ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಿತ್ರ ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲೂ ರಿಲೀಸ್ ಆಗುತ್ತಿದೆ. ಚಿತ್ರದ ಪ್ರಮೋಷನ್‍ಗೆ ಮುಂಬೈಗೆ ಹೋದಾಗ ಹಿಂದಿಯಲ್ಲಿ, ಹೈದರಾಬಾದ್‍ಗೆ ಹೋದಾಗ ತೆಲುಗಿನಲ್ಲಿ, ಚೆನ್ನೈಗೆ ಹೋದಾಗ ತಮಿಳಿನಲ್ಲಿಯೇ ಮಾತನಾಡಿದ ಯಶ್, ಅಚ್ಚರಿ ಹುಟ್ಟಿಸಿದ್ದರು. ಏಕೆಂದರೆ, ಆರಂಭದ ದಿನಗಳಲ್ಲಿ ಯಶ್‍ಗೆ ಬೇರೆ ಭಾಷೆಗಳು ಬರುತ್ತಿರಲಿಲ್ಲ ಎನ್ನುವುದು ಗುಟ್ಟೇನಲ್ಲ. ಹೀಗಿದ್ದ ಯಶ್, ಇಷ್ಟೂ ಭಾಷೆಗಳನ್ನು ಕಲಿತಿದ್ದು ಹೇಗೆ.. ಅದು ಅನಿವಾರ್ಯತೆ ಮತ್ತು ಉತ್ಸಾಹ.
ನಮ್ಮ ಚಿತ್ರವನ್ನು ಎಲ್ಲರಿಗೂ ತಲುಪಿಸಬೇಕು. ಎಲ್ಲರಿಗೂ ರೀಚ್ ಮಾಡಿಸಬೇಕು. ಅದು ಆಗಬೇಕೆಂದರೆ, ನಾವು ಎಲ್ಲಿಗೆ ಹೋಗುತ್ತೇವೆಯೋ ಅಲ್ಲಿ.. ಅವರ ಭಾಷೆಯನ್ನೇ ಮಾತನಾಡಬೇಕು. ಆಗ ಅಲ್ಲಿನ ಜನರಿಗೆ ನಾವು ರೀಚ್ ಆಗುತ್ತೇವೆ. ಹೀಗಾಗಿ ನಾನು ಪ್ರಯತ್ನ ಪಟ್ಟೆ. ಆದರೆ, ಮಾತನಾಡಿದಾಗ.. ನಾನು ಇಷ್ಟು ಚೆನ್ನಾಗಿ ಮಾತನಾಡಿದೆನಾ ಎಂದು ನನಗೇ ಅಚ್ಚರಿಯಾಗಿತ್ತು ಅಂತಾರೆ ಯಶ್.
ಯಶ್ ಅವರ ಎದುರು ಯಾರಾದರೂ ಬೇರೆ ಭಾಷೆ ಮಾತನಾಡಿದರೆ, ಅವರಿಗೆ ಕನ್ನಡ ಗೊತ್ತಿದೆ ಎನ್ನುವುದು ಕೂಡಾ ತಿಳಿದಿದ್ದರೆ.. ಯಶ್ ನೇರವಾಗಿ ಕನ್ನಡದಲ್ಲಿಯೇ ಮಾತನಾಡುವವರು. ನಾವೂ ರಾಜ್ಯದಲ್ಲಿ ಯಾರಾದರೂ ಬೇರೆ ಭಾಷೆಯಲ್ಲಿ ಮಾತನಾಡುತ್ತಿದ್ದರೆ, ಕರ್ನಾಟಕದಲ್ಲಿದ್ದೀರಿ, ಕನ್ನಡ ಮಾತನಾಡಿ ಎಂದು ಮುಲಾಜಿಲ್ಲದೇ ಹೇಳುತ್ತೇವೆ. ಹಾಗೆ ಹೇಳುವವರು ಬೇರೆ ರಾಜ್ಯಕ್ಕೆ ಹೋದಾಗ.. ಅವರ ಭಾಷೆಗೆ ಗೌರವ ಕೊಡಬೇಕಲ್ಲವೆ ಅಂತಾರೆ ಯಶ್.
ಇದು, ಯಶ್ ಅವರದ್ದಷ್ಟೇ ಅಲ್ಲ, ಕೋಟ್ಯಂತರ ಕನ್ನಡಿಗ ಸ್ವಭಾವವೂ ಹೌದು. ಇದು ಎಷ್ಟೋ ವರ್ಷಗಳಿಂದ ಬೆಂಗಳೂರಿನಲ್ಲಿದ್ದು, ಕನ್ನಡವನ್ನು ಕಲಿಯದೇ ಇರುವವರಿಗೂ ಅರ್ಥವಾಗಬೇಕು. ಅಷ್ಟೆ.