ಎನ್‍ಟಿಆರ್ ಅವರ ಜೀವನ ಚರಿತ್ರೆ ಸಿನಿಮಾ ಆಗುತ್ತಿರುವುದು ಗೊತ್ತೇ ಇದೆ. ಆ ಚಿತ್ರದಲ್ಲಿ ಡಾ. ರಾಜ್ ಅವರ ಪಾತ್ರವೂ ಇರಲಿದೆಯಂತೆ. ಪಾತ್ರ ಯಾರು ಮಾಡುತ್ತಾರೆ ಎಂಬುದು ಫೈನಲ್ ಆಗಿಲ್ಲ. ಎನ್‍ಟಿಆರ್ ಚಿತ್ರದಲ್ಲಿ ರಾಜ್ ಅಷ್ಟೇ ಅಲ್ಲ, ಎಂಜಿಆರ್, ಶಿವಾಜಿ ಗಣೇಶನ್, ಅಕ್ಕಿನೇನಿ ನಾಗೇಶ್ವರ ರಾವ್, ಶೋಭನ್ ಬಾಬು ಮೊದಲಾದವರೂ ಪಾತ್ರಗಳಾಗಲಿದ್ದಾರೆ.
ಎನ್‍ಟಿಆರ್ ಮತ್ತು ರಾಜ್ ಮಧ್ಯೆ ಉತ್ತಮ ಬಾಂಧವ್ಯವಿತ್ತು. ಎನ್‍ಟಿಆರ್, ರಾಜ್‍ರನ್ನು ಸಹೋದರ ಎಂದೇ ಕರೆಯುತ್ತಿದ್ದರು. ಪೌರಾಣಿಕ ಚಿತ್ರಗಳ ಶೂಟಿಂಗ್ ವೇಳೆ ಪರಸ್ಪರ ಭೇಟಿ, ವಿಚಾರ ವಿನಿಮಯ ಇದ್ದೇ ಇರುತ್ತಿತ್ತು. ಕುಟುಂಬಗಳ ನಡುವೆಯೂ ಉತ್ತಮ ಬಾಂಧವ್ಯವಿತ್ತು. ಇತ್ತೀಚೆಗಷ್ಟೇ ಬಾಲಕೃಷ್ಣ ಅಭಿನಯದ ಗೌತಮಿಪುತ್ರ ಶಾತಕರ್ಣಿ ಚಿತ್ರದಲ್ಲಿ ಶಿವರಾಜ್ ಕುಮಾರ್ ಅತಿಥಿಯಾಗಿ ನಟಿಸಿದ್ದರು. ಪುನೀತ್ ರಾಜ್‍ಕುಮಾರ್ ಅಭಿನಯದ ಪವರ್ ಚಿತ್ರದಲ್ಲಿ ಜ್ಯೂ.ಎನ್‍ಟಿಆರ್ ಹಾಡು ಹಾಡಿದ್ದರು.
ನಟರಾಗಿ ಅಷ್ಟೇ ಅಲ್ಲ, ರಾಜಕಾರಣಿಯಾಗಿಯೂ ಎನ್‍ಟಿಆರ್‍ಗೆ ಕರ್ನಾಟಕದ ಜೊತೆ ಉತ್ತಮ ಬಾಂಧವ್ಯವಿದೆ. ಕಾಂಗ್ರಸ್‍ನವರು ಎನ್‍ಟಿಆರ್ ಸರ್ಕಾರವನ್ನು ಪತನಗೊಳಿಸಲು ಮುಂದಾದಾಗ, ಎನ್‍ಟಿಆರ್ ತಮ್ಮ ಶಾಸಕರನ್ನು ರಕ್ಷಿಸಿಕೊಂಡಿದ್ದುದು ಬೆಂಗಳೂರಿನಲ್ಲಿಯೇ.
ಅಂದಹಾಗೆ ಇದು ರಾಮ್‍ಗೋಪಾಲ್ ವರ್ಮಾ ನಿರ್ದೇಶನದ ಲಕ್ಷ್ಮೀಸ್ ಎನ್‍ಟಿಆರ್ ಚಿತ್ರವಲ್ಲ. ಅದು ವಿವಾದಾತ್ಮಕ ಚಿತ್ರ. ಈ ಚಿತ್ರವೇ ಬೇರೆ. ಈ ಚಿತ್ರದಲ್ಲಿ ನಂದಮೂರಿ ತಾರಕರಾಮರಾವ್ ಪಾತ್ರವನ್ನು ಪೋಷಿಸುತ್ತಿರುವುದು ಅವರ ಮಗ ನಂದಮೂರಿ ಬಾಲಕೃಷ್ಣ. ವರ್ಮಾ ಚಿತ್ರಕ್ಕೂ, ಈ ಚಿತ್ರಕ್ಕೂ ಸಂಬಂಧವಿಲ್ಲ.