ಶಕ್ತಿಧಾಮ. 25 ವರ್ಷಗಳ ಹಿಂದೆ ಆರಂಭವಾದ ಪಾರ್ವತಮ್ಮ ಮತ್ತು ರಾಜಕುಮಾರ್ ಕನಸು. ಅಶಕ್ತ ಮಹಿಳೆಯರಿಗೆ ಆಸರೆ ನೀಡಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುವ ಸಂಸ್ಥೆ. ಈ ಸಂಸ್ಥೆ ಇದುವರೆಗೆ ಸುಮಾರು 4 ಸಾವಿರಕ್ಕೂ ಹೆಚ್ಚು ಮಹಿಳೆಯರು ಸ್ವಾವಲಂಬಿಗಳಾಗಲು ಸಹಾಯ ಮಾಡಿದೆ. ಈಗ ಆ ಸಂಸ್ಥೆಯಲ್ಲಿ ಮಹಿಳೆಯರ ಜೊತೆ 800ಕ್ಕೂ ಹೆಚ್ಚು ಮಕ್ಕಳೂ ಇದ್ದಾರೆ. ಅವರಲ್ಲಿ ಬಹುತೇಕರು ಅನಾಥರು. ಈಗ ಶಕ್ತಿಧಾಮ ಆ ಮಕ್ಕಳಿಗಾಗಿ ಹೊಸ ಶಾಲೆ ಆರಂಭಿಸಲು ಮುಂದಾಗಿದೆ.
ಶಕ್ತಿಧಾಮದ ಆವರಣದಲ್ಲಿ ಶಕ್ತಿಧಾಮ ವಿದ್ಯಾಶಾಲಾ ಕಟ್ಟಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಸರ್ಕಾರದ ವತಿಯಿಂದ ಶಕ್ತಿಧಾಮಕ್ಕೆ 5 ಕೋಟಿಯ ನೆರವನ್ನೂ ಘೋಷಿಸಿದ್ದಾರೆ. ಪುನೀತ್ ರಾಜಕುಮಾರ್ ಅವರ ಕನಸು ಇದಾಗಿತ್ತು. ಹೆಣ್ಣು ಮಕ್ಕಳಿಗಾಗಿಯೇ ವಿಶೇಷ ಶಾಲೆ ಆರಂಭಿಸಬೇಕೆಂದು ಕನಸು ಕಂಡಿದ್ದರು ಪುನೀತ್. ಈ ಕಟ್ಟಡ ನಿರ್ಮಾಣವಾದ ನಂತರ ಶಕ್ತಿಧಾಮದ ಹೆಣ್ಣು ಮಕ್ಕಳು ಇಲ್ಲಿಯೇ 1ರಿಂದ 8ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಲಿದ್ದಾರೆ.
ಇನ್ಫೋಸಿಸ್‍ನ ಸುಧಾಮೂರ್ತಿ ಕೂಡಾ ಶಕ್ತಿಧಾಮದ ಕೆಲಸಗಳಿಗೆ ಕೈಜೋಡಿಸಿದ್ದಾರೆ. ಇನ್ಫೋಸಿಸ್ ಬ್ಲಾಕ್ ಎಂಬ ಕಟ್ಟಡ ಕಟ್ಟಿಸಿದ್ದಾರೆ. ಸುಮಾರು 3 ಕೋಟಿ ವೆಚ್ಚದ ಕಟ್ಟಡದಲ್ಲಿ ಊಟದ ಹಾಲ್, ಯೋಗದ ಸಭಾಂಗಣ, ಗ್ರಂಥಾಲಯ ವ್ಯವಸ್ಥೆ ಇರಲಿದೆ.
ಶಕ್ತಿಧಾಮದ ಅಧ್ಯಕ್ಷೆಯಾಗಿರುವ ಗೀತಾ ಶಿವರಾಜಕುಮಾರ್ ಅಮ್ಮ ಪಾರ್ವತಮ್ಮನ ಆಶಯದಂತೆ ಕೆಂಪಯ್ಯ ಮಾಮ ನನ್ನನ್ನು ಶಕ್ತಿಧಾಮದ ಅಧ್ಯಕ್ಷೆಯನ್ನಾಗಿ ಮಾಡಿದರು. ಹಲವು ನಿರ್ಮಾಪಕರೂ ನೆರವು ನೀಡಿದ್ದಾರೆ. ಅವರೆಲ್ಲರಿಗೂ ನಾನು ಕೃತಜ್ಞಳು ಎಂದರು.
ಶಿವರಾಜಕುಮಾರ್ ಅಪ್ಪು ನೆನಪಿಸಿಕೊಂಡು ಇಲ್ಲಿರೋ ಮಕ್ಕಳಲ್ಲಿಯೇ ನಾನು ಅಪ್ಪುನನ್ನು ಕಾಣುತ್ತಿದ್ದೇನೆ. ಮನಸ್ಸಿಗೆ ಬೇಸರವಾದಾಗಲೆಲ್ಲ ಇಲ್ಲಿಗೆ ಬರುತ್ತೇನೆ. ನನ್ನ ಉಸಿರುವ ಇರುವವರೆಗೆ ಶಕ್ತಿಧಾಮ ಬಿಡಲ್ಲ ಎಂದರು.
ಇಲ್ಲಿರುವ ಯಾರೊಬ್ಬರೂ ಅನಾಥರಲ್ಲ. ಎಲ್ಲರೂ ದೇವರ ಮಕ್ಕಳು ಎಂದ ಸಿಎಂ ಬಸವರಾಜ ಬೊಮ್ಮಾಯಿ ಶಕ್ತಿಧಾಮಕ್ಕೆ ಸರ್ಕಾರದಿಂದ ಸಾಧ್ಯವಾಗುವ ಎಲ್ಲ ನೆರವನ್ನೂ ನೀಡುವುದಾಗಿ ಘೋಷಿಸಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಇನ್ಫೋಸಿಸ್ ಉಪಾಧ್ಯಕ್ಷ ಸಾಜು ಮ್ಯಾಥ್ಯೂ, ಸಚಿವರಾದ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ನಾಗೇಂದ್ರ, ನಿರಂಜನ್, ರಾಜ್ ಕುಟುಂಬದ ಆಪ್ತರಾದ ಕೆಂಪಯ್ಯ ಮೊದಲಾದವರು ಸಮಾರಂಭದಲ್ಲಿದ್ದರು.