ಸ್ ಚಿತ್ರಕ್ಕೆ ಆರ್.ಆರ್.ಆರ್. ಕಂಟಕ : ಸಿದ್ದರಾಮಯ್ಯ ಆರೋಪವೇನು?

  ಜೇಮ್ಸ್ ಚಿತ್ರ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಪ್ರತಿದಿನ, ಪ್ರತಿ ಶೋ ಹೌಸ್‍ಫುಲ್. ನಾಲ್ಕೇ ದಿನಕ್ಕೆ 100 ಕೋಟಿ ದಾಟಿ ದಾಖಲೆ ಬರೆದಿರೋ ಸಿನಿಮಾ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್. ಈ ಚಿತ್ರಕ್ಕೀಗ ಆರ್.ಆರ್.ಆರ್. ಕಂಟಕವಾಗುತ್ತಿದೆಯಾ..?

  ಜೇಮ್ಸ್ ಚಿತ್ರ ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳಲ್ಲಿ ಆರ್.ಆರ್.ಆರ್. ಹಾಗೂ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಪ್ರದರ್ಶಿಸುವಂತೆ ಒತ್ತಡ ಶುರುವಾಗಿದೆಯಂತೆ. ಕಾಶ್ಮೀರ್ ಫೈಲ್ಸ್ ಹಾಕುವಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಶಾಸಕರು ಚಿತ್ರಮಂದಿರಗಳವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆರ್.ಆರ್.ಆರ್. ಬಿಡುಗಡೆಗೆ ಚಿತ್ರಮಂದಿರಗಳ ಮೇಲೆ ಬೇರೆಯದೇ ರೀತಿಯ ಒತ್ತಡವಿದೆ. ಇದನ್ನು ನಿಲ್ಲಿಸಬೇಕು. ಜೇಮ್ಸ್ ಚಿತ್ರಕ್ಕೆ ಸಹಕರಿಸಬೇಕು ಎಂದು ಆಗ್ರಹಿಸಿದ್ದಾರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ.

  ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಮಾಡಿರುವುದು ನಿಜ ಎಂದಿದ್ದಾರೆ ನಿರ್ಮಾಪಕ ಕಿಶೋರ್ ಪತ್ತಿಕೊಂಡ. ಜೇಮ್ಸ್ ಚಿತ್ರ ನೋಡಲು ಆಹ್ವಾನ ನೀಡೋಕೆ ಹೋಗಿದ್ದಾಗ ಈ ವಿಷಯ ಹೇಳಿದ್ದೆ. ಯಾರು ಒತ್ತಡ ಹೇರುತ್ತಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ ಕಿಶೋರ್.

  ನಿರ್ದೇಶಕ ಚೇತನ್ ಕುಮಾರ್ ಕೂಡಾ ಜೇಮ್ಸ್ ಚಿತ್ರವನ್ನು ಅಭಿಮಾನಿಗಳು ನೋಡಲು ಬಿಡಿ. ಚಿತ್ರವನ್ನು ಥಿಯೇಟರುಗಳಿಂದ ತೆಗೆಯಬೇಡಿ ಎಂದು ಮನವಿ ಮಾಡಿದ್ದಾರೆ.

 • ಜೇಮ್ಸ್ ಜೊತೆ ಜೊತೆಯಲಿ ವೇದ..?

  ಜೇಮ್ಸ್ ಜೊತೆ ಜೊತೆಯಲಿ ವೇದ..?

  ಮಾರ್ಚ್ 17ಕ್ಕೆ ಜೇಮ್ಸ್ ಚಿತ್ರ ರಿಲೀಸ್ ಆಗುತ್ತಿದೆ. ಕಿಶೋರ್ ಪತ್ತಿಕೊಂಡ ನಿರ್ಮಾಣದ ಚಿತ್ರ ಪುನೀತ್ ಹೀರೋ ಆಗಿ ನಟಿಸಿದ್ದ ಕೊನೆಯ ಸಿನಿಮಾ. ಹೀಗಾಗಿ ನಿರೀಕ್ಷೆಯೂ ಹೆಚ್ಚು. ಅಪ್ಪು ಪಾತ್ರಕ್ಕೆ ಡಬ್ ಮಾಡಿರುವುದು ಶಿವಣ್ಣ. ಮಾರ್ಚ್ 17ರಂದು ಅಪ್ಪು ಅಭಿಮಾನಿಗಳು ನಾಡ ಹಬ್ಬ ಮಾಡುತ್ತಿದ್ದಾರೆ. ಇದೆಲ್ಲದರ ಜೊತೆಗೆ ಆ ದಿನ ಇನ್ನೂ ಒಂದು ಹಬ್ಬವಿದೆ.

  ಮಾರ್ಚ್ 17ರಂದು ಜೇಮ್ಸ್ ಜೊತೆಯಲ್ಲಿ ವೇದ ಚಿತ್ರದ ಟೀಸರ್ ಕೂಡಾ ರಿಲೀಸ್ ಆಗುತ್ತಿದೆಯಂತೆ. ವೇದ ಶಿವಣ್ಣ ಇದೇ ಮೊದಲ ಬಾರಿಗೆ ನಿರ್ಮಾಪಕರಾಗಿರುವ ಸಿನಿಮಾ. ಹರ್ಷ ನಿರ್ದೇಶನದ ವೇದ ಚಿತ್ರ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರದ ಅದ್ದೂರಿ ಟೀಸರ್‍ವೊಂದು ಜೇಮ್ಸ್ ಜೊತೆ ರಿಲೀಸ್ ಆಗಲಿದೆ ಅನ್ನೋ ಸುದ್ದಿ ಇದೆ. ಅಧಿಕೃವಾಗಿಲ್ಲ.

 • ಜೇಮ್ಸ್ ಜೊತೆ ಬೈರಾಗಿ

  ಜೇಮ್ಸ್ ಜೊತೆ ಬೈರಾಗಿ

  ಜೇಮ್ಸ್ ನಾಳೆ ರಿಲೀಸ್. ಇದೇ ಮೊದಲ ಬಾರಿಗೆ ಅಪ್ಪು ಪಾತ್ರಕ್ಕೆ ಶಿವಣ್ಣ ಡಬ್ ಮಾಡಿದ್ದಾರೆ. ಇದರ ಜೊತೆ ಅಭಿಮಾನಿಗಳಿಗೆ ಇನ್ನೂ ಒಂದು ಥ್ರಿಲ್ ಇದೆ. ನಾಳೆ ಥಿಯೇಟರಿನಲ್ಲಿ ಜೇಮ್ಸ್ ಜೊತೆ ಶಿವಣ್ಣ ಅಭಿನಯದ ಬೈರಾಗಿ ಚಿತ್ರದ ಟೀಸರ್ ಕೂಡಾ ರಿಲೀಸ್ ಆಗುತ್ತಿದೆ.

  ವಿಜಯ್ ಮಿಲ್ಟನ್ ನಿರ್ದೇಶನದ ಚಿತ್ರ ಬೈರಾಗಿ. ಶಿವಣ್ಣರನ್ನು ಹುಲಿವೇಷದಲ್ಲಿ ತೋರಿಸಿ ವ್ಹಾವ್ ಎನಿಸಿಕೊಂಡಿತ್ತು ಬೈರಾಗಿ ಟೀಂ. ಶಿವಣ್ಣ ಜೊತೆ ಡಾಲಿ ಧನಂಜಯ್, ಪೃಥ್ವಿ ಅಂಬರ್, ಶಶಿಕುಮಾರ್ ಕೂಡಾ ನಟಿಸುತ್ತಿದ್ದು, ಅಂಜಲಿ ನಾಯಕಿ. ಕೃಷ್ಣ ಸಾರ್ಥಕ್ ನಿರ್ಮಾಣದ ಬೈರಾಗಿ, ಕಿಶೋರ್ ಪತ್ತಿಕೊಂಡ ನಿರ್ಮಾಣದ ಜೇಮ್ಸ್ ಚಿತ್ರದ ಜೊತೆ ಜೊತೆಯಲ್ಲೇ ಬರುತ್ತಿರೋದು ವಿಶೇಷ. 

 • ಜೇಮ್ಸ್ ಟಿವಿ ರೈಟ್ಸ್ 15 ಕೋಟಿಗೆ ಸೇಲ್?

  ಜೇಮ್ಸ್ ಟಿವಿ ರೈಟ್ಸ್ 15 ಕೋಟಿಗೆ ಸೇಲ್?

