ಇನ್ನು ಗ್ಯಾರಂಟಿ ನಂಜುಂಡಿ ಕಲ್ಯಾಣ.. ಹಾಡು ಬಂದು 29 ವರ್ಷಗಳಾಗಿವೆ. ಈ 29 ವರ್ಷಗಳಲ್ಲಿ ನಂಜುಂಡಿ ಕಲ್ಯಾಣದ ದೇವಿ ಮಾಲಾಶ್ರೀ, ಚಿತ್ರರಂಗದಲ್ಲಿ ದಶಕಗಳ ಕಾಲ ಮಹಾರಾಣಿಯಾಗಿ ಮೆರೆದು ಮರೆಯಾದರು. ರಾಘವೇಂದ್ರ ರಾಜ್ಕುಮಾರ್, ಈಗ ಹಿರಿಯ ಕಲಾವಿದ. ಒಳಗೆ ಸೇರಿದರೆ ಗುಂಡು ಹಾಡು ಕೇಳಿದರೆ, ಮಾಲಾಶ್ರೀ ನೆನಪಾದಂತೆಯೇ ಮಂಜುಳಾ ಗುರುರಾಜ್ ಕೂಡಾ ನೆನಪಾಗ್ತಾರೆ. ಈಗ ಮತ್ತೆ ನಂಜುಂಡಿ ಕಲ್ಯಾಣ ನೆನಪಾಗ್ತಾ ಇರೋದಕ್ಕೆ ಕಾರಣ, ಮತ್ತೊಂದು ನಂಜುಂಡಿ ಕಲ್ಯಾಣ.
ರಾಜೇಂದ್ರ ಕಾರಂತ್ ನಿರ್ದೇಶನದ ನಂಜುಂಡಿ ಕಲ್ಯಾಣ ಚಿತ್ರ, ಮಾರ್ಚ್ನಲ್ಲಿಯೇ ತೆರೆಗೆ ಬರಬೇಕಿತ್ತು. ಕ್ಯೂಬ್ & ಯುಎಫ್ಓ ವಿರುದ್ಧದ ಸಮರ ಸಾರಿದ ಹಿನ್ನೆಲೆಯಲ್ಲಿ ಚಿತ್ರ ಮುಂದಕ್ಕೆ ಹೋಗಿತ್ತು. ಈಗ ಏಪ್ರಿಲ್ 6ಕ್ಕೆ ತೆರೆಗೆ ಬರುತ್ತಿದೆ. ತನುಷ್ ನಾಯಕ ನಟನಾಗಿ ನಟಿಸಿರುವ ಚಿತ್ರದಲ್ಲಿ ಪದ್ಮಜಾ ರಾವ್, ಕುರಿ ಪ್ರತಾಪ್, ಮಂಜುನಾಥ್ ಹೆಗಡೆ, ಸುಂದರ್, ಪಿ.ಡಿ.ಸತೀಶ್ ಅವರಲ್ಲದೇ ನಿರ್ದೇಶಕ ಕಾರಂತ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶ್ರಾವ್ಯ ನಾಯಕಿ.
ಹೆಸರು ಮಾತ್ರ ಅದೇ ಆಗಿದ್ದರೂ, ಹಳೆಯ ನಂಜುಂಡಿ ಕಲ್ಯಾಣದ ಕಥೆಗೂ, ಈ ಚಿತ್ರದ ಕಥೆಗೂ ಯಾವುದೇ ಸಂಬಂಧ ಇಲ್ಲ. ಕಥೆ ಕಂಪ್ಲೀಟ್ ಡಿಫರೆಂಟ್ ಅನ್ನೊದು ರಾಜೇಂದ್ರ ಕಾರಂತ್ರ ವಿವರಣೆ.