ದುನಿಯಾ ವಿಜಯ್ ಅವರ ಮನೆಯಲ್ಲಿನ ಕೌಟುಂಬಿಕ ಕಲಹಗಳು, ಹೆಚ್ಚಾದ ಬಜೆಟ್‍ಗಳಿಂದಾಗಿ ದುನಿಯಾ ವಿಜಯ್ ಕುಸ್ತಿ ಚಿತ್ರವನ್ನು ಕೈಬಿಡಲಾಗಿದೆ ಎಂಬ ಸುದ್ದಿಗೆ ನಿರ್ದೇಶಕ ಚೂರಿಕಟ್ಟೆ ರಾಘು ಸ್ಪಷ್ಟನೆ ನೀಡಿದ್ದಾರೆ.
ಕುಸ್ತಿ ಸಿನಿಮಾ ಕೈಬಿಟ್ಟಿಲ್ಲ. ಆದರೆ, ಚಿತ್ರ ಮುಂದಕ್ಕೆ ಹೋಗಿರುವುದು ನಿಜ. ಅದಕ್ಕೆ ಕಾರಣ ಬಜೆಟ್ ಅಲ್ಲ..ತಯಾರಿ. ದುನಿಯಾ ವಿಜಯ್ ಅವರ ಕುಟುಂಬದಲ್ಲಿನ ಕಲಹಗಳಿಂದಾಗಿ ದುನಿಯಾ ವಿಜಿ ಕುಸ್ತಿಯ ತರಬೇತಿಯಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಈ ಗ್ಯಾಪ್‍ನಿಂದಾಗಿ ಇಷ್ಟು ದಿನದ ಅವರ ತಯಾರಿ ಕೈಕೊಟ್ಟಿತು. ಹೀಗಾಗಿ ಅವರು ಮತ್ತೊಮ್ಮೆ ತಮ್ಮ ತಯಾರಿಯನ್ನು ಓಂನಿಂದ ಶುರುಮಾಡಬೇಕು. ಅದಕ್ಕೆ ಕನಿಷ್ಟ 6 ತಿಂಗಳು ಬೇಕು. ನಂತರ ಕುಸ್ತಿ ಶುರುವಾಗಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಚೂರಿಕಟ್ಟೆ ಚಿತ್ರದಿಂದ ಪ್ರತಿಭಾವಂತ ನಿರ್ದೇಶಕ ಎಂದು ಹೆಸರು ಗಳಿಸಿರುವ ಶಿವಮೊಗ್ಗ ರಾಘವೇಂದ್ರ, ಕುಸ್ತಿಗೂ ಮುನ್ನ ಇನ್ನೊಂದು ಚಿತ್ರ ಕೈಗೆತ್ತಿಕೊಳ್ಳಲಿದ್ದಾರಂತೆ. ಈ ಕುರಿತು ಚಿತ್ರಲೋಕಕ್ಕೆ ಹೇಳಿಕೆ ನೀಡಿರುವ ರಾಘು, ಕುಸ್ತಿ ತಯಾರಿಯ ಮಧ್ಯೆಯೇ ಹೊಸ ಚಿತ್ರಕ್ಕೆ ಸ್ಕ್ರಿಪ್ಟ್ ಕೆಲಸ ಶುರುವಾಗಿದೆ. ದುನಿಯಾ ವಿಜಯ್ ಅವರೇ ಆ ಚಿತ್ರವನ್ನೂ ನಿರ್ಮಿಸಲಿದ್ದಾರೆ ಎಂದು ಹೇಳಿದ್ದಾರೆ.
ದುನಿಯಾ ವಿಜಯ್ ಕುಸ್ತಿ ಸಿನಿಮಾ ಮಾಡುವುದು ನಿಜ. ಆದರೆ, ಅದು ಶುರುವಾಗುವುದು 6 ತಿಂಗಳ ನಂತರ. ಏಕೆಂದರೆ, ದುನಿಯಾ ವಿಜಯ್ ಈಗ ತಮ್ಮ ಕುಸ್ತಿಯನ್ನು ಮತ್ತೆ ಆರಂಭದಿಂದ ಶುರು ಮಾಡಬೇಕು. ದೇಹವನ್ನು ಮತ್ತೆ ಕುಸ್ತಿ ಪೈಲ್ವಾನ್‍ಗೆ ತಕ್ಕಂತೆ ಹುರಿಗೊಳಿಸಬೇಕು. ಅದಕ್ಕೆ 6 ತಿಂಗಳು ಸಮಯ ಬೇಕೇಬೇಕು.