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತೊಮ್ಮೆ ತಮ್ಮ ಪವರ್ ತೋರಿಸಿದ್ದಾರೆ. ಯುವರತ್ನ ಚಿತ್ರ ರಿಲೀಸ್ ಆದ ಮೂರು ದಿನಕ್ಕೆ ಕೊರೊನಾ ನಿರ್ಬಂಧ ಎದುರಾದರೂ ಸಕ್ಸಸ್ ತೋರಿಸಿದ್ದರು ಅಪ್ಪು. ನಂತರ ಒಟಿಟಿಯಲ್ಲೂ ಮೋಡಿ ಮಾಡಿತ್ತು ಯುವರತ್ನ. ಈಗ ಜೇಮ್ಸ್‍ನಲ್ಲಿಯೂ ಅದು ಕಂಟಿನ್ಯೂ ಆಗಿದೆ.

  ಪುನೀತ್ ಮತ್ತು ಭರ್ಜರಿ ಚೇತನ್ ಕಾಂಬಿನೇಷನ್ನಿನ ಸಿನಿಮಾ ಜೇಮ್ಸ್. ಕಿಶೋರ್ ಪತ್ತಿಕೊಂಡ ನಿರ್ಮಾಣದ ಜೇಮ್ಸ್‍ನಲ್ಲಿ ಪ್ರಿಯಾ ಆನಂದ್, ಶರತ್ ಕುಮಾರ್, ತೆಲುಗಿನ ಶ್ರೀಕಾಂತ್, ಅನುಪ್ರಭಾಕರ್, ರಂಗಾಯಣ ರಘು, ಮುಖೇಶ್ ರಿಷಿ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಹೀಗಾಗಿಯೇ ಚಿತ್ರಕ್ಕೆ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿದೆ.

  ಮೂಲಗಳ ಪ್ರಕಾರ ಜೇಮ್ಸ್ ಚಿತ್ರದ ಟಿವಿ ರೈಟ್ಸ್ 15 ಕೋಟಿಗೆ ಮಾರಾಟವಾಗಿದೆ. ಇದೂ ಒಂದು ದಾಖಲೆ. ಸ್ಯಾಟಲೈಟ್ ರೈಟ್ಸ್‍ನ್ನು ಖರೀದಿಸಿರುವುದು ಸ್ಟಾರ್ ಸುವರ್ಣ ಚಾನೆಲ್ ಎಂಬ ಮಾಹಿತಿ ಇದೆ.

 • ಜೇಮ್ಸ್ ಡಬ್ಬಿಂಗ್ ಅನುಭವ ಹೇಳಿದ ಶಿವಣ್ಣ

  ಜೇಮ್ಸ್ ಡಬ್ಬಿಂಗ್ ಅನುಭವ ಹೇಳಿದ ಶಿವಣ್ಣ

  ಜೇಮ್ಸ್ ನಾಳೆ ರಿಲೀಸ್ ಆಗುತ್ತಿದೆ. ಇಂದು ಮಧ್ಯರಾತ್ರಿಯಿಂದಲೇ ಶೋಗಳು ಶುರುವಾಗಲಿವೆ. ಜೇಮ್ಸ್ ಶೂಟಿಂಗ್ ಆಲ್‍ಮೋಸ್ಟ್ ಮುಗಿದಿದ್ದ ಹೊತ್ತಿನಲ್ಲಿ ಅಪ್ಪು ಅಗಲಿದರು. ಅವರ ಪಾತ್ರಕ್ಕೆ ಡಬ್ ಮಾಡಿರೋದು ಶಿವಣ್ಣ. ಹೇಗಿತ್ತು ಆ ಅನುಭವ..?

  ಯಾವುದೇ ಕಲಾವಿದನಿಗೆ ಇನ್ನೊಬ್ಬ ಕಲಾವಿದನಿಗೆ ಡಬ್ ಮಾಡುವುದು ಸುಲಭವಲ್ಲ. ಅಂತಾದ್ದರಲ್ಲಿ ನಾನು ಡಬ್ ಮಾಡಿದ್ದು ಅಪ್ಪುಗೆ. ಅವನು ನನಗೆ ತಮ್ಮ. ಅವನನ್ನು ನೋಡಿಕೊಂಡು ಅವನ ತುಟಿ ಚಲನೆಗೆ ಹೊಂದಿಸಿಕೊಂಡು ಡಬ್ ಮಾಡುವುದು ಸುಲಭವಂತೂ ಆಗಿರಲಿಲ್ಲ. ಭಾವನೆಗಳನ್ನು ಕಂಟ್ರೋಲ್ ಮಾಡಿಕೊಂಡು ಡಬ್ ಮಾಡಬೇಕಿತ್ತು. ಅದೊಂದು ದೊಡ್ಡ ಚಾಲೆಂಜ್ ಎಂದಿದ್ದಾರೆ ಶಿವಣ್ಣ.

  ಇದರ ಜೊತೆಗೆ ಅಪ್ಪುಗೆ ವಿಶಿಷ್ಟವಾದ ಧ್ವನಿಯಿದೆ. ಅಪ್ಪು ಕೆಲವು ಪದಗಳನ್ನು ಹೇಳುವಾಗ ತಮ್ಮದೇ ಆದ ಸ್ಪೆಷಲ್ ಸ್ಟೈಲ್ ಫಾಲೋ ಮಾಡುತ್ತಿದ್ದ. ಅಣ್ಣನಾಗಿ ಅವೆಲ್ಲವನ್ನೂ ಕೇಳೋಕೆ ಚೆಂದವಿತ್ತು. ಅದನ್ನೇ ನಾನು ಡಬ್ ಮಾಡುವುದು ಸುಲಭವಂತೂ ಆಗಿರಲಿಲ್ಲ ಎಂದಿದ್ದಾರೆ ಶಿವಣ್ಣ.

  ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರ ತಂದೆ ನನ್ನ ಕಬೀರ ಚಿತ್ರಕ್ಕೆ ನಿರ್ಮಾಪಕರಾಗಿದ್ದರು. ನಿರ್ದೇಶಕ ಚೇತನ್ ನನಗೆ ಒಂದು ಜಾಹೀರಾತು ನಿರ್ದೇಶಿಸಿದ್ದಾರೆ. ಪರ್ಸನಲ್ ಆಗಿಯೂ ಪರಿಚಯ. ಪುನೀತ್‍ಗಾಗಿ ಈ ಚಿತ್ರಕ್ಕೆ ನನ್ನ ಸಂಪೂರ್ಣ ಬೆಂಬಲ ಕೊಟ್ಟಿದ್ದೇನೆ. ಅಲ್ಲದೆ ಚಿತ್ರದಲ್ಲಿ ರಾಘು ಜೊತೆ ಒಂದೂವರೆ ನಿಮಿಷದ ದೃಶ್ಯದಲ್ಲಿ ನಟಿಸಿಯೂ ಇದ್ದೇನೆ ಎಂದಿದ್ದಾರೆ ಶಿವಣ್ಣ.

 • ಜೇಮ್ಸ್ ನೋಡೋಕೆ ನನಗೆ ಸಾಧ್ಯವಿಲ್ಲ. ಒಳ್ಳೆಯದಾಗಲಿ : ಅಶ್ವಿನಿ ಪುನೀತ್ ರಾಜಕುಮಾರ್

  ಜೇಮ್ಸ್ ನೋಡೋಕೆ ನನಗೆ ಸಾಧ್ಯವಿಲ್ಲ. ಒಳ್ಳೆಯದಾಗಲಿ : ಅಶ್ವಿನಿ ಪುನೀತ್ ರಾಜಕುಮಾರ್

  ಪುನೀತ್ ರಾಜಕುಮಾರ್ ರಾಜ್ಯದ ಲಕ್ಷಾಂತರ ಅಭಿಮಾನಿಗಳ ಪಾಲಿಗೆ ಪ್ರೀತಿಯ ನಟ. ಆದರೆ ಅವರ ಕುಟುಂಬದವರಿಗೆ ಪುನೀತ್ ಬೇರೆಯೇ. ಅಭಿಮಾನಿಗಳೇ ಇನ್ನೂ ದುಃಖದಿಂದ ಹೊರಬರದಿರುವಾಗ, ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ಇದನ್ನು ನಿರೀಕ್ಷಿಸಲಾಗದು. ಹಾಗೆ ನೋಡಿದರೆ ಅತ್ಯಂತ ಸಂಯಮ ಪಾಲಿಸುತ್ತಿರುವ ಅಶ್ವಿನಿ ಹೊರಗೆ ಎಲ್ಲಿಯೂ ತಮ್ಮ ದುಃಖ ತೋಡಿಕೊಳ್ಳುತ್ತಿಲ್ಲ.

