ಹರ್ಷ. ಚಿತ್ರರಂಗಕ್ಕೆ ಬಂದಿದ್ದು ಡ್ಯಾನ್ಸ್ ಮಾಸ್ಟರ್ ಆಗಿ. ರಂಗ ಎಸ್‍ಎಸ್‍ಎಲ್‍ಸಿ ಚಿತ್ರದ ಮೂಲಕ ಕೊರಿಯೋಗ್ರಾಫರ್ ಆದ ಹರ್ಷ, ನಂತರ ಮುಂಗಾರು ಮಳೆ, ಮೊಗ್ಗಿನ ಮನಸು, ವಿಷ್ಣುವರ್ಧನ..ದಂತಹ ಚಿತ್ರಗಳಿಗೆ ಕೊರಿಯೋಗ್ರಫಿ ಮೂಲಕ ಗಮನ ಸೆಳೆದರು. ಕಾಶಿ ಫ್ರಮ್ ವಿಲೇಜ್ ಚಿತ್ರದಲ್ಲಿ ಸುದೀಪ್ ತಮ್ಮನಾಗಿಯೂ ನಟಿಸಿದ್ದಾರೆ. ಆದರೆ ಡೈರೆಕ್ಷನ್‍ನತ್ತ ಒಲವು. ಹೀಗಾಗಿಯೇ ಗೆಳೆಯ ಚಿತ್ರದ ಮೂಲಕ ಡೈರೆಕ್ಟರ್ ಆದ ಹರ್ಷ ನಂತರ ಪ್ರತಿ ಚಿತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.
ಚಿಂಗಾರಿ, ಭಜರಂಗಿ, ಭಜರಂಗಿ 2, ವಜ್ರಕಾಯ, ಮಾರುತಿ 800, ಅಂಜನಿಪುತ್ರ ಸೀತಾರಾಮ ಕಲ್ಯಾಣ ಹೀಗೆ ಹಿಟ್ ಮೇಲೆ ಹಿಟ್ ಹರ್ಷ ಇತ್ತೀಚೆಗೆ ವೇದ ಚಿತ್ರದ ಮೂಲಕ ತೆಲುಗಿನಲ್ಲೂ ಸೌಂಡು ಮಾಡಿದರು. ಅದರಲ್ಲೂ ವೇದ ಚಿತ್ರ ಶಿವಣ್ಣ ಅಭಿನಯದ 125ನೇ ಸಿನಿಮಾ. ಶಿವಣ್ಣ ಜೊತೆ ಇತ್ತೀಚಿನ ನಿರ್ದೇಶಕರಲ್ಲಿ 4 ಸಿನಿಮಾ ಮಾಡಿರುವ ಡೈರೆಕ್ಟರ್ ಹರ್ಷ. ವೇದ ಚಿತ್ರದ ಇಂಪ್ಯಾಕ್ಟ್ ಈಗ ಹರ್ಷ ಅವರಿಗೆ ತೆಲುಗು ಫಿಲ್ಮ್ ಇಂಡಸ್ಟ್ರಿ ಕೈಬೀಸಿ ಕರೆದಿದೆ.
ತೆಲುಗಿನಲ್ಲಿ ಗೋಪಿಚಂದ್ ಅವರಿಗೆ ಹರ್ಷ ಡೈರೆಕ್ಷನ್ ಮಾಡಲಿದ್ದಾರಂತೆ. ಜಯಂ, ನಿಜಂ, ವರ್ಷಂ ಚಿತ್ರದಲ್ಲಿ ವಿಲನ್ ಆಗಿ ಮಿಂಚು ಹರಿಸಿದ್ದ ಗೋಪಿಚಂದ್, ನಂತರ ಹೀರೋ ಆಗಿಯೂ ಗೆದ್ದವರು. ಆದರೆ ಇತ್ತೀಚೆಗೆ ಸತತ ಸೋಲುಗಳಲ್ಲಿ ಸಿಲುಕಿರುವ ಗೋಪಿಚಂದ್, ಹರ್ಷ ಅವರಿಗೆ ಡೈರೆಕ್ಷನ್ ಹೊಣೆ ಒಪ್ಪಿಸಿದ್ದಾರೆ ಎಂಬ ಮಾಹಿತಿ ಇದೆ. ಈ ಚಿತ್ರಕ್ಕೆ ರಾಧಾ ಮೋಹನ್ ಎಂಬುವವರು ನಿರ್ಮಾಪಕರಾಗಿದ್ದಾರೆ. ಎಲ್ಲವೂ ವೇದ ಮಹಿಮೆ.