ಭಗವಾನ್, ಕನ್ನಡ ಚಿತ್ರರಂಗ ಕಂಡ ಅತ್ಯಂತ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರು. ದೊರೆ ಮತ್ತು ಭಗವಾನ್ ಜೋಡಿಯ ಚಿತ್ರಗಳು ಕನ್ನಡ ಚಿತ್ರರಂಗದ ಸುವರ್ಣ ಯುಗದಲ್ಲಿ ಮಿಂಚಿ ಮಿನುಗಿವೆ. ರಾಜ್ ಕುಮಾರ್, ವಿಷ್ಣುವರ್ಧನ್, ಅನಂತ್ ನಾಗ್‍ರಂತಹ ದಿಗ್ಗಜರ ಚಿತ್ರ ನಿರ್ದೇಶಿಸಿದ್ದ ಜೋಡಿ ದೊರೆ ಭಗವಾನ್.
ದೊರೆ ಅವರ ನಿಧನದ ನಂತರ ಭಗವಾನ್ ಕೂಡಾ ನಿರ್ದೇಶನದಿಂದ ದೂರ ಸರಿದಿದ್ದರು. ಭಗವಾನ್ ನಿರ್ದೇಶಿಸಿದ ಕೊನೆಯ ಚಿತ್ರ ಬಾಳೊಂದು ಚದುರಂಗ. 22 ವರ್ಷಗಳ ಹಿಂದೆ ಬಂದಿದ್ದ ಸಿನಿಮಾ ಅದು.
ಈಗ, ಇಷ್ಟು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕಿಳಿಯುತ್ತಿದ್ದಾರೆ. ಆ ಚಿತ್ರಕ್ಕೆ ಸಂಚಾರಿ ವಿಜಯ್ ನಾಯಕ. ಚಿತ್ರ ಸೆಪ್ಟೆಂಬರ್ ಕೊನೆ ಅಥವಾ ಅಕ್ಟೋಬರ್‍ನಲ್ಲಿ ಸೆಟ್ಟೇರುವ ಸಾಧ್ಯತೆ ಇದೆ.
ಮೊದಲೆಲ್ಲ ಡಾ. ರಾಜ್ ಕುಮಾರ್‍ರನ್ನು ಮನಸ್ಸಿನಲ್ಲಿಟ್ಟುಕೊಂಡು ಕಥೆ ಮಾಡುತ್ತಿದ್ದೆ. ಈಗ ನಿಮ್ಮನ್ನು ತಲೆಯಲ್ಲಿಟ್ಟುಕೊಂಡು ಕಥೆ ಮಾಡಿದ್ದೇನೆ ಎಂದರಂತೆ ಭಗವಾನ್. ಆ ಮಾತಿಗೇ ಥ್ರಿಲ್ಲಾಗಿ ಒಪ್ಪಿಕೊಂಡಿದ್ದಾರಂತೆ ವಿಜಯ್. ಸದ್ಯಕ್ಕೆ ತಮ್ಮ ಕೈಲಿರುವ ಮೂರು ಚಿತ್ರಗಳ ಶೂಟಿಂಗ್ ಮುಗಿಸಿ ಭಗವಾನ್ ಚಿತ್ರದಲ್ಲಿ ನಟಿಸಲಿದ್ದಾರೆ ಸಂಚಾರಿ ವಿಜಯ್.
22 ವರ್ಷಗಳ ನಂತರ ನಿರ್ದೇಶನಕ್ಕಿಳಿಯುತ್ತಿರುವ ಭಗವಾನ್ ಅವರಿಗೆ ಶುಭವಾಗಲಿ