ಕಿಚ್ಚ ಸುದೀಪ್ 5 ಭಾಷೆಗಳಲ್ಲಿ ನಟಿಸುವ ಬ್ಯುಸಿ ನಟ. ನಟನಷ್ಟೇ ಅಲ್ಲ, ನಿರ್ದೇಶಕರೂ ಹೌದು. ನಿರ್ಮಾಪಕರೂ ಹೌದು. ದಿನವಿಡೀ ಎಷ್ಟು ಬ್ಯುಸಿ ಇರುತ್ತಾರೆ ಅಂದ್ರೆ, ಅವರಿಗೆ ದಿನದ 24 ಗಂಟೆಗಳೂ ಸಾಕಾಗೊಲ್ಲ. ಆದರೆ, ಟೈಂ ಸೆನ್ಸ್ನಲ್ಲಿ ಸುದೀಪ್ ಯಾವತ್ತೂ ಪಕ್ಕಾ. ಹೇಳಿದ ಟೈಮಿಗೆ ಹಾಜರಾಗುತ್ತಾರೆ. ಆದರೆ, ಇಷ್ಟೆಲ್ಲ ಸಮಯಪಾಲನೆ ಮಾಡಿದರೂ, ಅವರು ಕೈಗೆ ವಾಚ್ನ್ನೇ ಕಟ್ಟೋದಿಲ್ಲ. ಅದರ ಹಿಂದೊಂದು ಸ್ವಾರಸ್ಯಕಾರಿ ಕಥೆ ಇದೆ.
ಸುದೀಪ್ಗೆ ಚಿಕ್ಕಂದಿನಲ್ಲಿ ವಾಚ್ ಅಂದ್ರೆ ತುಂಬಾನೇ ಕ್ರೇಝು. ತಂದೆಯ ಬೆನ್ನು ಬಿದ್ದಿದ್ದ ಸುದೀಪ್ಗೆ ಅಪ್ಪ ಎರಡೂವರೆ ಸಾವಿರ ರೂ. ಬೆಲೆ ಬಾಳುವ ದುಬಾರಿ ವಾಚ್ವೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಮುಂದೆ ನೀನು ನಿನ್ನ ದುಡಿಮೆಯಲ್ಲಿ ವಾಚ್ ತೆಗೆದುಕೊ ಎಂದೂ ಹೇಳಿದ್ದರು.
ಸುದೀಪ್ಗೆ ಬಾಲ್ಯದಿಂದಲೂ ವಾಚ್ಗಳ ಬಗ್ಗೆ ಎಷ್ಟೊಂದು ಕ್ರೇಝ್ ಇತ್ತೆಂದರೆ, ಅವರ ಮನೆ ತುಂಬಾ ನೂರಾರು ವಾಚ್ಗಳಿವೆ. ಕಣ್ಣಿಗೆ ಕಂಡ ಇಷ್ಟವಾದ ವಾಚ್ಗಳನ್ನೆಲ್ಲ ಖರೀದಿಸುತ್ತಿದ್ದ ಸುದೀಪ್, ದಿನಕ್ಕೊಂದರಂತೆ ಧರಿಸಿಕೊಂಡು ಖುಷಿ ಪಡುತ್ತಿದ್ದರು. ವಾಚ್ಗಳ ಬಗ್ಗೆ ಇಷ್ಟೆಲ್ಲ ಕ್ರೇಝ್ ಇದ್ದ ಸುದೀಪ್ಗೆ ಒಂದು ದಿನ ಇದ್ದಕ್ಕಿದ್ದಂತೆ ಒಂದು ಆಲೋಚನೆ ಬಂತು. ನಾನ್ಯಾಕೆ ವಾಚ್ ಕಟ್ಟಬೇಕು ಅಂತಾ.
ಬೆಳಗ್ಗೆ ಎಬ್ಬಿಸೋಕೆ ಜನರಿದ್ದಾರೆ. ಸಮಯಕ್ಕೆ ಸರಿಯಾಗಿ ತಿಂಡಿ, ಊಟ ಕೊಡೋಕೆ ಜನರಿದ್ದಾರೆ. ಶೂಟಿಂಗ್ ಮತ್ತಿತರ ವಿಚಾರಗಳನ್ನು ನೋಡಿಕೊಂಡು ನೆನಪಿಸೋಕೆ ಮ್ಯಾನೇಜರ್ ಇದ್ದಾರೆ. ಶೂಟಿಂಗ್ ಜಾಗಕ್ಕೆ ಕರೆದುಕೊಂಡು ಹೋಗೋಕೆ ಡ್ರೈವರ್ ಇದ್ದಾರೆ. ಶೂಟಿಂಗಿಗೆ ಹೋದರೆ, ಅಲ್ಲಿ ಸಮಯ ನೋಡಿಕೊಳ್ಳೋಕೆ ಚಿತ್ರದ ನಿರ್ದೇಶಕರು ಸೇರಿದಂತೆ ಹಲವರಿರುತ್ತಾರೆ. ಸಮಯ ಮುಗಿದ ಮೇಲೆ ಕರೆತರೋಕೂ ಡ್ರೈವರ್ ಇರುತ್ತಾರೆ. ಹೀಗೆ ನನ್ನ ಸಮಯವನ್ನು ನೋಡಿಕೊಳ್ಳೋಕೆ ಇಷ್ಟೊಂದು ಜನರಿರುವಾಗ ನಾನೇಕೆ ವಾಚ್ ಕಟ್ಟಬೇಕು ಎನ್ನಿಸಿತಂತೆ. ಆ ದಿನವೇ ಸುದೀಪ್ ವಾಚ್ ಕಟ್ಟೋದನ್ನು ಬಿಟ್ಟುಬಿಟ್ಟರು.
ಸುದೀಪ್ ವಾಚ್ ಎಂದರೆ, ಸಣ್ಣ ಪುಟ್ಟ ವಾಚುಗಳೇನಲ್ಲ. ಈಗ ಆ ವಾಚುಗಳಿಗೆ ಖರ್ಚು ಮಾಡುತ್ತಿದ್ದ ಹಣವನ್ನೇ ಸಮಾಜ ಸೇವೆಗೆ ಬಳಸುತ್ತಿದ್ದಾರೆ. ನನ್ನ ವಾಚಿನ ಹಣ ಯಾರಿಗೋ ಉಪಯೋಗವಾಗುತ್ತಿದೆ ಎಂಬ ಸಂತೃಪ್ತಿ ನನಗಿದೆ ಅಂತಾರೆ ಸುದೀಪ್. ವಾಚ್ ಕಟ್ಟದೇ ಹೋದರೂ, ಸಮಯ ಪಾಲನೆಯಲ್ಲಿ ಮಾತ್ರ ಸುದೀಪ್ ಇಂದಿಗೂ ಕಟ್ಟುನಿಟ್ಟು.