ಗ್ರ್ಯಾಮಿ ಪ್ರಶಸ್ತಿಗೆ ಸಂಗೀತ ಲೋಕದಲ್ಲೊಂದು ವಿಶೇಷ ಗೌರವ ಇದೆ. ಆ ಪ್ರಶಸ್ತಿಗಾಗಿಯೇ ಸಾವಿರಾರು ಸಂಗೀತಗಾರರು ಹಗಲೂ ರಾತ್ರಿ ತಮ್ಮ ಪ್ರತಿಭೆಯನ್ನೆಲ್ಲ ಧಾರೆಯೆರೆದು ಶ್ರಮಿಸುತ್ತಾರೆ. ಒಮ್ಮೆ ಆ ಪ್ರಶಸ್ತಿ ಸಿಕ್ಕರೆ ಜಗತ್ತನ್ನೇ ಗೆದ್ದಂತೆ ಸಂಭ್ರಮಿಸುತ್ತಾರೆ. ಅಂತಾದ್ದರಲ್ಲಿ ಕನ್ನಡದ ರಿಕ್ಕಿ ಕೇಜ್ ಈ ಗ್ರ್ಯಾಮಿ ಪ್ರಶಸ್ತಿಯನ್ನು 2ನೇ ಬಾರಿ ಗೆದ್ದುಕೊಂಡಿದ್ದಾರೆ.
2015ರಲ್ಲಿ ವಿಂಡ್ಸ್ ಆಫ್ ಸಂಸಾರ ಆಲ್ಬಂಗೆ ಪ್ರಶಸ್ತಿ ಪಡೆದಿದ್ದ ರಿಕ್ಕಿ ಕೇಜ್, ಈ ಬಾರಿ ಡಿವೈನ್ ಟೈಡ್ಸ್ ಆಲ್ಬಂಗೆ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದಾರೆ. ಈ ಆಲ್ಬಂನಲ್ಲಿ ಬರೋ ಹಿಮಾಲಯಾಸ್ ಗೀತೆಯಲ್ಲಿ ರಿಕ್ಕಿ ಕೇಜ್ ಅವರೊಂದಿಗೆ ವಾರಿಜಾಶ್ರೀ ವೇಣುಗೋಪಾಲನ್ ಗಾಯಕಿಯಾಗಿ, ತಾಳವಾದ್ಯದಲ್ಲಿ ಅರುಣ್ ಹಾಗೂ ಸಿತಾರ್‍ನಲ್ಲಿ ಸುಮಾರಾಣಿ ಕೆಲಸ ಮಾಡಿದ್ದಾರೆ. ಇವರೆಲ್ಲರೂ ಕನ್ನಡದ ಪ್ರತಿಭೆಗಳು ಎನ್ನುವುದು ವಿಶೇಷ.
ಬ್ರಿಟಿಷ್ ಡ್ರಮ್ಮರ್ ಸ್ಟೆವಾರ್ಟ್ ಅವರೊಂದಿಗೆ ಈ ಪ್ರಶಸ್ತಿ ಹಂಚಿಕೊಂಡಿದ್ದಾರೆ ರಿಕಿ ಕೇಜ್. ರಿಕಿ ಕೇಜ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಖ್ಯಾತನಾಮರು ಅಭಿನಂದನೆ ಸಲ್ಲಿಸಿದ್ದಾರೆ.