3 ವರ್ಷಗಳ ನಂತರ ಕಚಗುಳಿ ಇಡಲು ಮತ್ತೆ ಬರುತ್ತಿದ್ದಾರೆ ಕೋಮಲ್. 2016ರಲ್ಲಿ ತೆರೆ ಕಂಡಿದ್ದ ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ ಚಿತ್ರವೇ ಕೊನೆ, ನಂತರ ಕೋಮಲ್ ಅವರ ಯಾವುದೇ ಸಿನಿಮಾ ತೆರೆ ಕಂಡಿರಲಿಲ್ಲ. ತೆರೆ ಮೇಲೆ ಇದ್ದಷ್ಟೂ ಹೊತ್ತು ನಗೆಬುಗ್ಗೆ ಸೃಷ್ಟಿಸುತ್ತಿದ್ದ ಕೋಮಲ್, ಈಗ ಕಮ್‍ಬ್ಯಾಕ್ ಮಾಡುತ್ತಿದ್ದಾರೆ. 3 ವರ್ಷಗಳ ಹಿಂದೆ ತೆರೆ ಕಂಡಿದ್ದ ಪುಟ್ಟಣ್ಣ ಸಿನಿಮಾ, ಯಶಸ್ವಿ 50 ದಿನಗಳ ಪ್ರದರ್ಶನ ಕಂಡಿತ್ತು. ಪ್ರಿಯಾಮಣಿ ನಾಯಕಿಯಾಗಿದ್ದ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದಾದ ಮೇಲೆ ಕೋಮಲ್ ಕೆಂಪೇಗೌಡ-2 ನಲ್ಲಿ ನಟಿಸಿದ್ದರು. ಚಿತ್ರದ ಟೀಸರ್ ಕೂಡಾ ಹೊರಬಂದಿತ್ತು. ಆದರೆ, ಸಡನ್ ಬ್ರೇಕ್ ತೆಗೆದುಕೊಂಡಿದ್ದ ಸಿನಿಮಾ, ಈಗ ರಿಲೀಸ್‍ಗೆ ರೆಡಿಯಾಗುತ್ತಿದೆ.
ಕೆಂಪೇಗೌಡ ಚಿತ್ರದ ಹೀರೋ ಸುದೀಪ್. ನಿರ್ದೇಶನವೂ ಅವರದ್ದೇ. ಆದರೆ, ಕೆಂಪೇಗೌಡ-2 ಚಿತ್ರದ ಹೀರೋ ಕೋಮಲ್. ನಿರ್ದೇಶಕರು ಬೇರಾರೋ ಅಲ್ಲ, ಕೆಂಪೇಗೌಡ ನಿರ್ಮಾಪಕರಾಗಿದ್ದ ಶಂಕರೇಗೌಡ.
ಚಿತ್ರಕ್ಕಾಗಿ ಕೋಮಲ್ ಅವರು ದೇಹವನ್ನು ಹುರಿಗೊಳಿಸಿದ್ದಾರೆ. ದಪ್ಪಗೆ ಗುಂಡು ಗುಂಡಾಗಿ ಕಾಣುತ್ತಿದ್ದ ಕೋಮಲ್, ಖಡಕ್ ಆಫೀಸರ್ ಗೆಟಪ್‍ಗೆ ಫಿಟ್ ಆಗುವಂತೆ ಸ್ಲಿಮ್ ಆಗಿದ್ದಾರೆ. ಇದಕ್ಕಾಗಿಯೇ ಚಿತ್ರ ತಡವಾಯಿತು ಅನ್ನೋದು ಚಿತ್ರತಂಡದ ಮಾತು.
ಚಿತ್ರದ ಟ್ರೇಲರ್, ಹಾಡುಗಳ ಬಿಡುಗಡೆಗೆ ಪ್ಲಾನ್ ಮಾಡುತ್ತಿರುವ ಚಿತ್ರತಂಡ, ಸಿನಿಮಾವನ್ನು ಮೇ ತಿಂಗಳಲ್ಲಿ ರಿಲೀಸ್ ಮಾಡಲು ಸಿದ್ಧಗೊಳ್ಳುತ್ತಿದೆ.