ಗಂಡಾನೋ ದುಡಿಬೇಕು.. ಹೆಣ್ಣೇನೋ ಹೆರಬೇಕು..
ಗಂಡ ತಂದ್ ಹಾಕೋಕೆ.. ಹೆಂಡತಿ ಅಡಿಗೆ ಮಾಡಿ ಹಾಕೋಕೆ..
ಗಂಡ್ಸು ಕುಂತ್ ಕೆಟ್ಟ.. ಹೆಂಗ್ಸು ತಿರುಗಿ ಕೆಟ್ಟಳು..
ಗಂಡ್ಸಿಗ್ಯಾಕ್ ಗೌರಿ ದುಃಖ..
ಇವೆಲ್ಲ ಗಾದೆಗಳು. ಗಂಡಸು ಇರೋದು ದುಡಿಯೋಕೆ.. ಹೆಂಗಸು ಇರೋದು ಮನೆಯಲ್ಲಿ ಅಡುಗೆ ಮಾಡಿ ಹಾಕೋಕೆ, ಮಕ್ಕಳನ್ನು ಹೆರೋಕೆ.. ಅನ್ನೋ ಅರ್ಥದಲ್ಲಿಯೇ ಇರೋ ಗಾದೆಗಳು. ಸೊಸೈಟಿ ಇರೋದೂ ಹಾಗೇ.. ಆದರೆ, ಇದಕ್ಕೆ ಉಲ್ಟಾ ಕಾನ್ಸೆಪ್ಟ್‍ನಲ್ಲಿ ತೆರೆಗೆ ಬರುತ್ತಿರೋ ಚಿತ್ರ ಹೋಮ್ ಮಿನಿಸ್ಟರ್.
ಹೀರೋ ಉಪೇಂದ್ರ. ನಾಯಕಿ ವೇದಿಕಾ ಮತ್ತು ತಾನ್ಯಾ ಹೋಪ್. ಹೀರೋ ಮನೆಯಲ್ಲಿ ಅಡುಗೆ ಕೆಲಸ ಮಾಡ್ತಿದ್ರೆ, ಹೆಂಡತಿ ಹೊರಗೆ ಹೋಗಿ ದುಡೀತಾ ಇರ್ತಾಳೆ. ಹೀಗೊಂದು ವಿಭಿನ್ನ ಕಾನ್ಸೆಪ್ಟ್ ಇರೋ ಸಿನಿಮಾ ಹೋಮ್ ಮಿನಿಸ್ಟರ್.
ಇದು ಬೇರೆ ಬೇರೆ ಭಾಷೆಗಳಲ್ಲಿ ಪ್ರಯೋಗವಾಗಿದೆ. ಬೇರೆ ಬೇರೆ ರೀತಿಯಲ್ಲಿ ಪ್ರಯೋಗವಾಗಿದೆ. ಕನ್ನಡದಲ್ಲಿಯೇ ಅಮ್ಮಾವ್ರ ಗಂಡ ಅನ್ನೋ ಸಿನಿಮಾ ಬಂದಿತ್ತು. ಶಿವಣ್ಣ-ಭಾಗ್ಯಶ್ರೀ ನಟಿಸಿದ್ದ ಸಿನಿಮಾ ಅದು.
ಆದರೆ ಇಲ್ಲಿ ಡೈರೆಕ್ಟರ್ ಸುಜಯ್ ಎಂ. ಶ್ರೀಹರಿ ಜೊತೆಗೊಂದು ಥ್ರಿಲ್ಲರ್ ಸ್ಟೋರಿಯನ್ನೂ ಇಟ್ಟಿದ್ದಾರೆ. ಉಪ್ಪಿ ಹಿಜಾಬ್ ಹಾಕ್ಕೊಂಡು ಬರ್ತಾರೆ. ನಿರ್ಮಾಪಕರಾದ ಪೂರ್ಣಾ ನಾಯ್ಡು ಡಿಫರೆಂಟ್ ಸ್ಟೋರಿ ಇರೋ ಕಥೆಗೆ ಬಂಡವಾಳ ಹೂಡಿದ್ದಾರೆ. ಅಂದಹಾಗೆ ಉಪ್ಪಿ ತೆರೆ ಮೇಲೆ ಬರುತ್ತಿರೋದು ಬರೋಬ್ಬರಿ 3 ವರ್ಷಗಳ ಬಳಿಕ..