ಪಾರ್ವತಮ್ಮ ರಾಜ್ಕುಮಾರ್ ನಿರ್ಮಾಣದ ಮೊದಲ ಚಿತ್ರ ತ್ರಿಮೂರ್ತಿ. ಅದು ರಾಜ್ ಅವರ ಮಾರುಕಟ್ಟೆ ಮೌಲ್ಯವನ್ನು ಕಡಿಮೆ ತೋರಿಸುತ್ತಿದ್ದ ನಿರ್ಮಾಪಕರು, ವಿತರಕರಿಗೆ ಸಡ್ಡು ಹೊಡೆದು ಪೂರ್ಣಿಮಾ ಕಂಬೈನ್ಸ್ನಲ್ಲಿ ನಿರ್ಮಿಸಿದ ಚಿತ್ರ. ಆದರೆ, ಅದಕ್ಕೂ ಮೊದಲೇ ಚಿತ್ರರಂಗದಲ್ಲಿ ಪಾರ್ವತಮ್ಮನವರ ಹೆಜ್ಜೆ ಗುರುತುಗಳಿವೆ.
1959ರಲ್ಲಿ ನಿರ್ಮಾಣವಾಗಿ 1960ರಲ್ಲಿ ಬಿಡುಗಡೆಯಾದ ಚಿತ್ರವಿದು. ಕನ್ನಡ ಚಿತ್ರರಂಗದ 100ನೇ ವಾಕ್ಚಿತ್ರವೂ ರಣಧೀರ ಕಂಠೀರವ ಚಿತ್ರ. ಕನ್ನಡ ಚಲನಚಿತ್ರ ಕಲಾವಿದರ ಸಂಘದ ಹೆಸರಲ್ಲಿ ನಿರ್ಮಿಸಿದ ಈ ಚಿತ್ರ, ಕನ್ನಡದ ಮೊದಲ ಐತಿಹಾಸಿಕ ಚಿತ್ರವೂ ಹೌದು.
ಈ ಚಿತ್ರದ ನಿರ್ಮಾಣದ ಹೊಣೆ ಹೊತ್ತಿದ್ದವರು ಕನ್ನಡ ಚಲನಚಿತ್ರ ಕಲಾವಿದರ ಸಂಘ. ರಾಜ್ಕುಮಾರ್, ನರಸಿಂಹ ರಾಜು, ಬಾಲಕೃಷ್ಣ, ಲೀಲಾವತಿ ಮತ್ತು ಜಿ.ವಿ. ಅಯ್ಯರ್ ಒಟ್ಟಾಗಿ ಸೇರಿ, ಕನ್ನಡ ಚಿತ್ರರಂಗವನ್ನು ಮದರಾಸ್ನಿಂದ ಹೊರತರಲು ನಿರ್ಮಿಸಿದ್ದ ಚಿತ್ರವದು.
ಹಾಗೆ ನೋಡಿದರೆ, ಈ ಚಿತ್ರದ ಮೂಲಕವೇ ಪಾರ್ವತಮ್ಮ ಮೊದಲ ಬಾರಿಗೆ ನಿರ್ಮಾಪಕಿಯಾದರು. ಆದರೆ, ಹೆಸರು ಹಾಕಿಕೊಳ್ಳಲಿಲ್ಲ. ಆರಂಭದಲ್ಲಿ ವಿತರಕರು ಈ ಚಿತ್ರವನ್ನು ಬಿಡುಗಡೆ ಮಾಡಲು ಕೂಡಾ ಮುಂದೆ ಬರಲಿಲ್ಲ. ಆ ಚಿತ್ರ ಮೈಸೂರಿನ ಭಾರತ್ ಎಂಬ ಒಂದೇ ಒಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಚಿತ್ರ ಯಶಸ್ವಿಯೂ ಆಗಿತ್ತು. ರಮೇಶ್ ಮೂವೀಸ್ ಆ ಚಿತ್ರವನ್ನು ವಿತರಣೆ ಮಾಡಿತ್ತು.