ಉಳಿದವರು ಕಂಡಂತೆ ಚಿತ್ರದಲ್ಲಿನ ರಿಚ್ಚಿ ಪಾತ್ರ, ರಕ್ಷಿತ್ ಶೆಟ್ಟಿಗೆ ಹೊಸ ಇಮೇಜ್ ತಂದುಕೊಟ್ಟಿದ್ದು ಸುಳ್ಳಲ್ಲ. ಶೂಟ್ ಮಾಡ್ಲಾ ಅನ್ನೋ ರಕ್ಷಿತ್ ಶೆಟ್ಟಿಯ ಡೈಲಾಗ್ ಮತ್ತು ಹುಲಿ ಡ್ಯಾನ್ಸ್, ಇಂದಿಗೂ ಫೇಮಸ್. ವಿಭಿನ್ನ ಚಿತ್ರಕತೆಯಿಂದಾಗಿ ಗಮನ ಸೆಳೆದಿದ್ದ ಸಿನಿಮಾದ ಸೀಕ್ವೆಲ್‍ಗೆ ಸಿದ್ಧರಾಗುತ್ತಿದ್ದಾರೆ ರಕ್ಷಿತ್ ಶೆಟ್ಟಿ.
ಉಳಿದವರು ಕಂಡಂತೆ ಚಿತ್ರದಲ್ಲಿನ ರಿಚ್ಚಿ ಪಾತ್ರವನ್ನೇ ಕೇಂದ್ರವಾಗಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಉಳಿದವರು ಕಂಡಂತೆ ಚಿತ್ರದಲ್ಲಿದ್ದವರೆಲ್ಲ ಈ ಸಿನಿಮಾದಲ್ಲೂ ಇರ್ತಾರೆ. ಆದರೆ, ಡೈರೆಕ್ಟರ್ ರಕ್ಷಿತ್ ಶೆಟ್ಟಿ ಅಲ್ಲ, ರಿಷಬ್ ಶೆಟ್ಟಿ. ರಿಷಬ್, ಉಳಿದವರು ಕಂಡಂತೆ ಸಿನಿಮಾ ಮಾಡುವಾಗ ನನಗೆ ಅಸಿಸ್ಟೆಂಟ್ ಆಗಿದ್ದವರು. ಅವರಿಗೆ ಚಿತ್ರದ ಬಗ್ಗೆ ಎಲ್ಲವೂ ಗೊತ್ತು. ಕಥೆ, ಪಾತ್ರಗಳ ಬಗ್ಗೆ ಚೆನ್ನಾಗಿ ಗೊತ್ತಿದೆ. ಅವರೇ ಚಿತ್ರದ ಹೊಣೆ ಹೊರಲಿದ್ದಾರೆ ಎಂದಿದ್ದಾರೆ ರಕ್ಷಿತ್. ಈ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕರು.
ಉಳಿದಂತೆ ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಖ್ಯಾತಿಯ ಹೇಮಂತ್ ರಾವ್, ರಕ್ಷಿತ್ ಅವರಿಗಾಗಿಯೇ ಕಥೆಯೊಂದನ್ನು ಸಿದ್ಧಪಡಿಸುತ್ತಿದ್ದಾರೆ. ಅದು ಸ್ವಾತಂತ್ರ್ಯ ಪೂರ್ವದ ಕಥೆ. ಆ ಕಥೆಗಾಗಿ ಒಂದಿಷ್ಟು ಸಂಶೋಧನೆ ಕೆಲಸ ಬಾಕಿಯಿದೆ. ಎಲ್ಲವನ್ನೂ ಸಿದ್ಧಪಡಿಸಿಕೊಂಡು ಶೂಟಿಂಗ್‍ಗೆ ಸಿದ್ಧರಾಗಲಿದ್ದಾರೆ ರಕ್ಷಿತ್ ಶೆಟ್ಟಿ. ಒನ್ಸ್ ಎಗೇಯ್ನ್, ಈ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರೇ ನಿರ್ಮಾಪಕ.
ಇನ್ನು 3ನೇ ಸಿನಿಮಾಗೂ ರಕ್ಷಿತ್ ಶೆಟ್ಟಿ ಸಿದ್ಧರಾಗುತ್ತಿದ್ದಾರೆ. ಆ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಅವರೇ ಡೈರೆಕ್ಟರ್. ಸದ್ಯಕ್ಕೆ ಕಥೆಯ ಎಳೆಯೊಂದು ಮನಸ್ಸಿನಲ್ಲಿದೆ. ಅದನ್ನು ಸ್ವಲ್ಪ ಇಂಪ್ರೂವ್ ಮಾಡಬೇಕು. ಅದು ಫೈನಲ್ ಹಂತಕ್ಕೆ ಬಂದ ನಂತರ ಚಿತ್ರಕ್ಕೆ ಸಿದ್ಧನಾಗಲಿದ್ದೇನೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ. ಮತ್ತೊಮ್ಮೆ, ಈ ಚಿತ್ರಕ್ಕೂ ಹಣ ಹೂಡುವುದು ಪುಷ್ಕರ್ ಮಲ್ಲಿಕಾರ್ಜುನಯ್ಯ.
ಸದ್ಯಕ್ಕೆ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಯಣದಲ್ಲಿ ಬ್ಯುಸಿ. ಅದಾದ ನಂತರ ಚಾರ್ಲಿ ಶುರುವಾಗಲಿದೆ. ಆ ಎರಡೂ ಚಿತ್ರಗಳು ಅಂತಿಮ ಹಂತಕ್ಕೆ ಬರುವ ಹೊತ್ತಿಗೆ ಈ ಸಿನಿಮಾಗಳು ಶುರುವಾಗಲಿವೆ.