ರಿಯಲ್ ಸ್ಟಾರ್ ಉಪೇಂದ್ರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ) ಹೆಸರಿನ ಹೊಸ ರಾಜಕೀಯ ಘೋಷಿಸಿದ್ದಾರೆ. ಪ್ರಜಾಕೀಯ ಹೆಸರಿನಲ್ಲಿ ಅಭಿಯಾನ ಆರಂಭಿಸಿದ್ದ ಉಪೇಂದ್ರ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿಯಲಿದ್ದಾರೆ. ಪತ್ರಕರ್ತರಿಂದಲೇ ಪಕ್ಷದ ಅಧಿಕೃತ ಘೋಷಣೆ ಮಾಡಿಸಿರುವ ಉಪೇಂದ್ರ `ನಾವು ಈಗಾಗಲೇ ಗೆದ್ದಿದ್ದೇವೆ, ನಮ್ಮನ್ನು ಪ್ರೋತ್ಸಾಹಿಸಿ ಗೆಲ್ಲಬೇಕಾದವರು ನೀವು' ಎಂದಿದ್ದಾರೆ. ಅದು ಎಂದಿನ ಉಪ್ಪಿ ಸ್ಟೈಲ್.
ಕಾರ್ಯಕ್ರಮಕ್ಕೆ ಉಪ್ಪಿ ಅಷ್ಟೇ ಅಲ್ಲ, ಅವರ ಕುಟುಂಬದವರು ಹಾಗೂ ಅಭಿಮಾನಿಗಳೂ ಖಾಕಿಧಾರಿಗಳಾಗಿ ಬಂದಿದ್ದರು. ಪ್ರಜಾಕೀಯ ಹೆಸರಿನ ವೆಬ್‍ಸೈಟ್‍ನ್ನೂ ಆರಂಭಿಸಿದರು. ಆದರೆ, ಇದೆಲ್ಲದರ ಮಧ್ಯೆ ಅವರು ಹೇಳಿದ್ದ ಒಂದು ಮಾತು ವಿವಾದ ಸೃಷ್ಟಿಸಿದೆ.
ದೇಶದಲ್ಲಿ ನಗರಗಳಿಗಿಂತ ಮೊದಲು ಹಳ್ಳಿಗಳು ಸ್ಮಾರ್ಟ್ ಆಗಬೇಕು. ನರೇಂದ್ರ ಮೋದಿ ನಗರಗಳನ್ನು ಸ್ಮಾರ್ಟ್ ಮಾಡಲು ಹೊರಟಿದ್ದಾರೆ. ಆದರೆ, ದೇಶ ಅಭಿವೃದ್ಧಿಯಾಗಬೇಕೆಂದರೆ, ಹಳ್ಳಿಗಳು ಸ್ಮಾರ್ಟ್ ಆದರೆ ಮಾತ್ರ ಸಾಧ್ಯ ಎಂದಿದ್ದಾರೆ. ಇದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರನ್ನು ಕೆರಳಿಸಿದೆ.
ಉಪೇಂದ್ರ ತಮಗೆ ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಕೇಸ್ ಹಾಕುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಶೋಭಾ.