ಅರ್ಜುನ್ ಸರ್ಜಾ ವಿರುದ್ಧ ಕೇಳಿ ಬಂದಿರೋ ಆರೋಪಗಳಿಗೆ ಆರಂಭದ ದಿನದಿಂದಲೂ ಕೆಂಡಾಮಂಡಲವಾಗಿರುವ ನಟ ಧ್ರುವ ಸರ್ಜಾ, ಶೃತಿ ಹರಿಹರನ್ ಬೆಂಬಲಕ್ಕೆ ನಿಂತಿರುವ ಚೇತನ್‍ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾಯಿ, ನರಿ, ಕ್ರಿಮಿ, ಕೀಟ ಹೇಳಿದ್ದಕ್ಕೆಲ್ಲ ಡೋಂಟ್‍ಕೇರ್. ನನ್ನ ಮಾವ ಏನು ಅನ್ನೋದು ನನಗೆ ಗೊತ್ತು ಎಂದಿದ್ದಾರೆ ಧ್ರುವ ಸರ್ಜಾ.
ಹಾಗಾದರೆ, ನಾವು ನಾಯಿ, ನರಿ, ಕ್ರಿಮಿ, ಕೀಟಗಳಾ ಎಂದು ಪ್ರಶ್ನೆ ಹಾಕಿದ್ದಾರೆ ಚೇತನ್. ಅಲ್ಲದೆ ಏನು..? ನಿಮ್ಮ ಬಳಿ ಸತ್ಯ ಇದ್ದರೆ, ಸಾಕ್ಷಿ ಇದ್ದರೆ, ಈ ರೀತಿ ಪಬ್ಲಿಸಿಟಿ ಮಾಡ್ಕೊಂಡು ಇರುತ್ತಿರಲಿಲ್ಲ. ನಿಮ್ಮ ಹಿಂದೆ ಯಾರ್ಯಾರೆಲ್ಲ ಇದ್ದಾರೆ ಎನ್ನುವುದು ನನಗೆ ಗೊತ್ತು ಎಂದಿದ್ದಾರೆ ಧ್ರುವ ಸರ್ಜಾ.
ಕಾನೂನಿನ ವ್ಯಾಪ್ತಿ ಮೀರಿ ಮಾತನಾಡುತ್ತಿದ್ದೀರಿ ಎಂಬ ಚೇತನ್ ಮಾತಿಗೆ, ನಿಮ್ಮ ಬಗ್ಗೆ ಮಾತ್ರ ಕಾನೂನು ರೀತಿ ನೋಡಬೇಕು ಎನ್ನುವವರು ಬೇರೆಯವರ ಬಗ್ಗೆಯೂ ಕಾನೂನಿನ ರೀತಿಯಲ್ಲೇ ನೋಡಬೇಕಿತ್ತಲ್ವಾ..? ಈಗ ನಿಮ್ಮ ವಿರುದ್ಧ ಯಾರೋ ಒಬ್ಬ ಮಹಿಳೆ ಆರೋಪ ಮಾಡಿದ್ರೆ, ನೀವು ನಂಬ್ತೀರಾ.. ಎನ್ನುವುದು ಧ್ರುವ ಸರ್ಜಾ ಪ್ರಶ್ನೆ.
ನಿಮ್ಮ ಫೈರ್ ಸಂಘಟನೆಗೆ ಶೃತಿ ಹರಿಹರನ್ 8 ತಿಂಗಳ ಹಿಂದೆಯೇ ಸದಸ್ಯೆಯಾಗಿದ್ದಾರೆ. ಹಾಗಿದ್ದರೆ 8 ತಿಂಗಳಿಂದ ಏನ್ ಮಾಡ್ತಾ ಇದ್ರಿ..? ನಿಮ್ಮ ಸಂಸ್ಥೆ ಕೂಡಾ ಕಾನೂನಿನ ಅಡಿಯಲ್ಲೇ ಬರುತ್ತೆ. ಆ ಸಂಸ್ಥೆಯಲ್ಲಿ ಹೆಣ್ಣು ಮಕ್ಕಳಿದ್ದಾರೆ. ಆ ಕಾರಣಕ್ಕಾಗಿ ಗೌರವ ನೀಡುತ್ತಿದ್ದೇನೆ. ಇಲ್ಲದೆ ಇರುವ ವಿವಾದ ಸೃಷ್ಟಿ ಮಾಡುತ್ತಿದ್ದೀರಿ ಎನ್ನುವುದು ಇಡೀ ಕರ್ನಾಟಕಕ್ಕೇ ಗೊತ್ತಿದೆ ಎಂದಿದ್ದಾರೆ ಧ್ರುವ ಸರ್ಜಾ.
ಸಾ.ರಾ.ಗೋವಿಂದು ಕುರಿತು ಚೇತನ್ ಮಾಡಿರುವ ಟೀಕೆಗೆ, ಅವರ ವಿರುದ್ಧ ಟೀಕೆ ನಿನಗ್ಯಾವ ಅರ್ಹತೆ ಇದೆ ಎಂದು ಕೆಂಡಕಾರಿದ್ದಾರೆ ಧ್ರುವ ಸರ್ಜಾ.