ಮಂಡ್ಯದಿಂದ ಚುನಾವಣಾ ಅಖಾಡಕ್ಕಿಳಿಯುತ್ತಿರುವ ಸುಮಲತಾ ಪರ ಬಹುತೇಕ ಚಿತ್ರರಂಗದ ಸ್ಟಾರ್ ನಟರು ಒಗ್ಗೂಡುತ್ತಿದ್ದಾರೆ. ಕೆಲವರು ಹೋಗಲಾಗದೇ ಇದ್ದರೂ, ಬೆಂಬಲ ನೀಡುತ್ತಿದ್ದಾರೆ. ಹೀಗಿರುವಾಗಲೇ, ಸುಮಲತಾ ಪರ ಪ್ರಚಾರಕ್ಕೆ ಹೋದವರಿಗೆ ಗ್ರಹಚಾರ ಕೆಡುತ್ತಾ..? ಅಂಥಾದ್ದೊಂದು ಅನುಮಾನ ಮೂಡಿಸಿರುವುದು ಜೆಡಿಎಸ್ ಶಾಸಕ ಕೆ.ಸಿ. ನಾರಾಯಣ ಗೌಡ ಹೇಳಿಕೆ.
ಸುಮ್ಮನೆ ದೇವೇಗೌಡ, ಕುಮಾರಸ್ವಾಮಿ ಬಗ್ಗೆ ಮಾತನಾಡಬೇಡಿ. ನಿಮ್ಮ ಪಾಡಿಗೆ ನೀವು ಶೂಟಿಂಗ್ ಮಾಡಿಕೊಂಡಿರಿ. ನಿಮಗೂ ರಾಜಕಾರಣಕ್ಕೂ ಸಂಬಂಧ ಇಲ್ಲ. ಗೌರವದಿಂದ ಮನೆಯಲ್ಲಿರಿ. ಇಲ್ಲದೇ ಹೋದರೆ, ನಿಮ್ಮ ಆಸ್ತಿಪಾಸ್ತಿ ತನಿಖೆ ಮಾಡಿಸಬೇಕಾಗಬಹುದು. ಸರ್ಕಾರ ನಮ್ಮದಿದೆ ಎಂದಿದ್ದಾರೆ ನಾರಾಯಣ ಗೌಡ.
ಸಿನಿಮಾ ನಟರು ಒಬ್ಬ ವ್ಯಕ್ತಿಯ ಪರ ಪ್ರಚಾರಕ್ಕೆ ಬಂದ್ರೆ ಹುಷಾರ್. ಪರಿಣಾಮ ನೆಟ್ಟಗಿರಲ್ಲ ಎಂದಿದ್ದಾರೆ ನಾರಾಯಣ ಗೌಡ. ಈ ಹಿಂದೆ ಸಚಿವ ಡಿ.ಸಿ.ತಮ್ಮಣ್ಣ, ಎಚ್.ಡಿ.ರೇವಣ್ಣ, ಶಾಸಕ ಕೆ.ಟಿ.ಶ್ರೀಕಂಠೇಗೌಡ ಸುಮಲತಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈಗ ಜೆಡಿಎಸ್ ಶಾಸಕ ಚಿತ್ರರಂಗದವರಿಗೆ ಬೆದರಿಕೆ ಹಾಕುವ ಮಟ್ಟಕ್ಕೆ ಬಂದಿದ್ದಾರೆ.
ಹಾಗಾದರೆ, ಸುಮಲತಾ ಪರ ಬಹಿರಂಗವಾಗಿ ಬೆಂಬಲ ಘೋಷಿಸಿರುವ ದರ್ಶನ್, ಯಶ್, ರಾಕ್‍ಲೈನ್ ವೆಂಕಟೇಶ್, ದೊಡ್ಡಣ್ಣ, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್ ಹಾಗೂ ಶುಭ ಹಾರೈಸಿರುವ ಕಿಚ್ಚ ಸುದೀಪ್, ಶಿವರಾಜ್‍ಕುಮಾರ್, ಜೋಗಿ ಪ್ರೇಮ್ ಸೇರಿದಂತೆ ಚಿತ್ರರಂಗದ ಬಹುತೇಕರ ಮೇಲೆ ಸರ್ಕಾರ ಕೆಂಗಣ್ಣು ಬೀರುತ್ತಾ..? ನೋಡಬೇಕಷ್ಟೆ.