10 ವರ್ಷಗಳ ಹಿಂದೆ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಅನ್ನೋ ಸಿನಿಮಾ ಮೂಲಕ ಸಂಚಲನ ಹುಟ್ಟುಹಾಕಿದ್ದ ಸಿಂಪಲ್ ಸುನಿ, ಇದೀಗ ಒಂದು ಸರಳ ಪ್ರೇಮಕಥೆ ಹೇಳೋಕೆ ಬರುತ್ತಿದ್ದಾರೆ. ಅರೆ.. ಇದು ಸಿಂಪಲ್ಲಾಗ್ ಒಂದ್ ಸ್ಟೋರಿಯ ಕನ್ನಡ ಅನುವಾದ ಅಲ್ಲವಾ.. ಎನ್ನಬೇಡಿ ಮತ್ತೆ.. ಆ ಚಿತ್ರಕ್ಕೆ ಮೊದಲು ಇದೇ ಟೈಟಲ್ ಎಂದುಕೊಂಡಿದ್ದರಂತೆ. ಚಿತ್ರದ ಟೈಟಲ್ ಬದಲಾಯಿತು. ಆದರೆ ಟೈಟಲ್ ಮೇಲಿನ ಸುನಿಯವರ ಪ್ರೀತಿ ಬದಲಾಗಲಿಲ್ಲ. ಇದೀಗ ಅದು ನೆರವೇರಿದೆ.
ವಿನಯ್ ರಾಜ್ಕುಮಾರ್ ಮತ್ತು ನಿರ್ದೇಶಕ ಸಿಂಪಲ್ ಸುನಿ ಕಾಂಬಿನೇಷನ್ನ ಹೊಸ ಸಿನಿಮಾಕ್ಕೆ 'ಒಂದು ಸರಳ ಪ್ರೇಮಕಥೆ' ಎಂದು ಟೈಟಲ್ ಇಡಲಾಗಿದೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ನಾಯಕಿಯರಾಗಿ ಸ್ವಾತಿಷ್ಠ ಕೃಷ್ಣನ್ ಮತ್ತು 'ರಾಧಾ ಕೃಷ್ಣ' ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ನಟಿಸುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ, ನಿರ್ದೇಶಕ 'ಸಿಂಪಲ್' ಸುನಿ ಈಗಾಗಲೇ ಶೇ. 50ರಷ್ಟು ಚಿತ್ರೀಕರಣವನ್ನು ಮುಗಿಸಿದ್ದಾರೆ. ಸದ್ಯ 2ನೇ ಹಂತದ ಚಿತ್ರೀಕರಣ ಮೈಸೂರಿನಲ್ಲಿ ಬಿರುಸಿನಿಂದ ಸಾಗಿದೆ.
ಜನವರಿ 23ರಂದು ಸಿನಿಮಾಗೆ ಮುಹೂರ್ತ ನಡೆದಿತ್ತು. ಬೆಂಗಳೂರು, ಚಿಕ್ಕಪೇಟೆಯಲ್ಲಿ ಮೊದಲ ಹಂತದ ಶೂಟಿಂಗ್ ಮುಗಿಸಿದ್ದು, ಮೈಸೂರಿನಲ್ಲಿ ಈಗ ಕೊನೆಯ ಹಂತದ ಶೂಟಿಂಗ್ ಆರಂಭಿಸಿದ್ದೇವೆ..' ಎಂದು ಮಾಹಿತಿ ತಿಳಿಸಿದ್ದಾರೆ ಸುನಿ.
ವಿನಯ್ ರಾಜಕುಮಾರ್ ಮ್ಯೂಸಿಕ್ ಡೈರೆಕ್ಟರ್ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಪಾತ್ರದ ಹೆಸರು ಅತಿಶಯ್. ಸಿಂಪಲ್ ಸುನಿ ಅವರ ಡೈರೆಕ್ಷನ್ ಸ್ಟೈಲ್ ನನಗೆ ತುಂಬಾ ಇಷ್ಟ. ಈ ಸಿನಿಮಾದ ಕಥೆಯನ್ನು ಸುನಿ ನನಗೆ ಹೇಳಲು ಬಂದಾಗ, ಅವರ ನಿರ್ದೇಶನದಲ್ಲಿ ಕೆಲಸ ಮಾಡುತ್ತಿದ್ದೇನೆ ಅನ್ನೋದೇ ಖುಷಿ ನೀಡಿತ್ತು ಎಂದು ಖುಷಿ ಹಂಚಿಕೊಂಡಿದ್ದಾರೆ ವಿನಯ್. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವುದು ತುಂಬಾ ಖುಷಿ ಕೊಟ್ಟಿದೆ. ಕನ್ನಡ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು ಎಂದು ಮಲ್ಲಿಕಾ ಸಿಂಗ್ ಮೊದಲ ಕನ್ನಡ ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡರು.
ಚಿತ್ರದಲ್ಲಿ ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ನಟಿಸುತ್ತಿದ್ದಾರೆ. ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ನೀಡುತ್ತಿದ್ದು, ಛಾಯಾಗ್ರಹಣವನ್ನು ಕಾರ್ತಿಕ್ ಮಾಡುತ್ತಿದ್ದಾರೆ.
ಅಂದಹಾಗೆ ಇದು ಪುನೀತ್ ರಾಜ್ ಕುಮಾರ್ ಇಷ್ಟಪಟ್ಟಿದ್ದ ಕಥೆ. 2 ವರ್ಷಗಳ ಹಿಂದೆ ಕತೆಯನ್ನು ಪುನೀತ್ ರಾಜ್ಕುಮಾರ್ ಇಷ್ಟಪಟ್ಟಿದ್ದರು. ಮೊದಲು ನಾಲ್ಕು ಸಾಲಲ್ಲಿ ಕತೆ ಹೇಳಿದ್ದೆ ಆಗ ಅಪ್ಪು ಸರ್ ಒಪ್ಪಿದ್ದರು. ಕತೆಯನ್ನು ಡೆವೆಲಪ್ ಮಾಡಬೇಕಿತ್ತು. ಆದರೆ ಅಷ್ಟರಲ್ಲಿ ದುರ್ಘಟನೆ ಸಂಭವಿಸಿತು. ಈಗ ಅದೇ ಕತೆಯಲ್ಲಿ ವಿನಯ್ ರಾಜ್ಕುಮಾರ್ ನಟಿಸುತ್ತಿದ್ದಾರೆ ಎಂದು ನಿರ್ದೇಶಕ ಸುನಿ ತಿಳಿಸಿದ್ದಾರೆ. ವಿನಯ್ ಅವರಿಗಾಗಿ ಚಿತ್ರದ ಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ ಸುನಿ. ಸಿಂಪಲ್ ಸುನಿ.