ಪಾರ್ವತಮ್ಮನವರಷ್ಟೇ ಅಲ್ಲ, ರಾಜ್ ಕುಟುಂಬದಲ್ಲಿ ಸಹಾಯ ಹಸ್ತ ಚಾಚುವ ಗುಣವೇ ಇದೆ. ಆದರೆ, ಅದನ್ನು ಹೇಳಿಕೊಳ್ಳುವ ಕೆಲಸವನ್ನು ಅವರು ಮಾಡಿಲ್ಲ. ಎಡಗೈಲಿ ಕೊಟ್ಟಿದ್ದು, ಬಲಗೈಗೆ ಗೊತ್ತಾಗಬಾರದು ಅನ್ನೋದು ರಾಜ್ನೀತಿ. ಅದನ್ನೇ ಪಾಲಿಸಿಕೊಂಡು ಬರುತ್ತಿದೆ ರಾಜ್ ಕುಟುಂಬ.
ಮೈಸೂರಿನಲ್ಲಿ ಶಕ್ತಿಧಾಮ ಅನ್ನೋ ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿ ಕೇಂದ್ರವಿದೆ. ಆ ಸಂಸ್ಥೆ ಜನ್ಮತಾಳಲು ಕಾರಣ ಈಗ ಗೃಹ ಸಚಿವಾಲಯದ ಸಲಹೆಗಾರರಾಗಿರುವ ಆಗ ಮೈಸೂರಿನ ಕಮಿಷನರ್ ಆಗಿದ್ದ ಕೆಂಪಯ್ಯ. ವೇಶ್ಯಾವೃತ್ತಿಗೆ ಸಿಲುಕಿ ನರಳುತ್ತಿದ್ದ ಹೆಣ್ಣು ಮಕ್ಕಳನ್ನು ಪೊಲೀಸರು ಬಂಧಿಸಿದರೂ, ಬ್ರೋಕರ್ಗಳು ಬಂದು ಬಿಡಿಸಿಕೊಂಡು ಹೋಗ್ತಾ ಇದ್ರು. ಅವರಲ್ಲಿ ತುಂಬಾ ಜನಕ್ಕೆ ದುಡಿದು ತಿನ್ನುವ ಬಯಕೆಯೂ ಇತ್ತು. ಆದರೆ, ಬದುಕು ಬಿಡುತ್ತಿರಲಿಲ್ಲ.

ಆಗ ಕೆಂಪಯ್ಯನವರು ಈ ಸಮಸ್ಯೆಗೆ ನೀವೇನಾದರೂ ಪರಿಹಾರ ನೀಡಬಹುದೇ ಎಂದು ಪಾರ್ವತಮ್ಮನವರನ್ನು ಕೇಳಿದರಂತೆ. ರಾಜ್ ಕೂಡಾ ಏನಾದ್ರೂ ಮಾಡು, ಜೊತೆಗೆ ನಾನಿರ್ತೀನಿ ಅಂದರಂತೆ. ಸುತ್ತೂರು ಮಠದವರು ಒಂದೂವರೆ ಎಕರೆ ಜಾಗ ಕೊಡುತ್ತೇನೆ ಎಂದಾಗ ಉದ್ಭವವಾಗಿದ್ದೇ ಶಕ್ತಿಧಾಮ.
ಆ ಸಂಸ್ಥೆ ಶುರುವಾಗಿದ್ದು 1997ರಲ್ಲಿ. ಇಂದಿಗೂ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಆ ಸಂಸ್ಥೆಗೆ ಸಂಗೀತ ಸಂಜೆ ಏರ್ಪಡಿಸಿ 90 ಲಕ್ಷ ರೂ. ಸಂಗ್ರಹಿಸಿದವರು ಪಾರ್ವತಮ್ಮ. ಆ ಶಕ್ತಿಧಾಮದಲ್ಲಿ ಮನೆ ಬಿಟ್ಟು ಬಂದವರು, ಅತ್ಯಾಚಾರಕ್ಕೊಳಗಾದವರು, ಅನಾಥರು, ನಿರಾಶ್ರಿತರು, ಮದುವೆಯಾಗದೇ ಗರ್ಭಿಣಿಯಾದವರು..ಇಂಥವರೇ ನೂರಾರು ಜನರಿದ್ದಾರೆ. ಅವರೆಲ್ಲರಿಗೂ ಊಟ, ಬಟ್ಟೆ, ಆಶ್ರಯ, ವಿದ್ಯೆ ಎಲ್ಲವನ್ನೂ ಒದಗಿಸುತ್ತಿದೆ ಶಕ್ತಿಧಾಮ. ಸದಾನಂದ್ ಎನ್ನುವವರು ಅದೆಲ್ಲದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅನಾಥರಿಗೆ ಆಶ್ರಯವಷ್ಟೇ ಅಲ್ಲ, ಬದುಕಿನ ಭರವಸೆಯೂ ಆಗಿದೆ ಶಕ್ತಿಧಾಮ. ಅದು ಪಾರ್ವತಮ್ಮನವರ ಶಕ್ತಿಧಾಮ.