ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಜೀವಮಾನ ಸಾಧನೆಗಾಗಿ ಕೇಂದ್ರ ಸರ್ಕಾರ ನೀಡುವ ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ ಸಿಕ್ಕಿದೆ. 1969ರಲ್ಲಿ ಸಾಥಿ ಹಿಂದೂಸ್ತಾನಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಅಮಿತಾಭ್, ಹಿಂದಿ ಚಿತ್ರರಂಗದಲ್ಲಿ ನಟರಾಗಿ, ನಿರ್ಮಾಪಕರಾಗಿ ದೊಡ್ಡ ಹೆಸರು ಮಾಡಿದ ಕಲಾವಿದ.
ಆನಂದ್, ಜಂಝೀರ್, ಶೋಲೆ, ನಮಕ್ ಹರಾಮ್, ದೀವಾರ್, ಡಾನ್, ಅಮರ್ ಅಕ್ಬರ್ ಆಂಥೊನಿ, ಮುಕದ್ದರ್ ಕಾ ಸಿಕಂದರ್, ತ್ರಿಶೂಲ್, ಶಾನ್, ಕೂಲಿ, ಶರಾಬಿ, ಅಗ್ನಿಪಥ್, ಹಮ್, ಖುದಾಗವಾ, ಉಮ್ರಾವ್ ಜಾನ್, ಸಟ್ಟೇ ಪೇ ಸಟ್ಟಾ, ನಮಕ್ ಹಲಾಲ್, ಮಹಾನ್, ಮಿ.ನಟ್ವರ್ ಲಾಲ್, ಕಾಲಾ ಪತ್ಥರ್, ಸಿಲ್‍ಸಿಲಾ, ಬೇಷರಮ್, ಕಭಿ ಕಭೀ, ಚುಪ್ಕೆ ಚುಪ್ಕೆ.. ಇವು ಒಂದು ಹಂತದ ಹಿಟ್ ಚಿತ್ರಗಳಾದರೆ, ತಮ್ಮ 3ನೇ ಇನ್ನಿಂಗ್ಸ್‍ನಲ್ಲಿ ನಟಿಸಿದ ಮೊಹಬ್ಬತೇನ್, ಕಭಿ ಖುಷಿ ಕಬಿ ಗಮ್, ಪಾ, ಪಿಕು, ಬ್ಲಾಕ್, ಸರ್ಕಾರ್, ಪಿಂಕ್, ಚೀನಿ ಕಮ್.. ಈ ಚಿತ್ರಗಳದ್ದೇ ಬೇರೊಂದು ಹವಾ.
ವೃತ್ತಿ ಬದುಕಿನಲ್ಲಿ ಕಭಿ ಖುಷಿ ಕಬಿ ಗಮ್ ನೋಡಿರುವ ಅಮಿತಾಭ್, ಒಂದು ಕಾಲದಲ್ಲಿ ದಿವಾಳಿಯ ಅಂಚಿನಲ್ಲಿದ್ದರು. ಎಬಿಸಿಲ್ ಸ್ಥಾಪಿಸಿ, ಸಾಲದಲ್ಲಿ ಮುಳುಗಿ ಹೋಗಿದ್ದ ಅಮಿತಾಭ್.. ಮತ್ತೊಮ್ಮೆ ಬದುಕು ಕಟ್ಟಿಕೊಂಡು 2600 ಕೋಟಿಯ ಒಡೆಯರಾದ ಕಥೆ ಇದೆಯಲ್ಲ. ಅದು ಎಂಥವರಿಗೂ ಸ್ಫೂರ್ತಿ ಮತ್ತು ರೋಮಾಂಚನ ಹುಟ್ಟಿಸುವಂಥದ್ದು.
ಒಮ್ಮೆ ಲೋಕಸಭಾ ಸದಸ್ಯರೂ ಆಗಿದ್ದ ಅಮಿತಾಭ್, ರಾಜೀವ್ ಗಾಂಧಿಯವರ ಆಪ್ತಮಿತ್ರನಾಗಿದ್ದರು. ಆದರೆ, ರಾಜಕೀಯ ನನಗೆ ಆಗಿಬರಲ್ಲ ಎಂದು ಮತ್ತೆ ಸಿನಿಮಾ ರಂಗಕ್ಕೆ ಮರಳಿದ ಅಮಿತಾಭ್ ಬಚ್ಚನ್, ಚಿತ್ರರಂಗದಲ್ಲಿ ಸಾಧಿಸಿದ್ದು ಅಪಾರ.
ಅಂದಹಾಗೆ ಡಾ.ರಾಜ್ ಅವರಿಗೆ 1995ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿತ್ತು. ಅದಾಗಿ 24 ವರ್ಷಗಳ ನಂತರ ಅಮಿತಾಭ್ ಬಚ್ಚನ್ ಫಾಲ್ಕೆ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಇಷ್ಟಕ್ಕೂ ದಾದಾ ಸಾಹೇಬ್ ಫಾಲ್ಕೆ ಯಾರು ಗೊತ್ತೇ..? ಹಿಂದಿ ಚಿತ್ರರಂಗದ ಮೊದಲ ನಿರ್ಮಾಪಕ. ಚಿತ್ರರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತೆ.