ಹೊಂಬಾಳೆ ಫಿಲಂಸ್‍ನ ಭಾರಿ ಬಜೆಟ್‍ನ ಸಿನಿಮಾ ಕೆಜಿಎಫ್. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರಕ್ಕೆ ಯಶ್ ಹೀರೋ. ಹೆಚ್ಚೂ ಕಡಿಮೆ 2 ವರ್ಷದಿಂದ ಅದ್ಧೂರಿಯಾಗಿ ಚಿತ್ರೀಕರಣಗೊಳ್ಳುತ್ತಿರುವ ಕೆಜಿಎಫ್‍ಗೆ ಬಳುಕುವ ಬಳ್ಳಿ ಮಿಂಚಾಗಿ ಎಂಟ್ರಿ ಕೊಟ್ಟಿರೋದು ಮಿಲ್ಕಿಬ್ಯೂಟಿ ತಮನ್ನಾ.
ಚಿತ್ರದಲ್ಲಿನ ಒಂದು ಸ್ಪೆಷಲ್ ಸಾಂಗ್‍ಗೆ ಕಾಜಲ್ ಅಗರ್‍ವಾಲ್, ತಮನ್ನಾ, ಲಕ್ಷ್ಮೀ ರೈ.. ಮೊದಲಾದವರ ಹೆಸರು ಕೇಳಿಬಂದಿತ್ತು. ಈಗ ಅಧಿಕೃತವಾಗಿ ತಮನ್ನಾ ಎಂದು ಘೋಷಿಸಿದೆ ಕೆಜಿಎಫ್ ಟೀಂ. ತಮನ್ನಾಗೆ ಕನ್ನಡದಲ್ಲಿದು 2ನೇ ಪ್ರಯತ್ನ. ಈ ಹಿಂದೆ ಜಾಗ್ವಾರ್‍ನಲ್ಲೊಂದು ಐಟಂ ಸಾಂಗ್‍ಗೆ ಹೆಜ್ಜೆ ಹಾಕಿದ್ದ ತಮನ್ನಾ, ನಂತರ ಪುನೀತ್ ರಾಜ್‍ಕುಮಾರ್ ಜೊತೆ ಜಾಹೀರಾತಿನಲ್ಲಿ ಮಿಂಚಿದ್ದರು. ಈಗ.. ಕೆಜಿಎಫ್‍ನಲ್ಲಿ ಬಳುಕುವ ಬಳ್ಳಿ ಮಿಂಚಾಗಿ ಬರುತ್ತಿದ್ದಾರೆ.
ಕೆಜಿಎಫ್‍ನಲ್ಲಿ ಎಲ್.ಆರ್.ಈಶ್ವರಿ ಕಂಠದಲ್ಲಿ ಮೋಡಿ ಮಾಡಿದ್ದ ಜೋಕೆ.. ನಾನು ಬಳ್ಳಿಯ ಮಿಂಚು.. ಕಣ್ಣು ಕತ್ತಿಯ ಅಂಚು.. ಹಾಡನ್ನು ಮರುಸೃಷ್ಟಿಸಲಾಗಿದೆ. ಡಾ.ರಾಜ್‍ಕುಮಾರ್ ಅಭಿನಯದ ಪರೋಪಕಾರಿ ಚಿತ್ರದ ಹಾಡದು. ಆ ಹಾಡನ್ನು ಪ್ರಶಾಂತ್ ನೀಲ್ ಕೆಜಿಎಫ್‍ನಲ್ಲಿ ಬಳಸಿಕೊಳ್ಳುತ್ತಿದ್ದಾರೆ.
ಹಾಡನ್ನು 3 ದಿನಗಳ ಕಾಲ ಚಿತ್ರೀಕರಿಸಲಾಗುತ್ತಿದೆ. ಇಂದಿನಿಂದ (ಆಗಸ್ಟ್ 7) ಗುರುವಾರದವರೆಗೆ ಹಾಡಿನ ಚಿತ್ರೀಕರಣ ನಡೆಯಲಿದೆ. ಯಶ್ ಮತ್ತು ತಮನ್ನಾ ಕಾಂಬಿನೇಷನ್‍ನಲ್ಲೇ ಹಾಡು ಚಿತ್ರೀಕರಣಗೊಳ್ಳಲಿದೆ. ಈ ಹಾಡಿನೊಂದಿಗೆ ಕೆಜಿಎಫ್ ಚಿತ್ರೀಕರಣವೂ ಮುಗಿಯಲಿದೆಯಂತೆ.
ಅದ್ಸರಿ ಸಾರ್.. ಹಾಡು ಯಾವ ಸನ್ನಿವೇಶದಲ್ಲಿ ಬರುತ್ತೆ ಅಂದ್ರೆ ಪ್ರಶಾಂತ್ ನೀಲ್ ಹೇಳೋದು ಇಷ್ಟು. ಇದೊಂದು ಕ್ಲಬ್ ಸಾಂಗ್. ಅಲ್ಲೊಂದು ದೃಶ್ಯದಲ್ಲಿ ಹೀರೋ ಕಾಣಿಸಿಕೊಳ್ತಾನೆ. ಹೀರೋಯಿನ್ ಕೂಡಾ ಇರುತ್ತಾಳೆ. ಅಲ್ಲಿ ಬರೋ ಹಾಡು ಇದು. ಯಾಕೆ ಅನ್ನೋದನ್ನ ಚಿತ್ರ ರಿಲೀಸ್ ಆದಾಗ.. ಚಿತ್ರಮಂದಿರದಲ್ಲೇ ನೋಡಿ' ಅಂತಾರೆ.
ಚಿತ್ರದ ಬಹುತೇಕ ಕೆಲಸ ಪೂರ್ಣಗೊಂಡಿದೆ. ಈ ಹಾಡಿನ ರೈಟ್ಸ್ ತೆಗೆದುಕೊಳ್ಳೋದು ಮತ್ತು ನಟಿಯ ಆಯ್ಕೆ ಸ್ವಲ್ಪ ತಡವಾಯಿತು. ಸೆಪ್ಟೆಂಬರ್‍ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದಿದ್ದಾರೆ ಹೊಂಬಾಳೆ ಫಿಲಂಸ್‍ನ ಕಾರ್ತಿಕ್ ಗೌಡ. ಅಲ್ಲಿಗೆ.. ಸೆಪ್ಟೆಂಬರ್‍ನಲ್ಲಿ ಕೆಜಿಎಫ್, ಕನ್ನಡಿಗರ ಹೃದಯದ ಗಣಿಗೆ ಇಳಿಯಲಿದೆ ಅನ್ನೋದು ಗ್ಯಾರಂಟಿಯಾಯ್ತು.