` s janaki, - chitraloka.com | Kannada Movie News, Reviews | Image

s janaki,

  • ಗಾಂಧಿನಗರವನ್ನು ರಾತ್ರಿಯೆಲ್ಲ ತಲ್ಲಣಗೊಳಿಸಿದ್ದು ಎಸ್.ಜಾನಕಿಯವರ ಈ ಸುದ್ದಿ

    rumors regarding s janaki;s health

    ಎಸ್.ಜಾನಕಿ, ಗಾನಕೋಗಿಲೆ.. ಕನ್ನಡಿಗರು ಹಾಗೂ ಕಿರಿಯ ಗಾಯಕರ ಪಾಲಿಗೆ ಜಾನಕಮ್ಮ. ತೆಲುಗಿನವರಾದರೂ ಕನ್ನಡಿಗರ ಹೃದಯದಲ್ಲಿ ಕನ್ನಡತಿಯೇ ಆಗಿರುವ ಎಸ್.ಜಾನಕಿ ನಿಧನರಾಗಿದ್ದಾರೆ ಎಂಬ ಸುದ್ದಿ ರಾತ್ರಿಯೆಲ್ಲ ಗಾಂಧಿನಗರವನ್ನು ತಲ್ಲಣಗೊಳಿಸಿತ್ತು. ಹೌದಾ.. ನಿಜಾನಾ.. ಎಂದು ಜಾನಕಿಯವರ ಕುಟುಂಬಕ್ಕೆ ಹತ್ತಿರದಲ್ಲಿರುವರಿಗೆ ಫೋನ್ ಕರೆಗಳು ಶುರುವಾದವು.

    ಕೊನೆಗೆ ಜಾನಕಿಯವರ ಪುತ್ರ ಮುರಳಿ ಕೃಷ್ಣ, ಅಮ್ಮ ಆರೋಗ್ಯವಾಗಿದ್ದಾರೆ. ಯಾವುದೇ ತೊಂದರೆ ಇಲ್ಲ. ಇತ್ತೀಚೆಗೆ ಸಣ್ಣದೊಂದು ಸರ್ಜರಿ ಮಾಡಿಸಿದ್ದೇವೆ. ಅವರು ಅದರಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟನೆ ಕೊಟ್ಟರು.

    ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕೂಡಾ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ `ಈಗ ತಾನೇ ಜಾನಕಿ ಅಮ್ಮನ ಜೊತೆ ಮಾತನಾಡಿದೆ. ಅವರು ಆರೋಗ್ಯವಾಗಿದ್ದಾರೆ. ಸರ್ಜರಿಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ದಯವಿಟ್ಟು ಸುಮ್ಮನಿರಿ. ಗಾಳಿಸುದ್ದಿ ಹಬ್ಬಿಸಬೇಡಿ. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ' ಎಂದು ಭಾವುಕವಾಗಿಯೇ ಕೇಳಿಕೊಂಡರು.

    ಹೌದು, ಜಾನಕಿ ಅಮ್ಮ ಆರೋಗ್ಯವಾಗಿದ್ದಾರೆ. ಆಗಿರೋದು ಪುಟ್ಟದೊಂದು ಸರ್ಜರಿ. ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಬೇಗ ಸಂಪೂರ್ಣ ಗುಣಮುಖರಾಗಲಿ..

  • 6 ದಶಕಗಳ ಹಾಡು ಕೋಗಿಲೆ ಹಾಡು ನಿಲ್ಲಿಸಿದಾಗ..

    s janaki signing career ends

    ಎಸ್.ಜಾನಕಿ 6 ದಶಕಗಳ ತಮ್ಮ ವೃತ್ತಿಪರ ಗಾಯನ ಬದುಕಿಗೆ ವಿದಾಯ ಹೇಳಿದ್ದಾರೆ. ಇನ್ನು ಮುಂದೆ ಅವರು ಹಾಡುವುದಿಲ್ಲ. ಮೈಸೂರಿನ ಮಾನಸ ಗಂಗೋತ್ರಿ ರಂಗಮಂದಿರದಲ್ಲಿ ತಮ್ಮ ಕಂಠಸಿರಿಯಲ್ಲಿ ಹಲವು ಕನ್ನಡ ಗೀತೆಗಳನ್ನು ಹಾಡಿದ ಜಾನಕಿ, ವೃತ್ತಿ ಬದುಕಿಗೆ ವಿದಾಯ ಘೋಷಿಸಿದರು. ಕಿಕ್ಕಿರಿದು ಸೇರಿದ್ದ ಸಾವಿರಾರು ಅಭಿಮಾನಿಗಳು ಭಾವಪರವಶರಾಗಿಯೇ ಜಾನಕಿಯವರ ಕೊನೆಯ ಹಾಡುಗಳಿಗೆ ಸಾಕ್ಷಿಯಾದರು. ಸಂಭ್ರಮಿಸಿದರು.

    ಪೂಜಿಸಲೆಂದೆ.. ಹೂಗಳ ತಂದೆ.., ಇಂದು ಎನಗೆ ಗೋವಿಂದ.., ಆಸೆಯ ಭಾವ ಒಲವಿನ ಜೀವ.., ಕಂಗಳು ವಂದನೆ ಹೇಳಿವೆ.., ನೀ ಯಾರೋ ಏನೋ ಸಖಾ.., ಹೀಗೆ ಜಾನಕಿ ಒಂದೊಂದು ಹಾಡು ಹಾಡಿದಾಗಲೂ ಕರತಾಡನ ಮುಗಿಲುಮುಟ್ಟುತ್ತಿತ್ತು. ಶಿಳ್ಳೆ, ಚಪ್ಪಾಳೆಗಳು ರಂಗಮಂದಿರದಲ್ಲಿ ಮಾರ್ದನಿಸುತ್ತಿದ್ದವು. ಹಾಗೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಹಾಡುವ ಕೋಗಿಲೆ ಹಾಡು ನಿಲ್ಲಿಸಿತು.