  ಅಪ್ಪು ಅವರನ್ನು ಮರೆಯಲು ಆಗುತ್ತಿಲ್ಲ. ಅವರು ಹೋದ ನಂತರ ನಮ್ಮ ದುಃಖದಲ್ಲಿ ಇಡೀ ಕರುನಾಡು ನಿಂತಿತ್ತು. ಅವರ ಅಭಿಮಾನಿಗಳದ್ದಂತೂ ಮೇರೆ ಮೀರಿದ ಅಭಿಮಾನ. ಅವರು ನಡೆಸಿದ ರಕ್ತದಾನ, ಅನ್ನದಾನ, ನೇತ್ರದಾನ.. ಒಂದಾ ಎರಡಾ.. ನನಗೆ ಮಾತೇ ಬರುತ್ತಿಲ್ಲ. ಮನಸ್ಸು ತುಂಬಿ ಬಂದಿದೆ. ಅವರಿಗೆಲ್ಲ ನಾನು ಕೃತಜ್ಞಳಾಗಿದ್ದೇನೆ. ಅವರ ಅಗಲಿಕೆಯ ದುಃಖದಿಂದ ನಾನಿನ್ನೂ ಹೊರಬಂದಿಲ್ಲ. ಹಾಗಾಗಿ ಯಾವುದೇ ಸಂಭ್ರಮ ಸ್ವೀಕರಿಸುತ್ತಿಲ್ಲ. ನನಗೆ ಚಿತ್ರರಂಗ ಹೊಸದಲ್ಲ. ಅವರು ಹಾಕಿಕೊಟ್ಟ ಹೆಜ್ಜೆಯಲ್ಲಿ ಮುನ್ನಡೆಯುತ್ತೇನೆ. ಹೊಸಬರಿಗೆ ಅವಕಾಶ ನೀಡುತ್ತೇವೆ. ಅಪ್ಪು ಕನಸನ್ನು ಈಡೇರಿಸುತ್ತೇವೆ.

  ಜೇಮ್ಸ್ ಚಿತ್ರ ಚೆನ್ನಾಗಿ ಬಂದಿದೆ ಎಂದು ಎಲ್ಲರೂ ಹೇಳಿದ್ದಾರೆ. ನಾನು ನೋಡಿಲ್ಲ. ಮಕ್ಕಳೂ ಸೇರಿದಂತೆ ನಮ್ಮ ಕುಟುಂಬದವರೆಲ್ಲ ಚಿತ್ರ ನೋಡುತ್ತಾರೆ. ನನಗೆ ನೋಡಲು ಆಗುತ್ತಿಲ್ಲ. ಅಭಿಮಾನಿಗಳಿಗೆ ಒಳ್ಳೆಯದಾಗಲಿ, ಚಿತ್ರತಂಡಕ್ಕೆ ಒಳ್ಳೆಯದಾಗಲಿ. ಅಪ್ಪು ಹಾರೈಕೆ ನಮ್ಮೆಲ್ಲರ ಮೇಲಿರಲಿ ಎಂದಿದ್ದಾರೆ ಅಶ್ವಿನಿ ಪುನೀತ್ ರಾಜಕುಮಾರ್.

 • ಜೇಮ್ಸ್ ಪ್ರಮೋಷನ್ ಶುರು ಮಾಡಿದ ಚಿತ್ರರಂಗ..! - ಟ್ರೇಡ್‍ಮಾರ್ಕ್ ಸ್ಪೆಷಲ್

  ಜೇಮ್ಸ್ ಪ್ರಮೋಷನ್ ಶುರು ಮಾಡಿದ ಚಿತ್ರರಂಗ..! - ಟ್ರೇಡ್‍ಮಾರ್ಕ್ ಸ್ಪೆಷಲ್

  ಚಿತ್ರರಂಗದ ಯಾರದ್ದೇ ಸಿನಿಮಾ ಆಗಿರಲಿ.. ಪ್ರಚಾರ ಮಾಡೋಕೆ ಕರೆದರೆ ಉತ್ಸಾಹದಿಂದ ಬರುತ್ತಿದ್ದ ಪುನೀತ್ ಅವರ ಜೇಮ್ಸ್ ಚಿತ್ರ ಈಗ ಬಿಡುಗಡೆಗೆ ಸಿದ್ಧವಾಗಿದೆ. ಅವರೇ ಇಲ್ಲ. ಇಡೀ ಚಿತ್ರರಂಗಕ್ಕೆ ಅಪ್ಪು ಆಗಿದ್ದ ಅವರ ಚಿತ್ರದ ಪ್ರಚಾರಕ್ಕೆ ಇಡೀ ಚಿತ್ರರಂಗವೇ ಟೊಂಕ ಕಟ್ಟಿ ನಿಂತಿದೆ.

  ಚಿತ್ರದ ಪ್ರಚಾರಕ್ಕಾಗಿಯೇ ಒಂದು ಹಾಡನ್ನು ಮಾಡಲಾಗಿದೆ. ಅದೇ ಟ್ರೇಡ್‍ಮಾರ್ಕ್ ಸಾಂಗ್. ಈ ಹಾಡಿನಲ್ಲಿ ಚಂದನ್ ಶೆಟ್ಟಿ, ಎಂಸಿ ವಿಕ್ಕಿ, ಅದಿತಿ ಸಾಗರ್, ಶರ್ಮಿಳಾ, ಚರಣ್ ರಾಜ್ ಮತ್ತು ಯುವ ರಾಜ್‍ಕುಮಾರ್ ಹಾಡಿದ್ದಾರೆ. ಇನ್ನು ಹಾಡಿನಲ್ಲಿ ಹೆಜ್ಜೆ ಹಾಕಿರೋದು ರಚಿತಾ ರಾಮ್, ಅಶಿಕಾ ರಂಗನಾಥ್ ಮತ್ತು ಶ್ರೀಲೀಲಾ. ಇವರ ಜೊತೆ ಸಂಗೀತ ನಿರ್ದೇಶಕ ಚರಣ್ ರಾಜ್ ಮತ್ತು ಚಂದನ್ ಶೆಟ್ಟಿ ಕೂಡಾ ಹೆಜ್ಜೆ ಹಾಕಿರೋದು ವಿಶೇಷ. ರ್ಯಾಪ್ ಸ್ಟೈಲ್‍ನಲ್ಲಿರೋ ಹಾಡಿಗೆ ಸಾಹಿತ್ಯ ನಿರ್ದೇಶಕ ಚೇತನ್ ಕುಮಾರ್ ಅವರದ್ದು.

  ಮಾರ್ಚ್ 17ರಂದು ಜೇಮ್ಸ್ ರಿಲೀಸ್ ಆಗುತ್ತಿದ್ದು, ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅದ್ಧೂರಿ ಬಿಡುಗಡೆಗೆ ಪ್ಲಾನ್ ಮಾಡುತ್ತಿದ್ದಾರೆ.

 • ಜೇಮ್ಸ್ ಫಸ್ಟ್ ಶೆಡ್ಯೂಲ್ ಕಂಪ್ಲೀಟ್

  james first schedule complete

  ಪುನೀತ್ ರಾಜ್‍ಕುಮಾರ್ ಬಿಡುವಿಲ್ಲದೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದೆಡೆ ಯುವರತ್ನ, ಮತ್ತೊಂದೆಡೆ ಜೇಮ್ಸ್ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಪುನೀತ್, ಜೇಮ್ಸ್ ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿಸಿದ್ದಾರೆ.

  ಮೊದಲ ಹಂತದಲ್ಲಿ ಭರ್ಜರಿ ಫೈಟಿಂಗ್ ಸೀನ್‍ಗಳನ್ನು ಶೂಟ್ ಮಾಡಲಾಗಿದ್ದು, ರವಿವರ್ಮ ಡೈರೆಕ್ಷನ್‍ನಲ್ಲಿ ಸಾಹಸ ದೃಶ್ಯಗಳು ಸಖತ್ತಾಗಿ ಬಂದಿವೆಯಂತೆ. ಬಹದ್ದೂರ್ ಚೇತನ್ ನಿರ್ದೇಶನದ ಜೇಮ್ಸ್ ಚಿತ್ರದ 2ನೇ ಶೆಡ್ಯೂಲ್, ಅಪ್ಪು ಹುಟ್ಟುಹಬ್ಬದ ನಂತರ ಶುರುವಾಗಲಿದೆ.

 • ಜೇಮ್ಸ್ ಮುಹೂರ್ತ ಫಿಕ್ಸ್ ಆಯ್ತಾ..?

  james muhurtha soon

  ಯುವರತ್ನ ಚಿತ್ರದಲ್ಲಿ ಬ್ಯುಸಿಯಾಗಿರುವ ಪುನೀತ್ ರಾಜ್ಕುಮಾರ್, ಜೇಮ್ಸ್ ಚಿತ್ರದ ಚಿತ್ರೀಕರಣಕ್ಕೆ ರೆಡಿಯಾದ್ರಾ..? ಹೌದು ಎನ್ನುತ್ತಿದೆ ಗಾಂಧಿನಗರ. ಜನವರಿ 19ಕ್ಕೆ ಜೇಮ್ಸ್ ಚಿತ್ರದ ಶೂಟಿಂಗ್ ಶುರುವಾಗಲಿದೆಯಂತೆ.

  ಭರ್ಜರಿ ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಚಿತ್ರದ ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಆಗಿದ್ದು, ಯುವರತ್ನ ಶೂಟಿಂಗ್ ಮುಗಿಯುವುದನ್ನೇ ಕಾಯುತ್ತಿದ್ದಾರೆ ಚೇತನ್. ಯುವರತ್ನ ಶೂಟಿಂಗ್ ಕೂಡಾ ಅಂತಿಮ ಹಂತದಲ್ಲಿದೆ. ಹೀಗಾಗಿಯೇ ಆ ಚಿತ್ರದ ಶೂಟಿಂಗ್ ಮುಗಿಯುತ್ತಿದ್ದಂತೆ ಜೇಮ್ಸ್ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ ಪುನೀತ್.

  ಸಂತೋಷ್ ಆನಂದ್ ರಾಮ್, ಹೊಂಬಾಳೆ ಪ್ರೊಡಕ್ಷನ್ಸ್, ವಿಜಯ್ ಕಿರಗಂದೂರು ಕಾಂಬಿನೇಷನ್ನಿನ ಯುವರತ್ನ ಕ್ರೇಜ್ ನಡುವೆಯೇ ಜೇಮ್ಸ್ ಅವತಾರ ಎತ್ತಲಿದ್ದಾರೆ ಪುನೀತ್. ಜೇಮ್ಸ್ ಚಿತ್ರಕ್ಕೆ ಕಿಶೋರ್ ಪತಿಕೊಂಡ ನಿರ್ಮಾಪಕ.

 • ಜೇಮ್ಸ್ ಯಶಸ್ಸಿಗೆ ಅಪ್ಪುಗೆ ಅಭಿಮಾನಿಗಳ ಪ್ರಾರ್ಥನೆ

  ಜೇಮ್ಸ್ ಯಶಸ್ಸಿಗೆ ಅಪ್ಪುಗೆ ಅಭಿಮಾನಿಗಳ ಪ್ರಾರ್ಥನೆ

  ಜೇಮ್ಸ್ ಚಿತ್ರದ ಟ್ರೇಲರ್ ರಿಲೀಸ್ ಟೈಂನಲ್ಲೇ ಅಭಿಮಾನಿಗಳು ಚಿತ್ರದ ಯಶಸ್ಸಿಗೆ ಪ್ರಾರ್ಥಿಸಿ ಹಂಪಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಂದಹಾಗೆ ಈ ಪೂಜೆ ಪ್ರಾರ್ಥನೆ ನಡೆದಿರುವುದು ಅಪ್ಪು ಫೋಟೋಗೆ ಎನ್ನುವುದೇ ವಿಶೇಷ.

  ಹಂಪಿ ರಥಬೀದಿಯಲ್ಲಿ ಬೃಹತ್ ಫ್ಲೆಕ್ಸ್ ಹಾಕಿಸಿ, ಹೂಮಾಲೆ ಹಾಕಿ, 51 ತೆಂಗಿನ ಕಾಯಿ ಒಡೆದು ಹಾಲಿನ ಅಭಿಷೇಕ ಮಾಡಿದ್ದಾರೆ ಫ್ಯಾನ್ಸ್. ಅಪ್ಪು ಚಿತ್ರದ ಟೀಸರ್ ಮತ್ತು ಸಿನಿಮಾ ಎರಡೂ ಯಶಸ್ಸು ಕಾಣಲಿ ಎನ್ನುವುದೇ ನಮ್ಮ ಪ್ರಾರ್ಥನೆ ಎನ್ನವುದು ಅಪ್ಪು ಅಭಿಮಾನಿ ಬಳಗದ ಸದಸ್ಯರ ಮಾತು..