    ರಾಜಮಾತೆ ಪ್ರಮೋದಾದೇವಿ ಒಡೆಯರ್ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಭಾರತಿ ವಿಷ್ಣುವರ್ಧನ್, ಹೇಮಾಚೌಧರಿ, ಜಯಂತಿ, ಅನಿರುದ್ಧ, ಶಿವರಾಂ, ಕಾರ್ಯಕ್ರಮ ಆಯೋಜಿಸಿದ್ದ ಪವನ್, ಪ್ರವೀಣ್, ನವೀನ್ ಮೊದಲಾದವರು ಜಾನಕಿಯವರ ಕೊನೆಯ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

    1957ರಲ್ಲಿ ತಮಿಳಿನಲ್ಲಿ ಮೊದಲ ಹಾಡು ಹಾಡಿದ್ದ ಜಾನಕಿ, ಸುಮಾರು 50 ಸಾವಿರ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಕನ್ನಡಿಗರ ವಿಶೇಷ ಪ್ರೀತಿ ಸಂಪಾದಿಸಿದ್ದ ಜಾನಕಿ, ತಮ್ಮ ವೃತ್ತಿ ಜೀವನವನ್ನು ಕನ್ನಡದ ಹಾಡುಗಳ ಮೂಲಕವೇ ಮುಗಿಸಿದ್ದು ಕನ್ನಡಿಗರ ಪಾಲಿಗೆ ಹೆಮ್ಮೆ. ಜಾನಕಿಯವರ ಮುಂದಿನ ಜೀವನ ಸುಖಕರವಾಗಿರಲಿ.

  • ಹಾಡು ನಿಲ್ಲಿಸಲಿದ್ದಾರೆ ಹಾಡು ಹಕ್ಕಿ ಜಾನಕಿ

    janaki s musical programme in mysore

    ಎಸ್. ಜಾನಕಿ. ಕನ್ನಡದಲ್ಲಷ್ಟೇ ಅಲ್ಲ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಗಾನಕೋಗಿಲೆ. ಅವರೀಗ ಹಾಡುವುದನ್ನು ನಿಲ್ಲಿಸುತ್ತಿದ್ದಾರೆ. ಇದೇ ತಿಂಗಳು 28ರಂದು ಮೈಸೂರು ವಿವಿಯ ಬಯಲು ರಂಗಮಂದಿರದಲ್ಲಿ ಜಾನಕಿ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಆ ಕಾರ್ಯಕ್ರಮವೇ ಜಾನಕಿ ಅವರ ಕೊನೆಯ ಕಾರ್ಯಕ್ರಮವಾಗಲಿದೆ.

    ನನಗೂ ವಯಸ್ಸಾಗಿದೆ. ಈ ವಯಸ್ಸಿನಲ್ಲಿ ಹಾಡುವುದನ್ನು ನಿಲ್ಲಿಸಿದರೆ ಉತ್ತಮ ಎಂದೆನಿಸಿದೆ. ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮವೇ ನನ್ನ ಕೊನೆಯ ಕಾರ್ಯಕ್ರಮ ಎಂದಿದ್ದಾರೆ ಜಾನಕಿ. ಕಳೆದ ವರ್ಷ ಮಲಯಾಳಂನ ಪತು ಕಲ್ಪನಾಕಳ್ ಚಿತ್ರದಲ್ಲಿನ ಅಮ್ಮಾಪೂವಿನುಂ ಹಾಡು ಅವರು ಹಾಡಿದ ಕೊನೆಯ ಹಾಡು. 

    ವಿಶೇಷವೆಂದರೆ, ಎಸ್. ಜಾನಕಿ ವೇದಿಕೆಯ ಮೇಲೆ ಹಾಡು ಹಾಡಿದ್ದು ಮೈಸೂರಿನಲ್ಲಿ. 1952ರಲ್ಲಿ ಮೈಸೂರಿನಲ್ಲಿ ಮೊದಲ ಸಂಗೀತ ಸಂಜೆ ನೀಡಿದ್ದ ಜಾನಕಿ, ಅದೇ ಮೈಸೂರಿನಲ್ಲಿ ತಮ್ಮ ಗಾಯನ ಸಂಭ್ರಮಕ್ಕೆ ತೆರೆ ಎಳೆಯಲು ನಿರ್ಧರಿಸಿದ್ದಾರೆ. 

    ಕಾರ್ಯಕ್ರಮದಲ್ಲಿ ರಾಜಮಾತೆ ಪ್ರಮೋದಾದೇವಿ ಜಾನಕಿಯವರನ್ನು ಸನ್ಮಾನಿಸಲಿದ್ದಾರೆ. ಎಸ್. ಜಾನಕಿ ಕನ್ನಡದಲ್ಲಿ ಮೊದಲು ಹಾಡಿದ್ದು ಶ್ರೀಕೃಷ್ಣ ಗಾರುಡಿ ಚಿತ್ರಕ್ಕೆ. ಭಲೇ ಭಲೇ ಗಾರುಡಿ ಹಾಡು ಅವರು ಹಾಡಿದ ಮೊದಲ ಹಾಡು. ಒಬ್ಬ ಹಿರಿಯ ಗಾಯಕಿಯ ಕೊನೆಯ ಗಾಯನ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ, ಚಪ್ಪಾಳೆ ತಟ್ಟಿ ಅಭಿನಂದಿಸುವ ಅಪರೂಪದ ಅವಕಾಶ ಈ ಬಾರಿ ಕನ್ನಡಿಗರದ್ದು. 

     

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery